ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂರು ರಾಜ್ಯಗಳ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬುಧವಾರ ಬಿಡುಗಡೆಗೊಳಿಸಿದ್ದು, ಕರ್ನಾಟಕದಿಂದ ಮೂವರು ಸ್ಪರ್ಧಿಸಲಿದ್ದಾರೆ.
ಕರ್ನಾಟಕ, ತೆಲಂಗಾಣ ಹಾಗೂ ಮಧ್ಯಪ್ರದೇಶದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು, ಕರ್ನಾಟಕದಿಂದ ಕಾಂಗ್ರೆಸ್‌ನ ಹಿರಿಯ ಮುಖಂಡ ಅಜಯ್ ಮಾಕೆನ್, ಡಾ. ಸೈಯ್ಯದ್ ನಾಸೀರ್ ಹುಸೇನ್ ಹಾಗೂ ಜಿ.ಸಿ. ಚಂದ್ರಶೇಖರ್ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ತೆಲಂಗಾಣದಿಂದ ರೇಣುಕಾ ಚೌಧರಿ, ಎಂ ಅನಿಲ್ ಕುಮಾರ್ ಯಾದವ್ ಅಭ್ಯರ್ಥಿಯಾದರೆ, ಮಧ್ಯಪ್ರದೇಶದಿಂದ ಅಶೋಕ್ ಸಿಂಗ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ರಾಜ್ಯಸಭೆಗೆ ಕರ್ನಾಟದ ನಾಲ್ಕು ಸ್ಥಾನಗಳಿಗೆ ಇದೇ ಬರುವ ಗುರುವಾರ (ಫೆ.15) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಬಾಗಲಕೋಟೆ ಮೂಲದ ಸಂಘಪರಿವಾರದ ನಾರಾಯಣ ಬಾಂಡಗೆ ಟಿಕೆಟ್ ಘೋಷಿಸಿದೆ. ಆ ಮೂಲಕ, ರಾಜ್ಯ ಬಿಜೆಪಿ ಘಟಕಕ್ಕೆ ಸುಳಿವೇ ಇಲ್ಲದಂತೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತ್ತು.
ಕಾಂಗ್ರೆಸ್‌ನಿಂದ ಮೂವರು, ಬಿಜೆಪಿಯಿಂದ ಒಬ್ಬರು ನಿರಾಯಾಸವಾಗಿ ಈಗಿನ ಸಂಖ್ಯಾಬಲದ ಆಧಾರದ ಮೇಲೆ ಗೆಲ್ಲಬಹುದಾಗಿದೆ. ಆದರೆ, ರಾಜ್ಯಸಭಾ ಚುನಾವಣೆಯಲ್ಲೂ ಅಡ್ಡ ಮತದಾನ ನಡೆಯುವ ಸಾಧ್ಯತೆ ಇರುತ್ತದೆ.