Homeಕರ್ನಾಟಕಇನ್ಫೋಸಿಸ್ ಸಂಸ್ಥೆಗೆ ನೀಡಿದ ಜಮೀನು ವಾಪಸ್ ಪಡೆಯಲು ಸರ್ಕಾರಕ್ಕೆ ಅರವಿಂದ್ ಬೆಲ್ಲದ್ ಒತ್ತಾಯ

ಇನ್ಫೋಸಿಸ್ ಸಂಸ್ಥೆಗೆ ನೀಡಿದ ಜಮೀನು ವಾಪಸ್ ಪಡೆಯಲು ಸರ್ಕಾರಕ್ಕೆ ಅರವಿಂದ್ ಬೆಲ್ಲದ್ ಒತ್ತಾಯ

“ಬೆಂಗಳೂರು ಮೂಲದ ಪ್ರತಿಷ್ಠಿತ ಐಟಿ ಕಂಪನಿ ಇನ್ಫೋಸಿಸ್ ಟೆಕ್ನಾಲಜೀಸ್ ಸಂಸ್ಥೆಗೆ ಹುಬ್ಬಳ್ಳಿ – ಧಾರವಾಡದಲ್ಲಿ ನೀಡಿರುವ ಜಮೀನನ್ನು ಹಿಂದಕ್ಕೆ ಪಡೆಯಬೇಕು” ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಬಜೆಟ್‌ ಅಧಿವೇಶನದ ಮೂರನೇ ದಿನದ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ” ನನ್ನ ಕ್ಷೇತ್ರದಲ್ಲಿ (ಹುಬ್ಬಳ್ಳಿ – ಧಾರವಾಡ ಪಶ್ಚಿಮ) ಕೈಗಾರಿಕಾ ಕಾರಿಡಾರ್ ಇದೆ. ಇನ್ಫೋಸಿಸ್‌ನವರು 58 ಎಕರೆ ಜಾಗ ತೆಗೆದುಕೊಂಡಿದ್ದಾರೆ. ಆದರೆ, ನನ್ನ ಕ್ಷೇತ್ರದ ಒಬ್ಬರಿಗೂ ಅಲ್ಲಿ ನೌಕರಿ ನೀಡಲಿಲ್ಲ” ಎಂದು ಆರೋಪಿಸಿದ್ದಾರೆ.

“ಎಕರೆಗೆ ಒಂದೂವರೆ ಕೋಟಿ ರೂಪಾಯಿ ಬೆಲೆಬಾಳುವ ಜಮೀನನ್ನು ರೈತರಿಂದ 35 ಲಕ್ಷ ರೂಪಾಯಿಗೆ ಇನ್ಫೋಸಿಸ್‌ಗೆ ಕೊಡಲಾಗಿದೆ. ಆದರೆ, ಕೈಗಾರಿಕೆಗೆ ಕೊಟ್ಟಿರುವ ಜಮೀನಿನಲ್ಲಿ ಅವರು ತೋಟ ಮಾಡಿದ್ದಾರೆ” ಎಂದು ದೂರಿದರು.

“ಇನ್ಫೋಸಿಸ್ ಅಂತಹ ಕಂಪೆನಿ ನಮ್ಮ ನಗರಕ್ಕೆ ಬಂದರೆ ನಮ್ಮ ಮಕ್ಕಳಿಗೆ ಅಲ್ಲಿ ಉದ್ಯೋಗ ಸಿಗುತ್ತದೆ ಎಂದು ರೈತರಿಗೆ ವಿನಂತಿ ಮಾಡಿಕೊಂಡು ಜಮೀನನ್ನು ಮಾರಾಟ ಮಾಡಲಾಗಿದೆ. ಆ ರೈತರನ್ನು ನಾನೀಗ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಹ ಪರಿಸ್ಥಿತಿಯಲ್ಲಿ ನಾನಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ರೈತರು ಈ ಅನ್ಯಾಯ ಖಂಡಿಸಿ ನ್ಯಾಯಾಲಯದ ಮೊರೆ ಹೋಗುವುದನ್ನು ನಾನು ತಪ್ಪಿಸಿದ್ದೇನೆ. ಕೂಡಲೇ ರಾಜ್ಯ ಸರ್ಕಾರ ಇನ್ಫೋಸಿಸ್ ಸಂಸ್ಥೆಗೆ ನೀಡಿರುವ ಜಮೀನನ್ನು ಹಿಂದಕ್ಕೆ ಪಡೆಯಬೇಕು” ಎಂದು ಒತ್ತಾಯಿಸಿದರು.

“ಹುಬ್ಬಳ್ಳಿ ನಿಲ್ದಾಣ ಪ್ರಾಧಿಕಾರದವರು ಕೂಡ ಇದೇ ರೀತಿ ಅನ್ಯಾಯ ಮಾಡಿದ್ದಾರೆ. ಒಂದೇ ಒಂದು ಉದ್ಯೋಗ ನೀಡದೇ ನಮ್ಮ ನೆಲಕ್ಕೆ ದ್ರೋಹ ಬಗೆದಿದ್ದಾರೆ. ಇವರಿಗೆಲ್ಲಾ ದಂಡ ಬಿದ್ದರೇನೇ ಬುದ್ದಿ ಬರುವುದು” ಬೆಲ್ಲದ್ ಅಭಿಪ್ರಾಯ ಪಟ್ಟರು.

ಅರವಿಂದ್‌ ಬೆಲ್ಲದ ಅವರ ಪ್ರಶ್ನೆಗೆ ಉತ್ತರಿಸಿದ ಐಟಿ ಸಚಿವ ಪ್ರಿಯಾಂಕ್ ಖರ್ಗೆ, “ಇನ್ಫೋಸಿಸ್ ಆಗಲಿ ಅಥವಾ ವಿಮಾನ ನಿಲ್ದಾಣ ಪ್ರಾಧಿಕಾರವೇ ಆಗಲಿ ಸ್ಥಳೀಯರಿಗೆ ಅವರವರ ವಿದ್ಯಾರ್ಹತೆಗೆ ಅನುಗುಣವಾಗಿ ಕಡ್ಡಾಯ ಕೆಲಸ ನೀಡಬೇಕಾಗುತ್ತದೆ. ಆ ರೀತಿ ಕಾನೂನಿನಲ್ಲೇ ಸ್ಪಷ್ಟನೆ ನೀಡಲಾಗಿದೆ. ಉದ್ಯೋಗ ನೀಡದೇ ಇದ್ದರೆ ಅದು ತಪ್ಪಾಗುತ್ತದೆ” ಎಂದರು.

“ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರವೇ ನೇರವಾಗಿ ನಿರ್ವಹಿಸುತ್ತಿದ್ದರೆ, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕಾಗುತ್ತದೆ” ಎಂದು ಖರ್ಗೆ ಹೇಳಿದರು.

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಧ್ಯ ಪ್ರವೇಶಿಸಿ, “ನೌಕರಿಯನ್ನು ಕೊಡದೇ ಇದ್ದರೆ, ಸಂಸ್ಥೆಯನ್ನು ಮುಚ್ಚಲು ಸಾಧ್ಯವಿಲ್ಲ. ಅಲ್ಲಿ ಸಾವಿರಾರು ಜನ ಕೆಲಸ ಮಾಡಿಕೊಂಡಿದ್ದಾರೆ. ಅದಕ್ಕೆ, ನಿಯಮವನ್ನು ಉಲ್ಲಂಘಿಸಿದರೆ ದಂಡ ವಿಧಿಸಿದರೆ, ರೈತರಿಗೂ ಇದರಿಂದ ಸಹಾಯ ಆಗಬಹುದು” ಎಂದರು.

“ಜಮೀನನ್ನು ಪಡೆದುಕೊಂಡು ಯಾವುದೇ ಸಂಸ್ಥೆ ಕಾರ್ಯಾರಂಭ ಮಾಡಿದ ಮೇಲೆ ಏನೂ ಮಾಡಲು ಸಾಧ್ಯವಿಲ್ಲ. ಏನಾದರೂ ಕ್ರಮ ತೆಗೆದುಕೊಂಡರೆ, ಐದೇ ನಿಮಿಷದಲ್ಲಿ ಕೋರ್ಟಿನಿಂದ ಸ್ಟೇ ತರುತ್ತಾರೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments