ರಾಜಕೀಯ ಪಕ್ಷಗಳ ನಿಧಿಯ ಬಗ್ಗೆ ಮಾಹಿತಿ ಅಗತ್ಯವಾಗಿದ್ದು, ಅನಾಮಧೇಯ ಚುನಾವಣಾ ಬಾಂಡ್ (Electoral Bonds)ಯೋಜನೆಯು ಮಾಹಿತಿ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎನ್ನುವ ಮೂಲಕ ಚುನಾವಣಾ ಬಾಂಡ್ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಚುನಾವಣಾ ಬಾಂಡ್ ಯೋಜನೆಯ ಸಿಂಧುತ್ವದ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿ, “ಯೋಜನೆಯು ಸಂವಿಧಾನದ ಪರಿಚ್ಛೇದ 19(1)(ಎ) ಅಡಿಯಲ್ಲಿ ಬರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ” ಎಂದು ಹೇಳಿದೆ.
ಯೋಜನೆಯನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ಪೀಠವು ಪ್ರಕರಣದ ಕುರಿತು ಸರ್ವಾನುಮತದ ತೀರ್ಪು ನೀಡಿದೆ.
ತೀರ್ಪು ಪ್ರಕಟಿಸುವ ವೇಳೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, “ಖಾಸಗಿತನದ ಮೂಲಭೂತ ಹಕ್ಕು ರಾಜಕೀಯ ಗೋಪ್ಯತೆ ಮತ್ತು ಸಂಬಂಧಿತ ನಾಗರಿಕರ ಹಕ್ಕನ್ನು ಒಳಗೊಂಡಿದೆ” ಎಂದರು.
“ಬ್ಯಾಂಕ್‌ಗಳು ಚುನಾವಣಾ ಬಾಂಡ್‌ಗಳ ವಿತರಣೆಯನ್ನು ಕೂಡಲೇ ನಿಲ್ಲಿಸಬೇಕು. ರಾಜಕೀಯ ಪಕ್ಷಗಳು ನಗದೀಕರಿಸಿದ ಚುನಾವಣಾ ಬಾಂಡ್‌ಗಳ ವಿವರಗಳನ್ನು ಎಸ್‌ಬಿಐ ಒದಗಿಸಬೇಕು. ಚುನಾವಣಾ ಆಯೋಗಕ್ಕೆ(ಇಸಿಐ) ಎಸ್‌ಬಿಐ ವಿವರಗಳನ್ನು ಸಲ್ಲಿಸಬೇಕು. ಆಯೋಗವು ಈ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು” ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
2018ರ ಜನವರಿ 2ರಂದು ಸರ್ಕಾರವು ಈ ಯೋಜನೆಗೆ ಅಧಿಸೂಚನೆ ಹೊರಡಿಸಿತ್ತು. ಯೋಜನೆಯ ನಿಬಂಧನೆಗಳ ಪ್ರಕಾರ, ಚುನಾವಣಾ ಬಾಂಡ್‌ಗಳನ್ನು ಭಾರತದ ಯಾವುದೇ ನಾಗರಿಕ ಅಥವಾ ದೇಶದಲ್ಲಿ ಸಂಘಟಿತ ಅಥವಾ ಸ್ಥಾಪಿತ ಘಟಕದಿಂದ ಖರೀದಿಸಬಹುದು. ಒಬ್ಬ ವ್ಯಕ್ತಿ ಏಕಾಂಗಿಯಾಗಿ ಅಥವಾ ಇತರ ವ್ಯಕ್ತಿಗಳೊಂದಿಗೆ ಜಂಟಿಯಾಗಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದಾಗಿತ್ತು.
ಚುನಾವಣಾ ಬಾಂಡ್ ಎಂದರೇನು?
ಇದು ಜನಸಾಮಾನ್ಯರು, ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ಒಂದು ವಿಧದ ದೇಣಿಗೆ ಕ್ರಮ. 1,000 ರೂ, 10,000 ರೂ, 1 ಲಕ್ಷ ರೂ, 10 ಲಕ್ಷ ರೂ, 1 ಕೋಟಿ ರೂ ಇತ್ಯಾದಿ ಮುಖಬೆಲೆಗಳಲ್ಲಿ ಬಾಂಡ್‌ಗಳನ್ನು ಖರೀದಿಸಬಹುದು. ಈ ಬಾಂಡ್ಗಳು ಅನಾಮಧೇಯವಾಗಿರುತ್ತವೆ. ಅಂದರೆ, ಇದನ್ನು ಖರೀದಿಸಿದ ವ್ಯಕ್ತಿ ಅಥವಾ ಸಂಸ್ಥೆಯ ಹೆಸರು ಬಹಿರಂಗ ಇರುವುದಿಲ್ಲ. ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ಕೊಡಲಾಗಿದೆ ಆ ಪಕ್ಷ ಹೆಸರೂ ಬಹಿರಂಗ ಇರುವುದಿಲ್ಲ.
ಇತ್ತೀಚಿನ ಚುನಾವಣೆಯಲ್ಲಿ ಶೇ. 1ಕ್ಕೂ ಹೆಚ್ಚು ಮತಗಳನ್ನು ಪಡೆದ ಯಾವುದೇ ರಾಜಕೀಯ ಪಕ್ಷವೂ ಚುನಾವಣೆ ಬಾಂಡ್ ಅಕೌಂಟ್ ತೆರೆಯಲು ಅವಕಾಶ ಹೊಂದಿರುತ್ತದೆ. ಚುನಾವಣೆ ಬಾಂಡ್ ಖರೀದಿಸಿದ ಬಳಿಕ ರಾಜಕೀಯ ಪಕ್ಷವು 15 ದಿನದೊಳಗೆ ಆ ಹಣವನ್ನು ಎನ್ಕ್ಯಾಷ್ ಮಾಡಿಕೊಳ್ಳಬೇಕು. ಅದು ತಪ್ಪಿದಲ್ಲಿ ಬಾಂಡ್ ಹಣವು ಪಿಎಂ ರಾಷ್ಟ್ರೀಯ ಪರಿಹಾರ ನಿಧಿಗೆ (ಪಿಎಂಎನ್ಆರ್ಎಫ್) ವರ್ಗಾವಣೆ ಆಗುತ್ತದೆ.