Homeಕರ್ನಾಟಕಜೂ.3ರಂದು ಡಿ.ಕೆ. ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ!

ಜೂ.3ರಂದು ಡಿ.ಕೆ. ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ!

ರಾಜ್ಯದ ಮುಂದಿನ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿರುವ ಮಾಜಿ ಡಿಸಿಎಂ, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶನಿವಾರ ಇಲ್ಲಿನ ಲೋಕಭವನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದರು.

ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಡಿಕೆಶಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ. ಮೂಲಗಳ ಪ್ರಕಾರ, ನೂತನ ಸಿಎಂ ಮತ್ತು ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ದಿನಾಂಕ, ಸಮಯ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಅನೌಪಚಾರಿಕವಾಗಿ ಚರ್ಚಿಸಲು ಶಿವಕುಮಾರ್ ಅವರು ರಾಜ್ಯಪಾಲರನ್ನು ಭೇಟಿಯಾದರು. ಭಾನುವಾರ ಉಪರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳಕ್ಕೆ ತೆರಳುವ ನಿರೀಕ್ಷೆಯಿದೆ.

ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಜೂನ್ 3ರಂದು ನಡೆಯುವುದು ಬಹುತೇಕ ನಿಚ್ಚಳವಾಗಿದೆ. ಈ ಹಿಂದೆ ಮೇ 31ರಂದೇ ಡಿಕೆಶಿ ಪದಗ್ರಹಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಬದಲಾದ ಸನ್ನಿವೇಶದ ಹಿನ್ನೆಲೆಯಲ್ಲಿ ಜೂನ್ 3ರಂದು ಬುಧವಾರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದೆ. ವಿಧಾನಸೌಧದ ಬಳಿ ಪೂರ್ವಸಿದ್ಧತಾ ಕಾರ್ಯಗಳು ಕಂಡುಬಂದಿವೆ.

ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ನಾಗರಬಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ ತೆರಳಿ ಅಜ್ಜಯ್ಯನ ಪಾದುಕೆಗೆ ನಮಸ್ಕರಿಸಿ ವಾಪಸ್ ಆಗಿದ್ದಾರೆ. ತಮ್ಮ ಪ್ರತಿಯೊಂದು ರಾಜಕೀಯ ಹೆಜ್ಜೆಯಲ್ಲೂ ಆರಾಧ್ಯ ದೈವವಾಗಿ ನಂಬಿರುವ ತುಮಕೂರು ಜಿಲ್ಲೆಯ ನೊಣವಿನಕೆರೆಯ ಶ್ರೀ ಕಾಡಸಿದ್ಧೇಶ್ವರ ಅಜ್ಜಯ್ಯ ಪೀಠದ ಆದೇಶದಂತೆ, ಜೂನ್ 3ರಂದು (ಬುಧವಾರ) ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಪಕ್ಕಾ ಆಗಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments