ಮಂಗಳೂರು: ಯುವತಿಯೊಬ್ಬರು ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದ ಬಳಿ ನಡೆದಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ನಯನಾ ಎಂ.ಜಿ (27) ಆತ್ಮಹತ್ಯೆ ಮಾಡಿಕೊಂಡವರು.
ಅವಿವಾಹಿತರಾಗಿದ್ದ ನಯನಾ ಅವರು ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ರೈಲಿನಲ್ಲಿ ಬೆಳಿಗ್ಗೆ ಪ್ರಯಾಣಿಸುತ್ತಿದ್ದಾಗ ಬಿ.ಸಿ. ರೋಡ್ ನಿಲ್ದಾಣ ದಾಟಿ ರೈಲು ಸಾಗುತ್ತಿದ್ದಾಗ ನೇತ್ರಾವತಿ ನದಿಯ ಸೇತುವೆ ಬಳಿ ಬಂದಾಗ ನಯನಾ ಅವರು ಬಾಗಿಲಿನ ಮೂಲಕ ರೈಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಷಯ ತಿಳಿದ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಶವವನ್ನು ನದಿಯಿಂದ ಮೇಲಕ್ಕೆ ಎತ್ತಿದ್ದಾರೆ. ಮುಳುಗುತಜ್ಞ ಮಹಮ್ಮದ್ ತಂಡ ಶವವನ್ನು ಮೇಲೆತ್ತುವಲ್ಲಿ ದೊಡ್ಡ ಪಾತ್ರ ವಹಿಸಿತು. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲಿನಲ್ಲಿ ನಯನಾ ಅವರು ಒಬ್ಬರೇ ಪ್ರಯಾಣಿಸುತ್ತಿದ್ದರೇ ಅಥವಾ ಕುಟುಂಬ ಸಮೇತವಾಗಿ ಸಾಗುತ್ತಿದ್ದರೇ? ಅವರು ಎಲ್ಲಿಂದ ಬಂದಿದ್ದರು? ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಯಾಕೆ ಮಾಡಿದರು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.