Homeಕರ್ನಾಟಕರಾಜ್ಯಸಭಾ ಚುನಾವಣೆ: ನಾರಾಯಣ ಬಾಂಡಗೆ, ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆ

ರಾಜ್ಯಸಭಾ ಚುನಾವಣೆ: ನಾರಾಯಣ ಬಾಂಡಗೆ, ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆ

ರಾಜ್ಯಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಘಿ ನಾರಾಯಣ ಬಾಂಡಗೆ ಮತ್ತು ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರು ಗುರುವಾರ ನಾಮಪತ್ರ ಸಲ್ಲಿಸಿದರು.

ವಿಧಾನಸೌಧದ ಕೊಠಡಿ ಸಂಖ್ಯೆ 121ರಲ್ಲಿ ವಿಧಾನಸಭೆಯ ಕಾರ್ಯದರ್ಶಿ ಅವರಿಗೆ ನಾಮಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಜೆಡಿಎಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‍ಕುಮಾರ್, ಇಬ್ಬರೂ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌, “ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇಬ್ಬರೂ ಗೆಲ್ಲುವ ವಿಶ್ವಾಸವಿದೆ” ಎಂದರು.

“ದೆಹಲಿಯಲ್ಲಿ ರೈತರ ಚಳವಳಿ, ಪ್ರತಿಭಟನೆ ಹಿಂದೆ ಕಾಂಗ್ರೆಸ್ ಟೂಲ್ ಕಿಟ್ ಕೆಲಸ ಮಾಡುತ್ತಿದೆ. ಇಂಡಿ ಒಕ್ಕೂಟದಲ್ಲಿ ಎಲ್ಲ ಪಕ್ಷಗಳು ಒಂದೊಂದಾಗಿ ಖಾಲಿ ಆಗುತ್ತಿವೆ. ಕೊನೆಗೆ ಐ ಮಾತ್ರ ಉಳಿಯಲಿದೆ” ಲೇವಡಿ ಮಾಡಿದರು.

“ಮಹಾರಾಷ್ಟ್ರದಲ್ಲಿ ಅಶೋಕ್ ಚೌಹಾಣ್ ಕಾಂಗ್ರೆಸ್ ತೊರೆದಿದ್ದಾರೆ. ಹತಾಶವಾದ ಕಾಂಗ್ರೆಸ್ ಪಕ್ಷವು, ರೈತರನ್ನು ಟೂಲ್ ಕಿಟ್ ಆಗಿ ಬಳಸಿಕೊಂಡಿದೆ. ರೈತರು ಬೆಂಬಲ ಕೇಳುವ ಮೊದಲೇ ಕಾಂಗ್ರೆಸ್ ಅವರಿಗೆ ತನ್ನ ಬೆಂಬಲ ಘೋಷಿಸಿದೆ. ಇದು ಹತಾಶೆಯ ಸಂಕೇತ” ಎಂದರು.

ಬಿ ವೈ ವಿಜಯೇಂದ್ರ ಮಾತನಾಡಿ, “ಕರ್ನಾಟಕ ರಾಜ್ಯದಲ್ಲೂ ಬಿಜೆಪಿ ಸರಕಾರವು ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತ ಬಂದಿದೆ. ಹಿಂದೆ ಬಿಜೆಪಿ ಸರಕಾರವು ರಾಜ್ಯ ಬಜೆಟ್‍ನಲ್ಲಿ ಕೃಷಿ ಕ್ಷೇತ್ರಕ್ಕೆ 7500 ಕೋಟಿ ರೂಪಾಯಿಯನ್ನು ಮೀಸಲಿಟ್ಟಿತ್ತು. ಸಿದ್ದರಾಮಯ್ಯನವರ ಸರಕಾರವು 4,500 ಕೋಟಿ ಮೀಸಲಿಟ್ಟು, ಕೃಷಿ ಕ್ಷೇತ್ರಕ್ಕೂ ಮೊತ್ತ ಕಡಿಮೆ ಮಾಡಿ ರೈತರಿಗೆ ಅನ್ಯಾಯ ಮಾಡಿದೆ” ಎಂದು ಆಕ್ಷೇಪಿಸಿದರು.

“ಕೇಂದ್ರದ ವಿರುದ್ಧ ಹೋರಾಟಕ್ಕೆ ಬೀದಿಗೆ ಇಳಿದಿರುವುದು ಕಾಂಗ್ರೆಸ್ ಷಡ್ಯಂತ್ರ. ಕೇಂದ್ರದಲ್ಲಿ ಬಿಜೆಪಿ, ಎನ್‍ಡಿಎ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತದೆ; ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗುತ್ತಾರೆ ಎಂಬುದನ್ನು ಸಹಿಸಲಾಗದೆ ಈ ಷಡ್ಯಂತ್ರ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments