ಮೂಟೆ ಹೊತ್ತುಕೊಂಡು ರೈತನೋರ್ವ ಮೆಟ್ರೋ ರೈಲಿಗೆ ಹತ್ತುವಾಗ ಮೆಟ್ರೋ ಸಿಬ್ಬಂದಿ ಗಲೀಜು ಬಟ್ಟೆ ಹಾಕಿರುವ ಕಾರಣ ನೀಡಿ ಅವರನ್ನು ಒಳಗೆ ಬಿಡದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಚ್ಚೆತ್ತುಕೊಂಡ ಅಧಿಕಾರಿಗಳು, ಆ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದ್ದಾರೆ.
ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಫೆ.24ರಂದು ಈ ಘಟನೆ ನಡೆದಿದೆ. ತಲೆ ಮೇಲೆ ಮೂಟೆ ಹೊತ್ತು, ಗಲೀಜು ಬಟ್ಟೆ ಹಾಕಿದ್ದಾನೆ ಅನ್ನುವ ಒಂದೇ ಕಾರಣಕ್ಕೆ ರೈತನನ್ನು ನಮ್ಮ ಮೆಟ್ರೋ ಸಿಬ್ಬಂದಿ ಒಳಗೆ ಬಿಟ್ಟಿರಲಿಲ್ಲ.
ಹಿಂದಿ ಭಾಷೆಯನ್ನಾಡುವ ರೈತನೊಬ್ಬ ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್ ಪಡೆದು ಮೆಟ್ರೋದಲ್ಲಿ ಪ್ರಯಾಣಿಸಲು ಮುಂದಾಗಿದ್ದಾರೆ. ಈ ವೇಳೆ ಲಗೇಜ್ ಪರಿಶೀಲನೆ ಮಾಡುವ ಸಿಬ್ಬಂದಿ ರೈತನನ್ನು ತಡೆದಿದ್ದಾರೆ. ಗಲೀಜು ಬಟ್ಟೆ ಹಾಕಿದ್ದೀರಾ, ತಲೆ ಮೇಲೆ ಮೂಟೆ ಇದೆ ಎಂದು ಹೇಳಿ ರೈತನನ್ನ ಮೆಟ್ರೋದಲ್ಲಿ ಪ್ರಯಾಣಿಸಲು ಅನುಮತಿ ಕೊಟ್ಟಿಲ್ಲ ಎಂಬುದು ವಿಡಿಯೋದಲ್ಲಿ ಕಂಡುಬಂದಿದೆ.
“ಗಲೀಜು ಬಟ್ಟೆಗೆ ಹಾಕಿದರೆ ಮೆಟ್ರೋದಲ್ಲಿ ಪ್ರವೇಶಿಸುವಂತಿಲ್ಲ ಏನಾದರೂ ಬೋರ್ಡ್ ಇದೆಯೇ?ಇದು ಸಾರ್ವಜನಿಕ ಸಾರಿಗೆ. ಇದು ವಿಐಪಿಗಳ ಸಾರಿಗೆ ಅಲ್ಲ. ನಾನು ಚೆನ್ನಾಗಿರುವ ಬಟ್ಟೆ ಹಾಕಿದ್ದೇನೆ. ನನಗೆ ಉಚಿತ ಪ್ರವೇಶ ನೀಡುತ್ತೀರಾ?” ಎಂದು ಕಾರ್ತಿಕ್ ಸ್ಥಳದಲ್ಲಿದ್ದ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.
ಈ ವಿಡಿಯೋ ವೈರಲಾದ ಬಳಿಕ ಎಚ್ಚೆತ್ತುಕೊಂಡ ಬಿಎಂಆರ್‌ಸಿಎಲ್ ಅಧಿಕಾರಿಗಳು, “ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ , ಭದ್ರತಾ ಮೇಲ್ವಿಚಾರಕರ ಸೇವೆಯನ್ನು ವಜಾಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಿಗಮವು ವಿಷಾದಿಸುತ್ತದೆ” ಎಂದು ಸೋಮವಾರ(ಫೆ.26) ಅಧಿಕೃತ ಹೇಳಿಕೆ ನೀಡಿದೆ.
ಸಿಬ್ಬಂದಿಗಳ ಈ ನಡೆಯ ವಿರುದ್ಧ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲೇ ಸುಮಾರು 15 ನಿಮಿಷ ನಿಂತು ಪ್ರಶ್ನಿಸಿ, ರೈತನನ್ನು ಮೆಟ್ರೋದಲ್ಲಿ ಪ್ರಯಾಣ ಮಾಡುವಂತೆ ನೆರವಾದ ಯುವಕ ಕಾರ್ತಿಕ್ ನಡೆಗೆ, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.