ಗ್ಯಾರಂಟಿಗೆ ಹಣ ಹೊಂದಿಸಲು ಸಾಧ್ಯವಾಗದೇ ಫಲಾನುಭವಿಗಳ ಮೇಲೆ ಆರೋಪ ಮಾಡಿಕೊಂಡು ಲಕ್ಷಾಂತರ ಫಲಾನುಭವಿಗಳನ್ನು ಕಡಿತ ಮಾಡಲು ಹೊರಟದ್ದು ಖಂಡಿತ ಸರಿಯಲ್ಲ ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಮಾಧ್ಯಮಗಳ ಜೊತೆ ಸೋಮವಾರ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರವು ತಾನೇ ಘೋಷಿಸಿದ್ದ ಗ್ಯಾರಂಟಿಗಳ ಬಗ್ಗೆ ವ್ಯತಿರಿಕ್ತ ಹೇಳಿಕೆಗಳನ್ನು ಕೊಡುವುದಲ್ಲದೇ, ಮಾನದಂಡದ ಬದಲಾವಣೆಗಳನ್ನು ಸರಕಾರವೇ ಕೈಗೆತ್ತಿಕೊಂಡಿದೆ ಎಂದು ಟೀಕಿಸಿದರು. ಚುನಾವಣೆ ವೇಳೆ ಪ್ರತಿಯೊಬ್ಬ ಮಹಿಳೆಗೂ ಗೃಹಲಕ್ಷ್ಮಿ ಕೊಡುವುದಾಗಿ ಘೋಷಿಸಿದ್ದೀರಿ. ಬೇರೆ ಬೇರೆ ಯೋಜನೆಗಳನ್ನೂ ಪ್ರಕಟಿಸಿದ್ದೀರಿ ಎಂದು ಗಮನ ಸೆಳೆದರು.
ಗ್ಯಾರಂಟಿ ವಿಚಾರವಾಗಿ ಕೊಟ್ಟ ಮಾತಿನಂತೆ ನಡೆಯುವುದು ಈ ಸರಕಾರದ ಆದ್ಯ ಕರ್ತವ್ಯ ಎಂದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಮುಖ್ಯಮಂತ್ರಿಗಳು ಬೆಳಕು ಚೆಲ್ಲಬೇಕು ಎಂದು ಆಗ್ರಹಿಸಿದರು. ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಲು ನಾವು ಹಿಂದಿನ ಮುಖ್ಯಮಂತ್ರಿಗಳ ಮುಂದೆ ಬೇಡಿಕೆ ಇಟ್ಟಿದ್ದೆವು. ಅದು ಆಗಲಿಲ್ಲ; ಈಗಲಾದರೂ ಆರ್ಥಿಕ ಪರಿಸ್ಥಿತಿ ಕುರಿತು ವಾಸ್ತವಿಕ ಸತ್ಯವನ್ನು ರಾಜ್ಯದ ಜನರ ಮುಂದೆ ಬಿಚ್ಚಿಡುವ ಕೆಲಸವನ್ನು ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರು ಮಾಡಬೇಕೆಂದು ಅವರು ಒತ್ತಾಯಿಸಿದರು.
ಒಂದೊಂದೇ ನೆಪ ಒಡ್ಡಿ ಕತ್ತರಿ ಹಾಕುವ ಕೆಲಸ
ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಸರಕಾರವು ಕುಂಟು ನೆಪ ಹುಡುಕುತ್ತಿದೆ. ಅದರ ಬದಲಾಗಿ ಅವರು ಬಹಿರಂಗ ಸತ್ಯವನ್ನು ಅವರು ಒಪ್ಪಿಕೊಳ್ಳಲಿ ಎಂದು ಆಗ್ರಹಿಸಿದರು. ಗ್ಯಾರಂಟಿಗಳ ಅನುಷ್ಠಾನ ಮಾಡಿ ಹಿಮಾಚಲ ಪ್ರದೇಶ ಸರಕಾರ ಯಾವ ರೀತಿ ತೊಂದರೆಗೆ ಈಡಾಗಿದೆಯೋ, ತೆಲಂಗಾಣದಲ್ಲೂ ಕಾಂಗ್ರೆಸ್ ಸರಕಾರ ಇದ್ದು, ಅಲ್ಲಿಯೂ ಇದೇ ಪರಿಸ್ಥಿತಿ ಉಂಟಾಗಿದೆ ಎಂದು ವಿವರಿಸಿದರು. ಸರಕಾರಿ ನೌಕರರಿಗೆ ಸಂಬಳ ಕೊಡಲಾಗದ ಪರಿಸ್ಥಿತಿ ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿದೆ. ನಮ್ಮ ರಾಜ್ಯದಲ್ಲೂ ಇದೇ ಪರಿಸ್ಥಿತಿಗೆ ಬಂದು ನಿಂತಿದೆ ಎಂದು ತಿಳಿಸಿದರು. ಈಗ ಒಂದೊಂದೇ ನೆಪ ಒಡ್ಡಿ ಕತ್ತರಿ ಹಾಕುವ ಕೆಲಸಕ್ಕೆ ರಾಜ್ಯ ಸರಕಾರ ಕೈಹಾಕಿದೆ ಎಂದು ಟೀಕಿಸಿದರು.
ಗ್ಯಾರಂಟಿಗಳನ್ನು ಕೊಡಿ ಅಂತ ಚುನಾವಣೆ ವೇಳೆ ರಾಜ್ಯದ ಜನ ಕೇಳಿರಲಿಲ್ಲ. ಗ್ಯಾರಂಟಿಗಳಿಗೆ ಅವರು ಕೈ ಚಾಚಿರಲಿಲ್ಲ. ಇವರೇ ಘೋಷಣೆ ಮಾಡಿದರು. ಈಗ ಗ್ಯಾರಂಟಿ ಫಲಾನುಭವಿಗಳಿಗೆ ಅಪಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ದೂರಿದರು.


