ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಾನು ಟಿಕೆಟ್ ಕೇಳಿಲ್ಲ. ಈ ಬಗ್ಗೆ ಈಗಾಗಲೇ ಹತ್ತಾರು ಬಾರಿ ಹೇಳಿದ್ದೇನೆ. ನನಗೆ ಗೊತ್ತಿರುವುದು ಕೇವಲ ಪಕ್ಷ ನಿಷ್ಠೆ ಮತ್ತು ಪರಿಶ್ರಮ ಮಾತ್ರ ಎಂದು ಸಿ ಟಿ ರವಿ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ 36 ವರ್ಷದ ರಾಜಕೀಯ ಜೀವನದಲ್ಲಿ ಪಕ್ಷನಿಷ್ಠೆ ಪ್ರಶ್ನಾರ್ಥಕ ಚಿಹ್ನೆಯಾಗಲು ಅವಕಾಶ ಕೊಟ್ಟಿಲ್ಲ. ಪಂಚಾಯತ್ನಿಂದ ಪಾರ್ಲಿಮೆಂಟ್ ವರೆಗೂ ಬಿಜೆಪಿ ಗೆಲ್ಲಿಸಬೇಕು” ಎಂದರು.
“ನಮ್ಮ ಗುರಿ ಒಂದೇ, ಪ್ರಧಾನಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಈ ಬಗ್ಗೆ ಹೋರಾಟ ಮಾಡಿದ್ದೇನೆ. ಯಾರು ಯಾರು ಒಂದೊಂದು ಚುನಾವಣೆಯಲ್ಲಿ ಒಂದೊಂದು ತರಹ ವರ್ತನೆ ಮಾಡಿರುತ್ತಾರೋ ಅವರಿಗೆ ಇದು ಅನ್ವಯ ಆಗುತ್ತದೆ” ಎಂದು ಹೇಳಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ದ ಚಿಕ್ಕಮಗಳೂರಿನಲ್ಲಿ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರಲ್ಲಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, “ಯಡಿಯೂರಪ್ಪ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಹೀಗಾಗಿ ‘ಬಾಸ್ ಈಸ್ ಆಲ್ವೇಸ್ ರೈಟ್” ಎಂದರು.
ನಿನ್ನೆ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರಿ ಖರ್ಚಿನಲ್ಲಿ ಸಂವಿಧಾನ ಜಾಗೃತಿ ದಿನ ಕಾರ್ಯಕ್ರಮ ಏರ್ಪಡಿಸಿದೆ. ಆದರೆ, ಅದರಲ್ಲಿ ಸಂವಿಧಾನ ಜಾಗೃತಿ ಬಗ್ಗೆ ಮಾತನಾಡಿದ್ದು ಕಡಿಮೆ. ಪ್ರಧಾನಿ ಮೋದಿಯನ್ನು ಟೀಕಿಸಿ, ಸುಳ್ಳು ಆರೋಪ ಹೊರಿಸಿ, ತಪ್ಪು ಭಾವನೆ ಬರುವಂತೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದು ಸಂವಿಧಾನಕ್ಕೆ ಮಾಡಿದ ಅಪಮಾನ” ಎಂದು ಹೇಳಿದರು.
“ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೇ ಅದರ ನಾಯಕರು ಸಂವಿಧಾನ ದುರ್ಬಳಕೆ ಮಾಡಿದ್ದಾರೆ. ಈಗ ಏಕಾಏಕಿ ಸಂವಿಧಾನ ಬಗ್ಗೆ ನೆನಪಾಗಿದ್ದು ಅಂಬೇಡ್ಕರ್ ಮೇಲಿನ ಪ್ರೀತಿಯಿಂದ ಅಲ್ಲ. ಇಂದು ಅಂಬೇಡ್ಕರ್ ಪೋಟೋ ಬಳಸುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ” ಎಂದು ವಾಗ್ದಾಳಿ ನಡೆಸಿದರು.