Homeಕರ್ನಾಟಕಲೀಲಾವತಿ ಕಟ್ಟಿಸಿರುವ ಆಸ್ಪತ್ರೆ ಮುಂದೆ ಅವರ ಪ್ರತಿಮೆ ನಿರ್ಮಾಣ: ಡಿ ಕೆ ಶಿವಕುಮಾರ್‌

ಲೀಲಾವತಿ ಕಟ್ಟಿಸಿರುವ ಆಸ್ಪತ್ರೆ ಮುಂದೆ ಅವರ ಪ್ರತಿಮೆ ನಿರ್ಮಾಣ: ಡಿ ಕೆ ಶಿವಕುಮಾರ್‌

ಬೆಳಗಾವಿ: ಲೀಲಾವತಿ ಅವರ ಬಳಿ ಹಣವಿಲ್ಲದಿದ್ದರೂ ಹೃದಯವಂತಿಯಲ್ಲಿ ಬಹಳ ದೊಡ್ಡ ಶ್ರೀಮಂತರು. ತಮ್ಮ ಬದುಕಿನಲ್ಲಿ ಅನೇಕ ಕಷ್ಟ ಬಂದರೂ ಅವರು ಪರೋಪಕಾರಕ್ಕೆ ಜೀವನ ನಡೆಸಿ ಅನೇಕ ಸಾಕ್ಷಿ ಗುಡ್ಡೆಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಬಣ್ಣಿಸಿದರು.

ವಿಧಾನಸಭೆಯಲ್ಲಿ ಹಿರಿಯ ನಟಿ ಲೀಲಾವತಿ ಅವರ ನಿಧನಕ್ಕೆ ಸಂತಾಪ ಸೂಚಕ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಿವಕುಮಾರ್ ಅವರು, “ಲೀಲಾವತಿ ಅವರು ನಿಧನರಾಗುವ ಕೆಲವು ದಿನಗಳ ಮುಂಚೆ ಕೃತಕ ಉಸಿರಾಟದ ಸಾಧನ ಹಾಕಿಕೊಂಡೇ ಸದಾಶಿವನಗರದ ನನ್ನ ಮನೆ ಬಳಿ ಬಂದಿದ್ದರು. ಆಗ ನಾನು ಅವರ ಮಗ ವಿನೋದ್ ರಾಜ್‌ಗೆ ಇಂತಹ ಪರಿಸ್ಥಿತಿಯಲ್ಲಿ ಏಕೆ ಕರೆದುಕೊಂಡು ಬಂದೆ ಎಂದು ಬೈದಿದ್ದೆ. ಕಾರಿನಲ್ಲೆ ಕುಳಿತಿದ್ದ ಲೀಲಾವತಿ ಅವರ ಬಳಿ ಹೋಗಿ ಏನು ಬಂದದ್ದು ಎಂದು ಕೇಳಿದೆ. ಆಗ ಅವರು ಅಲ್ಪಸ್ವಲ್ಪ ಮಾತನಾಡುತ್ತಿದ್ದರು. ನಾನು ಪಶುವೈದ್ಯ ಆಸ್ಪತ್ರೆ ಕಟ್ಟಿಸಿದ್ದೇನೆ. ನೀವೇ ಬಂದು ಅದರ ಉದ್ಘಾಟನೆ ಮಾಡಬೇಕು ಎಂದರು” ಎಂದು ನೆನಪಿಸಿಕೊಂಡರು.

“ನಾವು ಬೇರೆಯವರ ಸಹಾಯದಲ್ಲಿ ಆಸ್ಪತ್ರೆಗಳನ್ನು ಕಟ್ಟಿಸಿರುವುದನ್ನು ನೋಡಿದ್ದೇವೆ. ನನ್ನ ಕ್ಷೇತ್ರದಲ್ಲಿ ಇನ್ಫೋಸಿಸ್ ಅವರ ನೆರವಿನಿಂದ ತಾಯಿಮಗು ಆಸ್ಪತ್ರೆ ಕಟ್ಟಿಸಿದ್ದೇವೆ. ಬೇರೆ ಸಂಸ್ಥೆಗಳ ನೆರವಿನಿಂದ ಶಾಲೆ ಕಟ್ಟಿಸಿದ್ದೇವೆ. ಆದರೆ ಲೀಲಾವತಿ ಅವರು ತಮ್ಮದೇ ಸ್ವಂತ ದುಡ್ಡಿನಲ್ಲಿ ಪಶುವೈದ್ಯ ಶಾಲೆ ಹಾಗೂ ಪ್ರಾಥಮಿಕ ಚಿಕಿತ್ಸಾ ಕೇಂದ್ರವನ್ನು ಕಟ್ಟಿಸಿದ್ದಾರೆ. ಅವರಿಗೆ ಮನುಷ್ಯರು ಹಾಗೂ ಮೂಕಪ್ರಾಣಿಗಳ ಬಗ್ಗೆ ಎಷ್ಟು ಪ್ರೀತಿ, ಕಾಳಜಿ ಇತ್ತು ಎಂಬುದಕ್ಕೆ ಇದು ಉದಾಹರಣೆ” ಎಂದರು.

“ನನ್ನ ರಾಜಕಾರಣದ ಬದುಕಿನಲ್ಲಿ ನೋಡಿದಂತೆ, ಯಾರಾದರೂ ತಮ್ಮ ಸ್ವಂತ ದುಡ್ಡಿನಲ್ಲಿ ಪಶುವೈದ್ಯ ಶಾಲೆ ಕಟ್ಟಿಸಿಕೊಟ್ಟಿದ್ದರೆ ಅದು ಲೀಲಾವತಿ ಹಾಗೂ ವಿನೋದ್ ರಾಜ್ ಅವರು ಮಾತ್ರ. ಇದನ್ನು ಸದನದ ದಾಖಲೆಯಲ್ಲಿ ಉಳಿಸಲು ನಾನು ಬಯಸುತ್ತೇನೆ. ನಾನು ಬಂದೀಖಾನೆ ಸಚಿವನಾಗಿದ್ದ ಸಂದರ್ಭದಲ್ಲಿ ಹಿರಿಯ ನಟಿ ಲೀಲಾವತಿಯವರು ಮತ್ತು ಅವರ ಮಗನಾದ ವಿನೋದ್ ರಾಜ್ ಅವರು ಕಾರಾಗೃಹದಲ್ಲಿ ಸಿನಿಮಾ ಚಿತ್ರೀಕರಣಕ್ಕೆ 10 ಸಾವಿರ ಹಣ ನೀಡಿ ಅನುಮತಿ ತೆಗೆದುಕೊಂಡಿದ್ದರು. ಕಾರಣಾಂತರಗಳಿಂದ ಕಾರಾಗೃಹ ಅಧಿಕಾರಿಗಳು ಚಿತ್ರೀಕರಣ ಅನುಮತಿಯನ್ನು ರದ್ದು ಮಾಡಿದ್ದರು. ಆಗ ಲೀಲಾವತಿ ಅವರು ನನ್ನ ಬಳಿ ಬಂದು ತಮಗೆ ಆಗಿರುವ ತೊಂದರೆ ಬಗ್ಗೆ ಹೇಳಿದರು. ಯಾರೋ ಮುಖ್ಯಮಂತ್ರಿ ಬಂಗಾರಪ್ಪ ಅವರಿಂದಲೂ ಜೈಲು ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿಸಿದ್ದರು. ಆಗ ನಾನು ತಕ್ಷಣ ಮಧ್ಯ ಪ್ರವೇಶಿಸಿ ಲೀಲಾವತಿ ಅವರ ಪುತ್ರನ ಚಿತ್ರದ ಚಿತ್ರೀಕರಣಕ್ಕೆ ಅನುಮತಿ ನೀಡಿದೆ” ಎಂದು ಹೇಳಿದರು.

“ಚಿತ್ರರಂಗದಲ್ಲಿ ಅವರ ಸಾಧನೆ ಬಗ್ಗೆ ನಾವು ಹೇಳುವ ಅಗತ್ಯವೇ ಇಲ್ಲ. 600ಕ್ಕೂ ಹೆಚ್ಚು ಚಿತ್ರಗಳು, ಅನೇಕ ನಾಟಕಗಳಲ್ಲಿ ನಟಿಸಿದ್ದಾರೆ. ಅವರದು ಸರಳ ಜೀವನ. ವಿರೋಧ ಪಕ್ಷದ ನಾಯಕರು ಕೆಲವು ಸಲಹೆ ನೀಡಿದ್ದು, ನಮ್ಮ ಸರ್ಕಾರದ ಕಡೆಯಿಂದ ಅದನ್ನು ಆಲೋಚನೆ ಮಾಡಿ ತೀರ್ಮಾನಿಸುತ್ತೇವೆ. ಅವರು ಕಟ್ಟಿಸಿರುವ ಆಸ್ಪತ್ರೆ ಮುಂದೆ ಅವರ ಪ್ರತಿಮೆ ನಿರ್ಮಾಣದ ಬಗ್ಗೆ ನಮ್ಮ ಮುಖ್ಯಮಂತ್ರಿಗಳು ಹಾಗೂ ಸಚಿವರ ಜತೆ ಚರ್ಚೆ ಮಾಡುತ್ತೇನೆ” ಎಂದು ತಿಳಿಸಿದದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments