Homeದೇಶಕರ್ನಾಟಕ ಸೇರಿ 10 ರಾಜ್ಯಗಳ 24 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ಘೋಷಣೆ

ಕರ್ನಾಟಕ ಸೇರಿ 10 ರಾಜ್ಯಗಳ 24 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ಘೋಷಣೆ

ಚುನಾವಣಾ ಆಯೋಗವು ಜೂನ್ 18ರಂದು 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಯನ್ನು ನಡೆಸುವುದಾಗಿ ಘೋಷಿಸಿದೆ. ಜೊತೆಗೆ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಎರಡು ಉಪಚುನಾವಣೆಗಳನ್ನೂ ನಡೆಸಲಾಗುವುದು ಎಂದು ತಿಳಿಸಿದೆ.

ಜೂನ್ 18 ರಂದು ಮತದಾನ ನಡೆಯಲಿದ್ದು ನಾಮಪತ್ರ ಸಲ್ಲಿಸಲು ಜೂನ್ 8 ಕಡೆಯ ದಿನ. ನಾಮಪತ್ರ ವಾಪಸ್ ಪಡೆಯಲು ಜೂನ್ 11 ಕಡೆಯ ದಿನ. ಜೂನ್ 18 ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.
ಈ 24 ರಾಜ್ಯಸಭೆ ಸದಸ್ಯರು ವಿವಿಧ ರಾಜ್ಯಗಳ ವಿಧಾನಸಭೆಗಳಿಂದ ಚುನಾಯಿತರಾಗುತ್ತಾರೆ.

ಪ್ರಸ್ತುತ ರಾಜ್ಯಸಭಾ ಸದಸ್ಯರ ಅವಧಿ ಜೂನ್ 21ರಿಂದ ಜುಲೈ 19ರ ನಡುವೆ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಸ್ಥಾನಗಳು ಖಾಲಿಯಾಗಲಿವೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಆಂಧ್ರಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ ತಲಾ ನಾಲ್ಕು ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಜಾರ್ಖಂಡ್‌ನಲ್ಲಿ ಎರಡು ರಾಜ್ಯಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯಗಳಲ್ಲಿ ತಲಾ ಒಂದು ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನಾಂಕ ಎಂದು ಚುನಾವಣಾ ಆಯೋಗ ತಿಳಿಸಿದೆ.

ಸದ್ಯ ಕರ್ನಾಟಕವನ್ನು ಪ್ರತಿನಿಧಿಸಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬೆಳಗಾವಿ ಬಿಜೆಪಿ ಮುಖಂಡ ಈರಣ್ಣ ಕಡಾಡಿ, ದಕ್ಷಿಣ ಕನ್ನಡ ಬಿಜೆಪಿ ಮುಖಂಡ ಕೆ. ನಾರಾಯಣ ಅವರ ರಾಜ್ಯಸಭೆಯ ಪ್ರಸಕ್ತ ಅವಧಿ ಇದೇ ಜೂನ್ 25 ರಂದು ಕೊನೆಗೊಳ್ಳಲಿದೆ.

ದೇವೇಗೌಡ ಮತ್ತೊಂದು ಅವಧಿಗೆ ರಾಜ್ಯ ಸಭೆಗೆ ಪ್ರವೇಶ ಪಡೆಯುವರೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾ ಬಲದ ಪ್ರಕಾರ ತೆರವಾಗುವ ನಾಲ್ಕು ಸ್ಥಾನಗಳಲ್ಲಿ 3 ಸ್ಥಾನಗಳು ಕಾಂಗ್ರೆಸ್‌ಗೆ ಸಿಗಲಿವೆ. ಬಿಜೆಪಿಗೆ ಒಂದು ಸ್ಥಾನ ಸಿಗುವ ಸಾಧ್ಯತೆ ಇದೆ.

93ರ ಇಳಿ ವಯಸ್ಸಿನ ದೇವೇಗೌಡರು ಮತ್ತೊಂದು ಅವಧಿಗೆ ರಾಜ್ಯಸಭೆ ಪ್ರವೇಶಿಸಲು ಉತ್ಸುಕ ರಾಗಿದ್ದಾರೆ. ಆದರೆ, ಅವರ ಪಕ್ಷಕ್ಕೆ ಸಂಖ್ಯಾ ಬಲ ಇಲ್ಲದ ಕಾರಣ, ಬಿಜೆಪಿ ಸಹಾಯಹಸ್ತ ಚಾಚಿದರೆ ರಾಜ್ಯಸಭೆ ಪ್ರವೇಶಿಸಬಹುದು ಎಂಬ ಲೆಕ್ಕಾಚಾರ ಜೆಡಿಎಸ್ ವರಿಷ್ಠರದ್ದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments