ಸರನಂ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಮಲ್ಲೇಶ್ವರಂ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಪ್ಯಾಲಿಯೇಟಿವ್ ಕೇರ್ ಯುನಿಟ್ ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಿದರು.
ಪ್ಯಾಲಿಯೇಟಿವ್ ಕೇರ್ ಕೇಂದ್ರದಲ್ಲಿ ಚಿಕಿತ್ಸೆ ನೀಡುವುದಿಲ್ಲ. ರೋಗಿಗಳು ಚಿಕಿತ್ಸೆಗೆ ಸ್ಪಂದಿಸದೇ ಇರುವ ಹಂತದಲ್ಲಿ, ಅಸಾಧಾರಣ ನೋವು, ಮಾನಸಿಕ ಒತ್ತಡದಿಂದ ಬಳಲುವ ರೋಗಿಗಳ ಮತ್ತು ಅಂತಹ ರೋಗಿಗಳ ಆರೈಕೆ ಮಾಡುತ್ತಿರುವ ಕುಟುಂಬ ವರ್ಗದವರಿಗೆ ಇದು ವರದಾನವಾಗಲಿದೆ.
ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕವಾಗಿ ಐದು ಬೆಡ್ ಗಳ ಒಂದು ವಾರ್ಡ್ ನಿರ್ಮಾಣ ಮಾಡಿದ್ದೇವೆ. ಮಾರಣಾಂತಿಕ ಅಥವಾ ತೀವ್ರವಾದ ಕಾಯಿಲೆಗಳಿಂದ ಬಳಲುತ್ತ, ಅಂತಿಮ ಹಂತದಲ್ಲಿರುವ ರೋಗಿಗಳಿಗೆ ಇದು ವಿಶೇಷ ಯೂನಿಟ್ ಆಗಿದೆ. ಕ್ಯಾನ್ಸರ್, ಕಿಡ್ನಿ ವೈಫಲ್ಯ ಸೇರಿದಂತೆ ಇತರ ರೋಗಿಗಳ ಆರೈಕೆಗೆ ಈ ವಾರ್ಡ್ ಸಹಾಯಕ.
ತೀವ್ರವಾದ ನೋವು, ಉಸಿರಾಟ ತೊಂದರೆ,ನರ ಸಂಬಂಧಿ ಕಾಯಿಲೆಯಿಂದ ಬಳಲುವವರು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ಈ ಕೇಂದ್ರ ಅನುಕೂಲ. ರೋಗವನ್ನು ಗುಣಪಡಿಸುವುದಕ್ಕೆ ಸಾಧ್ಯವಿಲ್ಲದ ಹಂತದಲ್ಲಿ ರೋಗಿಯ ದೈಹಿಕ ನೋವು & ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದೊಂದಿಗೆ ಇದನ್ನು ಮಾಡಿದ್ದೇವೆ. ರೋಗಿಗಳ ಕುಟುಂಬದವರಿಗೂ ಸೂಕ್ತ ತರಬೇತಿ ನೀಡಲಾಗುತ್ತದೆ.
ಪ್ಯಾಲಿಯೇಟಿವ್ ಕೇರ್ ಕೇಂದ್ರವನ್ನು ರಾಜ್ಯಾದ್ಯಂತ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ನಾಲ್ಕೈದು ಕಡೆ ಪ್ರಾರಂಭಿಸಿದ್ದೇವೆ. ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಸರನಂ ಸಂಸ್ಥೆಯ ಸಹಕಾರದೊಂದಿಗೆ ಉದ್ಘಾಟನೆಯಾದ ಈ ಯುನಿಟ್ ನಲ್ಲಿ ತಜ್ಞರ ತಂಡದಿಂದ ಹೊರರೋಗಿ ವಿಭಾಗ, ಡೇ ಕೇರ್ ವಿಭಾಗ (ಅತಿಯಾದ ನೋವು ಮತ್ತು ವಯಕ್ತಿಕ ಸಮಾಲೋಚನೆ),
ಸುಸಜ್ಜಿತ ಒಳ ರೋಗಿ ವಿಭಾಗ ಮತ್ತು ಕೆ. ಸಿ ಜನರಲ್ ಆಸ್ಪತ್ರೆಯಿಂದ 5-8 ಕಿಲೋ ವ್ಯಾಪ್ತಿಯಲ್ಲಿ ಮನೆಗೆ ತೆರಳಿ ಆರೈಕೆ ಮಾಡುವ ಮತ್ತು ಆರೈಕೆಗೆ ಪೂರಕ ತರಬೇತಿ ನೀಡುವ ಮೊಬೈಲ್ ಯುನಿಟ್ ಸಹ ಇರಲಿದೆ. ಮಾನವೀಯತೆ ದೃಷ್ಟಿಯಿಂದ ಈ ಸೇವೆ ನೀಡಲಾಗುತ್ತಿದ್ದು ಸರ್ವಜನಿಕರು ಇದರ ಉಪಯೋಗ ಪಡೆಯಬೇಕು.
ಕೆ ಸಿ ಜನರಲ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳು, ಸರನಂ ಇಂಡಿಯಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


