ಎಸ್ಐಆರ್ ವಿಷಯದಲ್ಲಿ ಅಪಪ್ರಚಾರ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಪ್ರಧಾನಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣುಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ವಿಧಾನಪರಿಷತ್ ಚುನಾವಣೆಯು ಮತಪತ್ರದ ಆಧಾರದಲ್ಲೇ ನಡೆದಿದೆ. ಆದರೂ ಕಾಂಗ್ರೆಸ್ ಪಕ್ಷ ಸೋತಿದೆ ಎಂದು ಅವರು ಗಮನ ಸೆಳೆದರು. ಜನತೆ ಕಾಂಗ್ರೆಸ್ಸನ್ನು ಇದೀಗ ದ್ವೇಷಿಸುವಂತಾಗಿದೆ ಎಂದು ತಿಳಿಸಿದರು.
ಮತದಾರರ ಸ್ಥಳಾಂತರ, ಸಾವು, ಹೊರದೇಶದಿಂದ ಅಕ್ರಮ ನುಸುಳುವಿಕೆಯ ಹಿನ್ನೆಲೆಯಲ್ಲಿ ಮತದಾರರ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸುವುದು ಅನಿವಾರ್ಯವಾಗುತ್ತದೆ. ಕಾಂಗ್ರೆಸ್ ಪಕ್ಷವು ಸುಪ್ರೀಂ ಕೋರ್ಟ್, ಚುನಾವಣಾ ಆಯೋಗದ ವಿರುದ್ಧ ಮಾತನಾಡುತ್ತಿತ್ತು ಎಂದು ವಿವರಿಸಿದರು.
ಕಳೆದ 20 ವರ್ಷಗಳಿಂದ ಎಸ್ಐಆರ್ ನಡೆದಿರಲಿಲ್ಲ. ಹೀಗೆ ಸುದೀರ್ಘ ಕಾಲ ನಡೆಯದ ಎಸ್ಐಆರ್ ವಿಚಾರದಲ್ಲಿ ಕ್ರಮ ಕೈಗೊಂಡಿದ್ದಕ್ಕಾಗಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಹಾಗೂ ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಸತ್ತವರ ಹೆಸರು ರದ್ದು ಮಾಡುವುದು, ಅಕ್ರಮ ನುಸುಳುಕೋರರ ಹೆಸರು ರದ್ದತಿ, ಎರಡು ಕಡೆ ಮತದಾನದ ಸಮಸ್ಯೆ ನಿವಾರಣೆ ಮಾಡಿ ನಿಷ್ಪಕ್ಷಪಾತ ಚುನಾವಣೆ ನಡೆಸಲು ಎಸ್ಐಆರ್ ಅನಿವಾರ್ಯ ಎಂದು ಅವರು ನುಡಿದರು.
ಸುಮಾರು 13 ಕೋಟಿ ಜನರ ಹೆಸರು ರದ್ದಾಗಿದೆ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಇದರ ಪೈಕಿ 6 ಕೋಟಿ 3 ಲಕ್ಷದಷ್ಟು ಮತಗಳು ಊರಿನ ಬದಲಾವಣೆ ಕಾರಣಕ್ಕಾಗಿ ರದ್ದಾಗಿವೆ. ಅವರಿಗೆ ಎರಡು ಕಡೆ ಮತ ಇರುವುದು ಸಾಧ್ಯವಿಲ್ಲ ಎಂದು ತಿಳಿಸಿದರು. ಸುಮಾರು 3 ಕೋಟಿ ಜನರು ಮೃತಪಟ್ಟಿದ್ದಾರೆ. ಸುಮಾರು 1 ಕೋಟಿ ಜನರು ಎರಡು ಕಡೆ ಮತಪಟ್ಟಿಯಲ್ಲಿ ಹೆಸರು ಹೊಂದಿದ್ದರು ಎಂದು ತಿಳಿಸಿದರು.
ಎರಡು ಕಡೆ ಇದ್ದವರ ಹೆಸರು ರದ್ದು ಮಾಡಿದ್ದು ಕಾಂಗ್ರೆಸ್, ಟಿಎಂಸಿಯಂಥ ಪಕ್ಷಗಳಿಗೆ ಸಮಸ್ಯೆ ತಂದೊಡ್ಡಿದೆ ಎಂದು ಟೀಕಿಸಿದರು. ಮೃತಪಟ್ಟವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುದು ತಪ್ಪೇ ಎಂದು ಅವರು ಪ್ರಶ್ನಿಸಿದರು. ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲಿ ಒಬ್ಬರೇ ಎರಡು ಮತ ಹೊಂದಿದ್ದವರ ಒಂದು ಕಡೆಯ ಹೆಸರು ರದ್ದು ಮಾಡಲಾಗಿದೆ ಎಂದು ಅವರು ವಿವರಿಸಿದರು. ಕರ್ನಾಟಕದಲ್ಲೂ 7 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಎರಡು ಕಡೆ ಮತದಾರರ ಪಟ್ಟಿಯಲ್ಲಿ ಇತ್ತು ಎಂದು ಗಮನ ಸೆಳೆದರು.
ಪ್ರಜಾಪ್ರಭುತ್ವದ ಸಶಕ್ತೀಕರಣಕ್ಕೆ ಎಸ್ಐಆರ್ ಅನಿವಾರ್ಯ
ಪ್ರಜಾಪ್ರಭುತ್ವದ ಸಶಕ್ತೀಕರಣಕ್ಕೆ ಎಸ್ಐಆರ್ ಅನಿವಾರ್ಯತೆ ಇತ್ತು ಎಂದ ಅವರು, ಅರ್ಹತೆ ಇದ್ದ ಯಾರ ಹೆಸರನ್ನೂ ಈ 13 ಕೋಟಿಯಲ್ಲಿ ರದ್ದು ಮಾಡಿಲ್ಲ ಎಂದು ಹೇಳಿದರು. ಬೋಗಸ್ ಮತ ಪಡೆಯುತ್ತಿದ್ದ ಹಾಗೂ ಮೃತ ಮತದಾರರ ಹೆಸರಿನಲ್ಲಿ ಬೇರೊಬ್ಬರಿಂದ ಮತದಾನ ಮಾಡಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಪರಿಷ್ಕರಣೆಯಿಂದ ಆತಂಕ ಉಂಟಾಗಿದೆ ಎಂದು ವಿಶ್ಲೇಷಿಸಿದರು. ಹತ್ತಾರು ವರ್ಷಗಳಿಂದ ನಕಲಿ ಮತದಾನ ನಡೆದಿತ್ತು. ಮೋದಿಯವರ ಸರಕಾರ ಇದಕ್ಕೆ ಅಂಕುಶ ಹಾಕಿದ್ದರಿಂದ ಕಾಂಗ್ರೆಸ್ಸಿಗರಿಗೆ ಆತಂಕ ಉಂಟಾಗಿದೆ ಎಂದರು.
ಫಾರಂ 6 ಬದಲಿಸಿದ್ದಾಗಿ ಅಪಪ್ರಚಾರ ಮಾಡುತ್ತಾರೆ. ಆದರೆ, ಅದಕ್ಕೆ ಸಾಕ್ಷಿ ಸಿಕ್ಕಿಲ್ಲ ಎಂದು ಅವರು ಹೇಳಿದರು. ಪಾಸ್ಪೋರ್ಟ್ ಮಂಜೂರಾತಿಗೆ ಎಸ್ಐಆರ್ ಅಂಕಿಅಂಶವನ್ನು ಪರಿಗಣಿಸುವುದಿಲ್ಲ ಎಂದು ಸಂಬಂಧಿತ ಇಲಾಖೆ ಸ್ಪಷ್ಟಪಡಿಸಿದೆ ಎಂದು ತಿಳಿಸಿದರು. ಸುಮಾರು 2.5 ಕೋಟಿ ಯುವ ಮತದಾರರು ಮತದಾನ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
ದೇಶವಿರೋಧಿಗಳಿಗೆ ವಿದೇಶಿ ನೆರವು ಲಭಿಸುತ್ತಿತ್ತು. ಕಾಕ್ರೋಚ್ ಪಕ್ಷದ ದೀಪ್ಕೆಗೆ ಅಮೆರಿಕದಿಂದ, ಆಶುತೋಷ್ಗೆ ಪಾಕಿಸ್ತಾನದ ರಾಜಕೀಯ ನೇತಾರರಿಂದ ಹಣಕಾಸಿನ ನೆರವು ಲಭಿಸುತ್ತಿತ್ತು ಎಂದು ತಿಳಿಸಿದರು. ಇವರೆಲ್ಲರೂ ವಿಶ್ವಾಸಾರ್ಹ ನಾಯಕರಲ್ಲ ಎಂದರು. ಕರ್ನಾಟಕದಲ್ಲೂ ಈಚೆಗೆ ಪ್ರಶ್ನೆಪತ್ರಿಕೆ ಸೋರಿಕೆ ಆಗಿತ್ತು. ಇಲ್ಲಿನ ಸಂಬಂಧಿತ ಸಚಿವರು ರಾಜೀನಾಮೆ ಕೊಡಲಿಲ್ಲವೇಕೆ ಎಂದು ಅವರು ಕೇಳಿದರು. ಮೋದಿಯವರ ವಿರುದ್ಧ ಟೀಕೆ, ಅವರ ವಿರುದ್ಧ ಕೆಟ್ಟ ಶಬ್ದಗಳ ಬಳಕೆ ಖಂಡನಾರ್ಹ ಎಂದು ತಿಳಿಸಿದರು.
ಬೀದಿಯಲ್ಲಿ ಘೋಷಣೆ ಕೂಗಿದರೆ ಸರಕಾರ ಬದಲಾಗದು..
ಜನರು, ಯುವಜನತೆ ಜಾಗೃತರಾಗಿದ್ದಾರೆ. ಸುಳ್ಳು, ಸತ್ಯವನ್ನು ಅವರು ಅರಿತುಕೊಳ್ಳುತ್ತಿದ್ದಾರೆ ಎಂದರು. ಬೀದಿಯಲ್ಲಿ ಪ್ರತಿಭಟನೆ, ಘೋಷಣೆ ಕೂಗುವುದರಿಂದ ಚುನಾಯಿತ ಸರಕಾರದ ಬದಲಾವಣೆ ಅಸಾಧ್ಯ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಕಾಂಗ್ರೆಸ್ ಪಕ್ಷವು ಎಸ್ಐಆರ್ ವಿಷಯದಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಮಾಜಿ ಸಚಿವ ಮತ್ತು ಶಾಸಕ ಎಸ್. ಸುರೇಶ್ ಕುಮಾರ್ ಅವರು ಭಾಗವಹಿಸಿದ್ದರು.


