Homeಕರ್ನಾಟಕಸ್ಟಿಂಗ್ | ಹೇಳಿಕೆ ಬದಲಿಸಿದ ಮಹಿಳೆಯನ್ನು ನ್ಯಾಯಾಲಯದ ಮುಂದೆ ಏಕೆ ಹಾಜರುಪಡಿಸಿಲ್ಲ: ಎಚ್ ಡಿ ಕೆ...

ಸ್ಟಿಂಗ್ | ಹೇಳಿಕೆ ಬದಲಿಸಿದ ಮಹಿಳೆಯನ್ನು ನ್ಯಾಯಾಲಯದ ಮುಂದೆ ಏಕೆ ಹಾಜರುಪಡಿಸಿಲ್ಲ: ಎಚ್ ಡಿ ಕೆ ಪ್ರಶ್ನೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿರುವ ಸ್ಟಿಂಗ್ ಆಪರೇಷನ್ ಸಂದರ್ಭದಲ್ಲಿ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದ ಕೇರಳದ ಮಹಿಳೆ, ಅನಂತರ ಹೇಳಿಕೆ ಬದಲಿಸಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಒಂದು ವೇಳೆ ಆಕೆ ಹೇಳಿಕೆಯನ್ನು ಬದಲಿಸಿದ್ದರೆ ಅವರನ್ನು ಕರೆತಂದು ನ್ಯಾಯಾಲಯದ ಮುಂದೆ ಯಾಕೆ ಹಾಜರುಪಡಿಸಿಲ್ಲ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಪೊಲೀಸರನ್ನು ಪ್ರಶ್ನಿಸಿದರು.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು; ಆ ಮಹಿಳೆ ತನ್ನ ಹೇಳಿಕೆಗಳನ್ನು ಬದಲಿಸಿದ್ದರೆ ಅವರು ಕೂಡ ಈ ಸ್ಟಿಂಗ್ ಪಿತೂರಿಯ ಭಾಗವೇ ಆಗುತ್ತಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಆರೋಪಿ ಎಂದು ಹೆಸರಿಸಬೇಕಾಗುತ್ತದೆ. ಇದನ್ನು ಪೊಲೀಸರು ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಆ ಪ್ರಕರಣದ ತನಿಖೆಯ ವಿಚಾರಗಳನ್ನು ಪೊಲೀಸ್ ಆಯುಕ್ತರು ಬಹಿರಂಗ ಮಾಡಿರುವ ಬಗ್ಗೆ ಕೆಂಡಾಮಂಡಲರಾದ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು; ಅವರ ಹೇಳಿಕೆ ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದಂತೆ ಆಗಿದೆ ಎಂದರು.

ಪೊಲೀಸ್ ಆಯುಕ್ತರು ತಮ್ಮ ಹೇಳಿಕೆಯ ಮೂಲಕ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ. ಸರ್ಕಾರಕ್ಕೆ ಹೇಗೆ ಬೇಕೋ ಹಾಗೆ ತನಿಖೆ ಮಾಡಿ ತೇಪೆ ಹಚ್ಚಲು ಇವರು ಶತ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಚಿವರು ದೂರಿದರು.

ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಿ ಪೊಲೀಸರು ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ

2026 ಅಕ್ಟೋಬರ್ 21ರಂದು ಬೆಂಗಳೂರು ಪೊಲೀಸರು ಹೊರಡಿಸಿದ ಪತ್ರಿಕಾ ಹೇಳಿಕೆಯನ್ನು ಉಲ್ಲೇಖಿಸಿದ ಕುಮಾರಸ್ವಾಮಿ ಅವರು; ಈ ತನಿಖೆಯು ಅಸಲಿ ಸತ್ಯವನ್ನು ಹೊರಗೆಳೆಯುವ ಬದಲಿಗೆ ಸಿದ್ದರಾಮಯ್ಯ ಅವರಿಗೆ ‘ಕ್ಲೀನ್ ಚಿಟ್’ ನೀಡಿ ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ. ಬಹುಶಃ ಅದಕ್ಕೆ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಅವರು ದೂರಿದರು.

ಅಷ್ಟೇ ಅಲ್ಲ, ಸ್ಟಿಂಗ್ ಆಪರೇಷನ್ ಎನ್ನುವುದು ಕಟ್ಟುಕಥೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಪೊಲೀಸರು ಹೇಳಿದ್ದಾರೆ. ಕಟ್ಟುಕಥೆ ಎಂದಾದ ಮೇಲೆ ಇನ್ನೂ ತನಿಖೆ ಯಾಕೆ ಮಾಡುತ್ತಿದ್ದೀರಿ? ಯಾರ ವಿರುದ್ಧ ಸಂಚು ಮಾಡಲು ತನಿಖೆ ಮುಂದುವರಿಸಿದ್ದೀರಿ ಎಂದು ಅವರು ಪ್ರಶ್ನೆ ಮಾಡಿದರು.

ಅಷ್ಟೇ ಅಲ್ಲ, ಕೇರಳಕ್ಕೆ ಹೋಗಿ ಸ್ಟಿಂಗ್ ಮಾಡಿದ್ದು ನಾನೇ. ಐ ಯಾಮ್ ಕಿಂಗ್ ಆಫ್ ಸ್ಟಿಂಗ್, ವೀಡಿಯೋದಲ್ಲಿ ಇರುವ ಧ್ವನಿಯೂ ನನ್ನದೇ ಎಂದು ಒಪ್ಪಿಕೊಂಡಿರುವ ವ್ಯಕ್ತಿಯನ್ನು ಇನ್ನೂ ಬಂಧಿಸಿಲ್ಲ ಯಾಕೆ? ರಾಕೇಶ್ ಶೆಟ್ಟಿ, ಕೃಪಾ ಆಳ್ವ ಸೇರಿ ನನ್ನ ವಿರುದ್ಧ ಸ್ಟಿಂಗ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅವರ ಪುತ್ರ, ಸಚಿವ ಯತೀಂದ್ರ ಅವರು ಇದೇ ಹೆಸರುಗಳನ್ನು ಹೇಳಿದ್ದಾರೆ. ಹಾಗಿದ್ದ ಮೇಲೆ ಅವರನ್ನು ಯಾಕೆ ಬಂಧನ ಮಾಡಲಿಲ್ಲ? ತನಿಖೆಯಲ್ಲಿ ಅವರಿಗೊಂದು, ಇವರಿಗೊಂದು ಎನ್ನುವುದು ಇರುತ್ತದಾ? ಎಂದು ಸಚಿವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಈ ತನಿಖೆಯ ಬಗ್ಗೆ ಸಾಕಷ್ಟು ಅನುಮಾನಗಳು ಇವೆ. ಶುರುವಿನಲ್ಲಿ ತನಿಖಾಧಿಕಾರಿ (IO) ಆಗಿದ್ದ ಇನ್ಸ್‌ಪೆಕ್ಟರ್ ಹಂತದ ಅಧಿಕಾರಿಯನ್ನು ಅಲ್ಲಿಂದ ತೆಗೆದು ಹಾಕಿದರು. ನಂತರ ಇನ್ನೊಬ್ಬ ಅಧಿಕಾರಿಯನ್ನು ನೇಮಕ ಮಾಡಿದ್ದಾರೆ. ಇದು ಪ್ರಶ್ನಾರ್ಹವಾಗಿದೆ ಎಂದರು ಸಚಿವರು.

ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ

ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ ಎನ್ನುವುದೇ ಅನುಮಾನ ಎಂದ ಕುಮಾರಸ್ವಾಮಿ ಅವರು; ಸ್ಟಿಂಗ್ ಆಪರೇಷನ್ ವಿಡಿಯೋ ಅಸಲಿಯೇ ಅಥವಾ ಕೃತಕವಾಗಿ ಸೃಷ್ಟಿಸಿದ್ದೇ ಎಂಬುದನ್ನು ಹಾಗೂ ಅದನ್ನು ಉದ್ದೇಶಪೂರ್ವಕವಾಗಿ ಎಡಿಟ್ ಮಾಡಲಾಗಿದೆಯೇ ಅಥವಾ ವ್ಯವಸ್ಥಿತವಾಗಿ ರೂಪಿಸಲಾಗಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸಬೇಕು. ತಮ್ಮ ಹೊಣೆಗಾರಿಕೆಯನ್ನು ಅವರು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆಯೇ? ಎಂದರು.

ಪೊಲೀಸರು ಏಕಪಕ್ಷೀಯವಾಗಿ ನಡೆಯುತ್ತಿದೆ. ಅದರ ಬಗ್ಗೆ ನನಗೆ ಮಾಹಿತಿ ಇದೆ. ನಮ್ಮ ಪಕ್ಷದ ಸೋಶಿಯಲ್ ಮೀಡಿಯಾ ವಿಭಾಗದಲ್ಲಿ ಕೆಲಸ ಮಾಡುವ ಯುವಕನ ಮನೆಗೆ ಸರ್ಚ್ ಮಾಡಲು ಹೋಗಿದ್ದ ಪೊಲೀಸರು ಮೊಬೈಲ್ ಗಾಗಿ ಅವರ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಾರೆ. ಬ್ಯಾಂಕ್ ಪಾಸ್ ಬುಕ್ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾರೆ. ಸರ್ಚ್ ಮುಗಿಸಿಕೊಂಡು ವಾಪಸ್ ಬಂದಮೇಲೆ ನನ್ನದು ಚಿನ್ನದ ಬ್ರಾಸ್ ಲೈಟ್ ಕಳೆದುಹೋಗಿದೆ ಎಂದು ನಮ್ಮ ಕಾರ್ಯಕರ್ತನ ಪತ್ನಿಯ ಮೇಲೆ ಎಫ್ ಐಆರ್ ಮಾಡಿಸುತ್ತಾರೆ. ಅವರ ಮನೆಯ ನೆರೆಹೊರೆಯವರ ಮೇಲೆಯೂ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನು ಇದನ್ನು ತನಿಖೆ ಎಂದು ಹೇಳಲು ಸಾಧ್ಯವೇ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ತನಿಖೆ ನೆಪದಲ್ಲಿ ಪೊಲೀಸರು ನಮ್ಮವರನ್ನು ಬೆದರಿಸುತ್ತಿದ್ದಾರೆ

ತನಿಖೆ ನೆಪದಲ್ಲಿ ಪೊಲೀಸರು ನಮ್ಮವರನ್ನು ಬೆದರಿಸುತ್ತಿದ್ದಾರೆ ಎಂದ ಸಚಿವ ಕುಮಾರಸ್ವಾಮಿ ಅವರು; ಒಂದೇ ದಿಕ್ಕಿನಲ್ಲಿ ತನಿಖೆ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತಿದೆ. ಬೆಂಗಳೂರು ಪೊಲೀಸರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಹಾಗೂ ಪೊಲೀಸ್ ಆಯುಕ್ತ ನೀಡಿರುವ ಹೇಳಿಕೆಗಳು ಕೂಡ ಪರಸ್ಪರ ವೈರುಧ್ಯಗಳಿವೆ. ಅಪ್ಲೋಡ್ ಮಾಡಿರುವ ವಿಷಯದ ಬಗ್ಗೆ ಇವರು ತೋರಿಸುತ್ತಿರುವ ಕಾಳಜಿ, ಸ್ಟಿಂಗ್ ಮಾಡಿ ವಿಡಿಯೋ ರೆಕಾರ್ಡಿಂಗ್ ಮಾಡಿರುವ ಪಿತೂರಿಯ ಬಗ್ಗೆ ತನಿಖೆಯನ್ನು ಮಾಡುತ್ತಿಲ್ಲ ಎಂದು ಸಚಿವರು ದೂರಿದರು.

ನೂರಾರು ಸ್ಪ್ರಿಂಗ್ ವಿಡಿಯೋಗಳನ್ನು ಮಾಡಿಕೊಂಡು ಅಧಿಕಾರಿಗಳು, ಉದ್ದಿಮೆದಾರರು ಹಾಗೂ ಅನೇಕ ಗಣ್ಯ ವ್ಯಕ್ತಿಗಳನ್ನು ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿರುವ ಪ್ರವೃತ್ತಿಯನ್ನು ಮಟ್ಟ ಹಾಕದಿದ್ದರೆ ಅದು ಪೊಲೀಸ್ ಇಲಾಖೆಗೆ ಕಂಟಕವಾಗುತ್ತದೆ ಎಂದು ಎಚ್ಚರಿಸಿದ ಕೇಂದ್ರ ಸಚಿವರು; ನಾನು ಯಾವುದೇ ವ್ಯಕ್ತಿಯನ್ನು ವೈಯಕ್ತಿಕವಾಗಿ ಗುರಿ ಮಾಡಿಕೊಂಡು ಈ ವಿಷಯವನ್ನು ಹೇಳುತ್ತಿಲ್ಲ. ಬದಲಿಗೆ ಸಮಾಜದ ಹಿತದೃಷ್ಟಿಯಿಂದ ಇಷ್ಟೆಲ್ಲವನ್ನು ಹೇಳಬೇಕಾಗುತ್ತದೆ ಎಂದರು.

ಮಾಧ್ಯಮಗೋಷ್ಠಿಯಲ್ಲಿ ಡಿಕೆಶಿ ಭಾಷಣ ಕೇಳಿಸಿದ ಎಚ್ಡಿಕೆ

ಹಿಂದೆ ಡಿಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಗಂಟೆಗಟ್ಟಲೆ ಭಾಷಣ ಮಾಡಿದರು. ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ನಡೆಯುತ್ತಿದ್ದ ತನಿಖೆಯ ಕುರಿತಂತೆ ಅವರು ದೀರ್ಘವಾಗಿ ಚರ್ಚೆ ಮಾಡಿ ಪೊಲೀಸರ ತನಿಖೆ ಯಾವ ದಿಕ್ಕಿನಲ್ಲಿ ಇರಬೇಕು ಎಂಬ ಬಗ್ಗೆ ಉಪದೇಶ ಮಾಡಿದ್ದರು. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು ಎಂದು ಭಾಷಣ ಬಿಗಿದಿದ್ದರು. ಅಂತಹ ವ್ಯಕ್ತಿ ಮುಖ್ಯಮಂತ್ರಿಯಾಗಿರುವ ಈ ಸರಕಾರದಲ್ಲಿ ತನಿಖೆ ಯಾವ ರೀತಿ ನಡೆಯುತ್ತಿದೆ ಎಂಬುದು ಎಂಬುದನ್ನು ನಾವು ನೋಡುತ್ತಿದ್ದೇವೆ ಎಂದು ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಬಳಿ ತಾಂತ್ರಿಕ ಸಾಕ್ಷಿಗಳಿವೆ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಒಂದು ವೇಳೆ ಅವರು ಬಳಿ ಅಂತಹ ಸಾಕ್ಷಿಗಳಿದ್ದರೆ ಗಂಧದ ಕಡ್ಡಿ ಹಚ್ಚಿ ಪೂಜೆ ಮಾಡಲಿ ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.

ಹಾಗೆಯೇ ಪೊಲೀಸ್ ಆಯುಕ್ತರು ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಒತ್ತಡಕ್ಕೆ ಮಾಡಿದ ನನ್ನ ಬಗ್ಗೆ ರಜಾದಿನವಾದ ಭಾನುವಾರ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಯನ್ನು ಓಲೈಸಲು ಇಂತಹ ಹೇಳಿಕೆ ನೀಡಿ ತಾವೇ ಮುಜುಗರಕ್ಕೆ ಸಿಲುಕಿದ್ದಾರೆ. ತನಿಖಾ ಹಂತದಲ್ಲಿ ಯಾವುದೇ ವಿಷಯವನ್ನು ಬಹಿರಂಗವಾಗಿ ಹೇಳಬಾರದು ಎನ್ನುವ ಸುಪ್ರೀಂ ಕೋರ್ಟ್ ಆದೇಶವನ್ನು ಅವರು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಸಚಿವರು ಹೇಳಿದರು.

ಡಿಜಿ ಸಲೀಂ ಅವರಿಗೆ ಎಚ್ಚರಿಕೆ

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸಲೀಂ ಅವರ ಬಗ್ಗೆ ಅತ್ಯಂತ ಖಾರವಾಗಿ ಪ್ರತಿಕ್ರಿಯಿಸಿದ ಸಚಿವ ಕುಮಾರಸ್ವಾಮಿ ಅವರು; ಸಲೀಂ ಅವರೇ ಚಕ್ರ ತಿರುಗುತ್ತದೆ. ಮೇಲೆ ಇದ್ದವರು ಕೆಳಗಡೆ ಬರಬೇಕು, ಕೆಳಗಡೆ ಇರುವವರು ಮೇಲೆ ಹೋಗಲೇಬೇಕು. ಇದು ಪ್ರಕೃತಿ ನಿಯಮ. ಒತ್ತಡಕ್ಕೆ ಮಣಿದು ಕೆಲಸ ಮಾಡಬೇಡಿ. ಮರ್ಜಿಗೆ ಕೆಲಸ ಮಾಡಿದರೆ ಅಪಾಯಕ್ಕೆ ಸಿಲುಕುವುದು ನೀವೇ ಆಗಿರುತ್ತೀರಿ ಎಂದು ನೇರವಾಗಿ ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯೋತ್ಸವದ ದಿನ ಈ ಸರಕಾರ ಯಾವ ರೀತಿ ಕರಾಮತ್ತು ನಡೆಸಿದೆ ಎಂಬುದನ್ನು ನಾನು ಗಮನಿಸಿದ್ದೇನೆ. ಅಸಲಿ ಆರೋಪಿಗಳನ್ನು ಬಿಟ್ಟು ಕೇವಲ ವಿಡಿಯೋ ಅಪ್ ಲೋಡ್ ನೆಪದಲ್ಲಿ ನಮ್ಮ ಕಾರ್ಯಕರ್ತರ ಬೆನ್ನು ಬಿದ್ದಿದ್ದೀರಿ. ಅದರಲ್ಲಿ ನನ್ನ ಹೆಸರನ್ನು ಹೇಳಿದ ತಂದಿದ್ದೀರಿ. ನಾನು ನಿಮ್ಮ ಬೆದರಿಕೆಗಳಿಗೆ ಎದುರುವ ಪೈಕಿಯಲ್ಲ. ಬೇಕಿದ್ದರೆ ನನ್ನನ್ನು ಒಮ್ಮೆ ಟಚ್ ಮಾಡಿ ನೋಡಿ. ಅದು ಹೋಗಿ ಎಲ್ಲಿಗೆ ಮುಟ್ಟುತ್ತದೆ ಎಂಬುದು ನಿಮಗೆ ಗೊತ್ತಾಗುತ್ತದೆ. ಅಪಾಯದ ಜೊತೆ ನೀವು ಚೆಲ್ಲಾಟ ಆಡುತ್ತಿದ್ದೀರಿ. ನೀವೆಲ್ಲರೂ ತಕ್ಕ ಪಾಠ ಅನುಭವಿಸುತ್ತಿರಿ ಎಂದು ಸಚಿವರು ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments