ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ನಡೆಯುತ್ತಿರುವ ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ಇಂದಿಗೆ 50 ವರ್ಷಗಳನ್ನು ಪೂರೈಸಿದ್ದು, ವಸಂತನಗರದ ಲಿಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಾಂಕೇತಿಕ ಕಾರ್ಯಕ್ರಮವನ್ನು ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಕೆ.ಹೆಚ್ ಮುನಿಯಪ್ಪ ಅವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವರು 1976 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಇಂದಿಗೆ 50 ವಸಂತಗಳನ್ನು ಪೂರೈಸಿದೆ ಎಂದು ಹೇಳಿದರು. ದೇವರಾಜ್ ಅರಸು ಮುಖ್ಯಮಂತ್ರಿಗಳಾಗಿದ್ದಾಗ ಆರಂಭವಾದ ಈ ನಿಗಮವು ಪ್ರಥಮ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಖರ್ಗೆ ರವರು ಕಾರ್ಯನಿರ್ವಹಿಸಿದ್ದು ಈಗ ಅವರು ರಾಷ್ಟ್ರದ ನಾಯಕರಾಗಿ ಎ.ಸಿ.ಸಿ ಅಧ್ಯಕ್ಷರಾಗಿ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದು, ಈ ನಿಗಮದ ಅಧ್ಯಕ್ಷರುಗಳು ಸಚಿವರು, ಸಂಸದರಾಗಿ ಕಾರ್ಯನಿರ್ವಹಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಈ ನಿಗಮವು ಪರಿಶಿಷ್ಟ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಯೋಜನೆಗಳ ಮೂಲಕ ಸೇವೆ ನೀಡುತ್ತಿರುವುದರ ಕುರಿತು ವಿವರಿಸಿದರು.
ಸುಪ್ರೀಂ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ಮಹತ್ವದ ತೀರ್ಮಾನವನ್ನು ಹಿಂದಿನ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿಯ 101 ಜಾತಿಗೂ ಒಳಮೀಸಲಾತಿ ಅನುಷ್ಟಾನಗೊಳಿಸಲಾಗಿದ್ದು, ಮೀಸಲಾತಿಯೂ ಶೇ. 50 ರಷ್ಟು ಮೀರಬಾರದೆಂಬ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಶೇ. 15 ರಷ್ಟು ಮೀಸಲಾತಿ ಅನ್ವಯ ಶಿಕ್ಷಣ, ಉದ್ಯೋಗದಲ್ಲಿ ಅಳವಡಿಸಿದ್ದು, ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆ ಅನುಗುಣವಾಗಿ ಹೆಚ್ಚಿಸಲು ಕ್ಯಾಬಿನೇಟ್ನಲ್ಲಿ ತೀರ್ಮಾನಿಸಿದ್ದು, ಸುಪ್ರೀಂ ಕೋರ್ಟಿನ ಮೊರೆ ಹೋಗಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ನಾನು ಎನ್. ರಾಚಯ್ಯ, ಬಸವಲಿಂಗಪ್ಪ ರವರ ಹಾದಿಯಲ್ಲಿ ಬೆಳೆದು ಬಂದವನು. ಅವರ ಕಿಚ್ಚು ನನಗೆ ಪ್ರೇರಕ.
15 ವರ್ಷದ ಯುವಕನಿದ್ದಾಗಲೆ ಹೋರಾಟಕ್ಕಿಳಿದು, ಸಾಮಾಜಿಕ ನ್ಯಾಯ ಒದಗಿಸುವ ಮನೋಭಾವವನ್ನು ಹೊಂದಿದ್ದೆ ಎಂದು ತಮ್ಮ ಹಿಂದಿನ ಜೀವನದ ಕುರಿತು ಹೇಳಿದರು.
ನಮ್ಮ ಕುಟುಂಬ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬವಾಗಿದ್ದು, ನಮ್ಮ ತಂದೆ ಹನುಮಪ್ಪ ಅವರ ಹಾದಿಯಾಗಿ ನಮ್ಮ ಊರಿನ ಸುಮಾರು 30 ಕುಟುಂಬಗಳ 20 ಜನ ಅಂದು ಸ್ವಾಂತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು ಎಂದು ಸ್ಮರಿಸಿಕೊಂಡರು. ಆ ಹಿನ್ನೆಲೆಯಲ್ಲಿ ಬಂದ ನಾನು ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಲಿಡ್ಕರ್ ಸಂಸ್ಥೆಯು ಲಿಬರ್ಟಿ ಮತ್ತು ಬಾಟಾ ಸಂಸ್ಥೆಗಳ ಜೊತೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಸಿದ್ದಿ ಪಡೆಯಬೇಕು.
ಚರ್ಮಕುಶಲಕರ್ಮಿಗಳು ತಯಾರಿಸಿದ ಚರ್ಮೋತ್ಪನ್ನಗಳು ಆಯಾ ಜಿಲ್ಲೆಯಲ್ಲೇ ಶೋರೂಂ ಗಳನ್ನು ತೆರೆಯುವ ಮೂಲಕ ಮಾರಾಟವಾಗಲು ಕ್ರಮವಹಿಸಬೇಕು ಎಂದರು. ಲಿಡ್ಕರ್ ಸಂಸ್ಥೆಯು ಖಾಸಗಿ ಕಂಪನಿಗಳ ಜೊತೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಸಿದ್ದಿಯನ್ನು ಪಡೆದಾಗ ಚರ್ಮೋತ್ಪನ್ನಗಳ ಬೇಡಿಕೆ ಹೆಚ್ಚಾಗಿ ಉತ್ಪಾದನೆ ಹೆಚ್ಚಾಗುತ್ತದೆ.
ಹೆಚ್. ಆಂಜನೇಯರವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಹೋಬಳಿಗೊಂದು ವಸತಿ ಶಾಲೆ ನಿರ್ಮಾಣ ಮಾಡುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದ್ದರು.
ಒಟ್ಟಾರೆ ರಾಜ್ಯದಲ್ಲಿ 874 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, 60 ವಸತಿ ಶಾಲೆಗಳ ನಿರ್ಮಾಣ ಉಳಿದಿದ್ದು, ಈಗಾಗಲೇ 40 ಶಾಲೆಗಳಿಗೆ ಅನುಮತಿ ದೊರೆತಿದ್ದು, ಉಳಿದ 20 ವಸತಿ ಶಾಲೆಗಳ ನಿರ್ಮಾಣವಾದರೆ ಹೋಬಳಿಗೊಂದು ವಸತಿ ಶಾಲೆ ಆದಂತಾಗುತ್ತದೆ.
ಮುಂದಿನ ಡಿಸೆಂಬರ್ ತಿಂಗಳಿನಲ್ಲಿಈ ನಿಗಮದ ಚರ್ಮಕುಶಲಕರ್ಮಿಗಳ ವಸ್ತುಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಯೋಜನೆ ರೂಪಿಸಿ ಉತ್ತಮ ಮಟ್ಟದಲ್ಲಿ ಕಾರ್ಯಕ್ರಮ ಮಾಡಲು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಭಾಗವಹಿಸುವ ಹಿನ್ನೆಲೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಸಂಸದ ಬಿ.ಎನ್ ಚಂದ್ರಪ್ಪ, ಸರ್ಕಾರದ ಕಾರ್ಯದರ್ಶಿ ಕೆ.ಪಿ ಮೋಹನ್ರಾಜ್, ಸರ್ಕಾರದ ಆಯುಕ್ತರಾದ ಎನ್.ಎಂ.ನಾಗರಾಜ್, ಲಿಡ್ಕರ್ ನಿಗಮದ ಅಧ್ಯಕ್ಷರಾದ ಮುಂಡರಗಿ ನಾಗರಾಜ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನರೇಂದ್ರ , ಅಲೆಮಾರಿ ನಿಗಮದ ಅಧ್ಯಕ್ಷರಾದ ಪಲ್ಲವಿ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಅಶೋಕ್ ಸಾಲಪ್ಪ, ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಮಂಜುನಾಥ್, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ರಸಾದ್, ಲಿಡ್ಕರ್ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಹೆಚ್. ನಟರಾಜ್ ಹಾಗೂ ಲಿಡ್ಕರ್ನ ಮಾಜಿ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ಉಪಸ್ಥಿತರಿದ್ದರು.


