ಇಂದೋರ್‌ನ ರಾಜಾ ರಘುವಂಶಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿಯನ್ನು ಬಂಧಿಸಲಾಗಿದೆ. ಸುಪಾರಿ ಹಂತಕರಿಂದ ಪತ್ನಿ ಸೋನಂ ಕೊಲೆಗೆ ಸಂಚು ಮಾಡಿರುವುದಾಗಿ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಥೇಟ್ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾದಂತೆ ಮೇಘಾಲಯದಲ್ಲಿ ಕೊಲೆಯೊಂದು ನಡೆದಿದೆ. ಆದರೆ ಇದು ಸ್ವಲ್ಪ ಭಿನ್ನವಾಗಿದೆ. ಸಿನಿಮಾದಲ್ಲಿ ಆಗತಾನೇ ಹೊಸದಾಗಿ ಮದುವೆಯಾದ ಪತ್ನಿಯನ್ನು ಪತಿ ಆಳವಾದ ಕಮರಿಗೆ ತಳ್ಳಿ ಕೊಲೆ ಮಾಡಿದ್ದರೆ, ಇಲ್ಲಿ ಪತಿಯನ್ನು ಕಮರಿಗೆ ತಳ್ಳಿ ಹತ್ಯೆ ಮಾಡಿ ಬಳಿಕ ನಾಪತ್ತೆಯಾಗಿದ್ದ ಪತ್ನಿ ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ.
ಉತ್ತರ ಪ್ರದೇಶದ ಗಾಜಿಪುರದಲ್ಲಿ ಸೋನಂ ಪತ್ತೆಯಾಗಿದ್ದು, ಅಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ. ರಾತ್ರಿ ನಡೆಸಿದ ದಾಳಿಯಲ್ಲಿ ಇತರ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ರಘುವಂಶಿಯನ್ನು ಕೊಲ್ಲಲು ಸೋನಂ ತಮಗೆ ಸುಪಾರಿ ನೀಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೇಘಾಲಯದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಇಡಶಿಶಾ ನೋಂಗ್ರಾಂಗ್ ಅವರು ಹೇಳಿರುವುದಾಗಿ ವರದಿಗಳು ತಿಳಿಸಿವೆ.
“ಒಬ್ಬ ವ್ಯಕ್ತಿಯನ್ನು ಉತ್ತರ ಪ್ರದೇಶದಿಂದ ಬಂಧಿಸಲಾಗಿದೆ. ಇಬ್ಬರು ಆರೋಪಿಗಳನ್ನು ಎಸ್‌ಐಟಿ ಇಂದೋರ್‌ನಿಂದ ಬಂಧಿಸಿದೆ. ಸೋನಂ ನಂದಗಂಜ್ ಪೊಲೀಸ್ ಠಾಣೆಯಲ್ಲಿ ಶರಣಾದ ನಂತರ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ರಾಜಾ ರಘುವಂಶಿ ಮತ್ತು ಸೋನಂ ತಮ್ಮ ಹನಿಮೂನ್ ಗಾಗಿ ಮೇಘಾಲಯಕ್ಕೆ ಪ್ರಯಾಣಿಸಿದ್ದರು ಮತ್ತು ಮೇ 23 ರಂದು ನಾಪತ್ತೆಯಾಗುವ ಮುನ್ನಾ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದರು. ಜೂನ್ 2 ರಂದು ರಾಜಾ ಅವರ ದೇಹವು ಕಮರಿಯಲ್ಲಿ ಪತ್ತೆಯಾಗಿದ್ದರೆ, ಸೋನಂಗಾಗಿ ಹುಡುಕಾಟ ನಡೆಸಲಾಯಿತು. ಪ್ರಕರಣವನ್ನು ಭೇದಿಸಿರುವ ಪೊಲೀಸರನ್ನು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಶ್ಲಾಘಿಸಿದ್ದಾರೆ.