Homeರಾಜಕೀಯಡೀಸೆಲ್ ಬಲ್ಕ್ ಖರೀದಿಗೆ ನಿರ್ಬಂಧ | ರೈತರು, ನಗರವಾಸಿ, ಸಾರಿಗೆ, ಸಣ್ಣ ಕೈಗಾರಿಗೆಗಳಿಗೆ ಕೇಂದ್ರದಿಂದ ದುಬಾರಿ...

ಡೀಸೆಲ್ ಬಲ್ಕ್ ಖರೀದಿಗೆ ನಿರ್ಬಂಧ | ರೈತರು, ನಗರವಾಸಿ, ಸಾರಿಗೆ, ಸಣ್ಣ ಕೈಗಾರಿಗೆಗಳಿಗೆ ಕೇಂದ್ರದಿಂದ ದುಬಾರಿ ಬರೆ

ಭಾರತದ ಇತಿಹಾಸದಲ್ಲಿಯೇ ಜನಸಾಮಾನ್ಯರು, ರೈತರು, ವೇತನ ವರ್ಗ, ಸಾರಿಗೆದಾರರು, ಸಣ್ಣ ಉದ್ಯಮದವರಿಗೆ ಬಿಜೆಪಿ ಅತ್ಯಂತ ದುಬಾರಿ ಪಕ್ಷವೆಂದು ಸಾಬೀತಾಗುವಂತೆ ಕಾಣುತ್ತಿದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.

2026ರ ಜೂನ್ 12ರಂದು ಭಾರತ ಸರ್ಕಾರದ ಪೆಟ್ರೋಲಿಯಂ ಸಚಿವಾಲಯ ಒಂದು ಆದೇಶಹೊರಡಿಸಿದ್ದು, ಇನ್ನು ಮುಂದೆ 200 ಲೀ. ಗಿಂತ ಹೆಚ್ಚು ಡೀಸೆಲ್ ಅನ್ನು ಪೆಟ್ರೋಲ್ ಪಂಪ್‌ಗಳಲ್ಲಿ ಮಾರಾಟ ಮಾಡದಂತೆ ನಿರ್ಬಂಧಿಸಲಾಗಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿಮಗೆ 200 ಲೀ. ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಡೀಸೆಲ್ ಬೇಕಾದಲ್ಲಿ ನೀವು ‘ಬಲ್ಕ್ ಬೈಯರ್’ ಬಳಿ ದೊಡ್ಡ ಪ್ರಮಾಣದ ಡೀಸೆಲ್ ಖರೀದಿಸಬೇಕು. ಇದಕ್ಕೆ ಕಾರಣ, ಪೆಟ್ರೋಲ್ ಪಂಪ್‌ನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 95 ರಿಂದ 97 ರೂ. ಇದೆ. ಆದರೆ, ಬಲ್ಕ್ ಬೈಯರ್ ಬಳಿ ಖರೀದಿಸುವಾಗ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 135 ರಿಂದ 140 ರೂ. ಇದೆ. ಅಂದರೆ ಪ್ರತಿ ಲೀಟರ್‌ಗೆ 40 ರೂಪಾಯಿಗಳ ವ್ಯತ್ಯಾಸ ಎಂದಿದ್ದಾರೆ.

ಕೇಂದ್ರ ಸರ್ಕಾರದ ಈ ತೀರ್ಮಾನ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಎಂಬುದನ್ನು ನೋಡುವುದಾದರೆ, ಮೊದಲನೆಯದಾಗಿ ಇಲ್ಲಿ ಹೊಡೆತ ಬೀಳುವುದು ರೈತನಿಗೆ. ಬಿತ್ತನೆಯ ಋತು ಆರಂಭವಾಗುತ್ತಿದೆ. ಪ್ರತಿ ರೈತ ಒಂದು ಎಕರೆಗೆ ಸುಮಾರು 300 ಲೀ. ಡೀಸೆಲ್ ಬಳಸುತ್ತಾನೆ. ಭಾರತದಲ್ಲಿ ಸರಾಸರಿ ಒಬ್ಬ ರೈತನಿಗೆ 5 ಎಕರೆ ಭೂಮಿ ಇದ್ದರೆ ಒಂದು ಬೆಳೆಯ ಋತುವಿಗೆ ಕನಿಷ್ಠ 1,500 ಲೀ. ಡೀಸೆಲ್ ಬೇಕು. ಇದು ‘ಬಲ್ಕ್ ಖರೀದಿ’ಯಾಗುತ್ತದೆ. ಹೀಗಾಗಿ, ಈಗ ರೈತರಿಗೆ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 40 ರೂಪಾಯಿ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಇನ್ನು ನಗರವಾಸಿಗಳು ಹಾಗೂ ಅದರಲ್ಲೂ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಿಗೂ ಈ ಬರೆ ಬೀಳಲಿದೆ. ಈ ವರ್ಗದ ಜನ ದೈನಂದಿನ ವಿದ್ಯುತ್ ಅಗತ್ಯಕ್ಕಾಗಿ ಜನರೇಟರ್‌ಗಳನ್ನು ಬಳಸುತ್ತಾರೆ. ಇವರೂ ಸಹ ಬಲ್ಕ್ ಖರೀದಿದಾರರು. ಪ್ರತಿದಿನ 2000 ದಿಂದ 5000 ಲೀಟರ್ ಡೀಸೆಲ್ ಖರೀದಿಸುತ್ತಾರೆ. ಇವರಿಗೂ ಸಹ ಲೀಟರ್‌ಗೆ 40 ರೂಪಾಯಿ ಹೆಚ್ಚಾಗಲಿದೆ. ಇದರಿಂದ ಈ ವರ್ಗದ ಜನರ ದೈನಂದಿನ ವಿದ್ಯುತ್ ಬಳಕೆಯ ವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ. ವೇತನ ಮತ್ತು ಮಧ್ಯಮ ವರ್ಗಕ್ಕೆ ಆಗಲಿರುವ ಪರಿಸ್ಥಿತಿ ಇದೇ ಆಗಿದೆ ಎಂದು ವಿವರಿಸಿದ್ದಾರೆ.

ಇನ್ನು ಸಾಮಾನ್ಯ ಜನರ ಬಗ್ಗೆ ಹೇಳುವುದಾದರೆ, ಸಾರಿಗೆ ವೆಚ್ಚವೂ ಹೆಚ್ಚಾಗಲಿದೆ. ಒಂದು ಬಸ್‌ನ ಟ್ಯಾಂಕ್‌ನಲ್ಲಿ 200 ಲೀಟರ್‌ಗಿಂತ ಹೆಚ್ಚು ಇಂಧನ ಹಿಡಿದರೆ. ಆ ಬಸ್‌ಗೆ ಪ್ರತಿ ಲೀಟರ್‌ಗೆ 40 ರೂ. ಹೆಚ್ಚು ನೀಡಿ ಡೀಸೆಲ್ ಖರೀದಿಸಿದರೆ, ಬಸ್ ಪ್ರಯಾಣ ದರ ಹೆಚ್ಚಿಸುವುದಿಲ್ಲವೇ? 500 ರಿಂದ 1000 ಲೀ. ಟ್ಯಾಂಕ್ ಹೊಂದಿರುವ ಟ್ರಕ್ ಚಾಲಕರು, 40 ರೂಪಾಯಿ ಹೆಚ್ಚು ನೀಡಿ ಡೀಸೆಲ್ ಖರೀದಿಸಿದಾಗ ನೀವು, ನಾವು ಬಳಸುವ ದಿನಬಳಕೆ ವಸ್ತುಗಳ ಸಾರಿಗೆ ವೆಚ್ಚ ಸಹಜವಾಗಿಯೇ ಹೆಚ್ಚಾಗುತ್ತದೆ. ಅಂತಿಮವಾಗಿ ಇದರ ಬೆಲೆಯನ್ನು ಸಾಮಾನ್ಯ ಜನರೇ ತೆರಬೇಕು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೊನೆಯದಾಗಿ, ನಮ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಈ ತೀರ್ಮಾನದ ಬಿಸಿ ತಟ್ಟಲಿದೆ. ವಿದ್ಯುತ್ ಪೂರೈಕೆಯ ಒಂದು ನಿರ್ದಿಷ್ಟ ವೇಳಾಪಟ್ಟಿ ಇರುತ್ತದೆ, ಅದರಂತೆ ಅವರಿಗೆ 12, 14, 18 ಗಂಟೆ ವಿದ್ಯುತ್ ಸಿಗುತ್ತದೆ. ಅದಕ್ಕಿಂತ ಹೆಚ್ಚು ಬೇಕಾದಾಗ ಅವರು ಜನರೇಟರ್‌ಗಳನ್ನೇ ಅವಲಂಬಿಸಬೇಕಾಗುತ್ತದೆ. ಇವರೂ ಬಲ್ಕ್ ಖರೀದಿದಾರರಾಗಿದ್ದಾರೆ. ಈ ಕೈಗಾರಿಕೆಯವರು 200 ಲೀ.ಗಿಂತ ಹೆಚ್ಚಿನ ಅಂದರೆ 5000, 10000 ಅಥವಾ 15000 ಲೀ. ಡೀಸೆಲ್ ಖರೀದಿಸುತ್ತಾರೆ. ಇವರಿಗೂ ಲೀಟರ್‌ಗೆ 40 ರೂಪಾಯಿ ಹೆಚ್ಚಾದಾಗ, ಸಾಮಾನ್ಯ ಜನರ ಬಳಕೆಗೆ ತಯಾರಾಗುವ ವಸ್ತುವಿನ ಬೆಲೆಯೂ ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಇದನ್ನು ಜನರರಿಂದ ಮರೆಮಾಚುತ್ತಿದೆ. ಈ ದೈನಂದಿನ ದುಬಾರಿ ವಿರೋಧಿಸುವ ಸಮಯ ಬಂದಿದೆ. ಸಾಮಾನ್ಯ ಜನರ ಬಜೆಟ್ ಮೇಲೆ ದೈನಂದಿನ ಹೊರೆಯನ್ನು ಖಂಡಿಸುವ ಸಮಯ ಬಂದಿದೆ. ನೀವು ನಿಮ್ಮ ಸುತ್ತಮುತ್ತಲಿನ ಪ್ರತಿಯೊಬ್ಬ ಬಿಜೆಪಿ ನಾಯಕರು, ಕಾರ್ಪೊರೇಟರ್, ಶಾಸಕರು, ಸಂಸದರು, ಬೀಜೆಪಿ ಸಚಿವರನ್ನು ಪ್ರಶ್ನಿಸುವ ಸಮಯ ಬಂದಿದೆ. ರಾಜ್ಯ ಹಾಗೂ ಕೇಂದ್ರ ಎರಡರಲ್ಲೂ ಇರುವ ಬಿಜೆಪಿ ಸರ್ಕಾರಗಳನ್ನು ಪ್ರಶ್ನಿಸಲು ಪ್ರಾರಂಭಿಸಬೇಕಿದೆ. ಈಗ ಇದು ಕೇವಲ ರಾಜಕೀಯ ಪಕ್ಷಗಳ ನಡುವಿನ ಹೋರಾಟವಲ್ಲ. ಇದು ಸಾಮಾನ್ಯ ಮನುಷ್ಯನ ಬಜೆಟ್ ಉಳಿವಿನ ಹೋರಾಟವಾಗಿದೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments