ಸರ್ವೇ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಇದರಿಂದ ರೈತರು ಸಂಕಷ್ಟಕ್ಕೀಡಾಗಿರುವುದು ನಮ್ಮ ಗಮನದಲ್ಲಿದೆ. ಅಲ್ಲದೆ, ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನಸಭೆ ಪ್ರಶ್ನೋತ್ತರ ಅವಧಿಯ ವೇಳೆ ರಾಯಭಾಗ ಕ್ಷೇತ್ರದ ಬಿಜೆಪಿ ಶಾಸಕ ಐಹೊಳೆ ದುರ್ಯೋಧನ ಮಹಾಲಿಂಗಪ್ಪ ಅವರು ಸರ್ವೇ ಇಲಾಖೆ ಸಮಸ್ಯೆಗಳ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
“ಸರ್ವೇ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನತಾ ದರ್ಶನ ಕಾರ್ಯಕ್ರಮದಲ್ಲೂ ಸರ್ವೇ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ” ಎಂದರು.
ಗ್ರಾಮ ಲೆಕ್ಕಿಗರು 1,000 ಹಾಗೂ 750 ಜನ ಸರ್ವೇಯರ್ ಭರ್ತಿ:
ಖಾಲಿ ಇರುವ ಹುದ್ದೆಗಳ ಭರ್ತಿಯ ಬಗ್ಗೆ ಮಾಹಿತಿ ನೀಡಿದ ಸಚಿವರು, “ರಾಜ್ಯದಲ್ಲಿ 1,000 ಗ್ರಾಮ ಆಡಳಿತಾಧಿಕಾರಿಗಳು ಹಾಗೂ 750 ಸರ್ಕಾರಿ ಸರ್ವೇಯರ್ ಭರ್ತಿ ಪ್ರಕಿಯೆ ನಡೆದಿದೆ. ಇದರ ಜೊತೆಗೆ 100ಕ್ಕೂ ಅಧಿಕ ಪರವಾನಗಿ ಹೊಂದಿರುವ ಖಾಸಗಿ ಸರ್ವೇಯರ್ ಹಾಗೂ 35 ಎ.ಡಿ.ಎಲ್.ಆರ್ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಮುಂದಿನ 3 ರಿಂದ 6 ತಿಂಗಳ ಒಳಗಾಗಿ ಈ ಎಲ್ಲಾ ಹುದ್ದೆಗಳನ್ನೂ ನ್ಯಾಯಸಮ್ಮತವಾಗಿ ಭರ್ತಿ ಮಾಡುವಂತೆ ಕೆಪಿಎಸ್‌ಸಿ ಗೆ ಸೂಚಿಸಲಾಗಿ” ಎಂದು ತಿಳಿಸಿದರು.
ಮುಂದುವರೆದು, “ಸರ್ವೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿದರೆ ಸ್ವಾಭಾವಿಕವಾಗಿ ಸರ್ವೇ ಇಲಾಖೆಗೆ ಬಲ ಬರಲಿದೆ. ಈ ಹುದ್ದೆಗಳಲ್ಲದೆ, ಹೆಚ್ಚುವರಿಯಾಗಿ ಹೊಸ ಹುದ್ದೆಗಳ ಸೃಷ್ಟಿಗೂ ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಿದ್ದು ಮತ್ತಷ್ಟು ಹುದ್ದೆಗಳನ್ನು ಸೃಷ್ಟಿಸಲು ಸರ್ಕಾರ ಸಿದ್ದವಾಗಿದೆ” ಎಂದರು
ಅರಗ ಜ್ಞಾನೇಂದ್ರರ ಪ್ರಶ್ನೆಗೆ ಸಚಿವರ ಖಡಕ್ ಉತ್ತರ
ಸಚಿವ ಕೃಷ್ಣ ಬೈರೇಗೌಡ ಅವರು ಉತ್ತರಿಸುತ್ತಿದ್ದ ವೇಳೆ ಮದ್ಯಪ್ರವೇಶಿಸಿದ ಬಿಜೆಪಿ ಶಾಸಕ ಮಾಜಿ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು, “ಮಲೆನಾಡಿನ ರೈತರ ಸಮಸ್ಯೆ ಬೆಂಗಳೂರಿನಿಂದ ತೇರ್ಗಡೆಯಾಗಿ ಹೋದ ಸರ್ವೇಯರ್ಗೆ ಗೊತ್ತಾಗೋದೆ ಇಲ್ಲ. ಇಷ್ಟಕ್ಕೂ ಅವರು ಬೆಂಗಳೂರಿನಿಂದ ಹೊರಟು ಮಲೆನಾಡಿಗೆ ಬಂದು ತಲುಪುವುದರ ಒಳಗಾಗಿ ಡೆಪ್ಯುಟೇಷನ್ ಮೇಲೆ ಮತ್ತೆ ಬೆಂಗಳೂರಿಗೆ ಹಿಂತಿರುಗುತ್ತಾರೆ ಎಂದು ಆರೋಪಿಸಿದರು.
ಈ ಆರೋಪಕ್ಕೆ ಖಡಕ್ ಆಗಿಯೇ ಉತ್ತರ ಕೊಟ್ಟ ಸಚಿವ ಕೃಷ್ಣ ಬೈರೇಗೌಡ ಅವರು, “ಕಳೆದ ಒಂದು ವರ್ಷದಲ್ಲಿ ನಾನು ವ್ಯಯಕ್ತಿಕವಾಗಿ ಒಂದೇ ಒಂದು ಕೇಸ್ ಕೂಡ ಡೆಪ್ಯುಟೇಶನ್ ಮಾಡಿಲ್ಲ. ಡೆಪ್ಯುಟೇಷನ್ ಎನ್ನುವ ಮಾತೇ ಇಲ್ಲ. ಅಲ್ಲದೆ, ಡೆಪ್ಯಟೇಷನ್ ಮೇಲೆ ಇತರೆಡೆ ಹೋದ ಅಧಿಕಾರಿಗಳನ್ನೂ ಸಹ ಹಿಂದಕ್ಕೆ ವಾಪಸ್ ಕರೆಸಲಾಗಿದೆ” ಎಂದು ಮಾಹಿತಿ ನೀಡಿದರು.