ಶಾಂತವಾಗಿದ್ದ ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದಿದ್ದು, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹಾಗೂ ಗುಂಡು ಹಾರಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ನಿರಾಳೆ ಹಾಗೂ ಗೊಳಗಿ ಕುಟುಂಬಗಳ ನಡುವೆ ಜಮೀನು ವ್ಯಾಜ್ಯವಿತ್ತು. ಇದೇ ಕಾರಣಕ್ಕೆ ಈ ಹತ್ಯೆಗಳು ನಡೆದಿವೆ ಎನ್ನಲಾಗಿದೆ. ಹತ್ಯೆಯಾದವರನ್ನು ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ್ ನಿರಾಳೆ, ಶಬ್ಬಿರ್ ನದಾಫ್ ಎಂದು ಗುರುತಿಸಲಾಗಿದೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಭೀಕರ ನರಮೇಧ ನಡೆದಿದ್ದು, ಇಡೀ ಭೀಮಾತೀರ ಮತ್ತೊಮ್ಮೆ ರಕ್ತಸಿಕ್ತವಾಗಿದೆ. ಈ ಭೀಕರ ದಾಳಿಗೆ ನಿರಾಳೆ ಕುಟುಂಬದ ಪ್ರಮುಖರು ಹಾಗೂ ಅವರ ಬೆಂಬಲಿಗರು ಸೇರಿ ಒಟ್ಟು ಆರು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಎದುರಾಳಿಗಳು ನಡೆಸಿದ ದಿಢೀರ್ ಫೈರಿಂಗ್ ಹಾಗೂ ಮಾರಕಾಸ್ತ್ರಗಳ ದಾಳಿಗೆ ಬರೋಬ್ಬರಿ ಆರು ಜನ ಭೀಕರವಾಗಿ ಹತ್ಯೆಗೀಡಾಗಿದ್ದಾರೆ. ಈ ಘಟನೆಯಿಂದಾಗಿ ಇಡೀ ಜಿಲ್ಲೆ ಬೆಚ್ಚಿಬಿದ್ದಿದ್ದು, ಗ್ರಾಮದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ದಂಡು ಸಶಸ್ತ್ರ ಪಡೆಗಳೊಂದಿಗೆ ಗೋವಿಂದಪುರ ಗ್ರಾಮಕ್ಕೆ ಧಾವಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮುಂದೆ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಇಡೀ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.


