– ಸಂವಿಧಾನದ ಪ್ರತಿ ಹಿಡಿದು, ರಾಜ್ಯಪಾಲರಿಂದ ಡಿ ಕೆ ಶಿ ಪ್ರಮಾಣವಚನ
– ವೀರ ಗಂಗಾಧರ ಅಜ್ಜಯ್ಯನ ಭಾವಚಿತ್ರಕ್ಕೆ ಡಿ ಕೆ ಶಿ ಪುಷ್ಪನಮನ
ಡಿ ಕೆ ಶಿವಕುಮಾರ್ ಅವರ ಬಹುವರ್ಷಗಳ ಕನಸು ನನಸಾಗಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಸಂಜೆ ಲೋಕಭವನದಲ್ಲಿ ಸಂವಿಧಾನದ ಪ್ರತಿ ಹಿಡಿದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪ್ರಮಾಣವಚನ ಸ್ವೀಕರಿಸಿದರು.
ಗಂಗಾಧರರನ ಅಜ್ಜನ ಹೆಸರಲ್ಲಿ ಡಿ ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯದ 24ನೇ ಮುಖ್ಯಮಂತ್ರಿಯಾಗಿದ್ದಾರೆ. ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಡಿ ಕೆ ಶಿವಕುಮಾರ್ ನೆರೆದಿದ್ದ ಜನಸಾಗರದ ಮಧ್ಯೆ ಗಣ್ಯರ, ಸ್ವಾಮೀಜಿಗಳ ಹಾಗೂ ಹಿರಿಯರ ಕೈಕುಲಕಿ ವೇದಿಕೆ ಆಗಮಿಸಿದರು.
ಡಿ ಕೆ ಶಿವಕುಮಾರ್ ಜೊತೆಯಲ್ಲಿ ಡಾ. ಜಿ ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 13 ಜನ ಸಚಿವರು ಸಹ ಪ್ರಮಾಣವಚನ ಸ್ವೀಕರಿಸಿದರು.
ವೀರ ಗಂಗಾಧರ ಅಜ್ಜಯ್ಯನ ಭಾವಚಿತ್ರಕ್ಕೆ ಡಿ ಕೆ ಶಿ ಪುಷ್ಪನಮನ
ಡಿ ಕೆ ಶಿವಕುಮಾರ್ ಅವರನ್ನು ಪ್ರಮಾಣವಚನಕ್ಕೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕರೆದಾಗ ವೇದಿಕೆಯ ಒಂದು ಭಾಗದಲ್ಲಿ ಸ್ಥಾಪಿಸಿದ್ದ ವೀರ ಗಂಗಾಧರ ಅಜ್ಜಯ್ಯನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಪ್ರಮಾಣವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿದ್ದರಾಮಯ್ಯ, ಎಐಸಿಸಿ ಮುಖಂಡ ಕೆ ಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಹಾಗೆಯೇ ಸಿಎಂ ಪದಗ್ರಹಣ ಸಮಾರಂಭದಲ್ಲಿ ರಾಜ್ಯದ ವಿವಿಧ ಮಠಾಧೀಶರು, ಚಿತ್ರರಂಗದ ತಾರೆಯರು, ಉದ್ಯಮಿಗಳು ಸೇರಿದಂತೆ ವಿವಿಧ ವಲಯಗಳ ಗಣ್ಯರು ಮತ್ತು ಅಭಿಮಾನಿಗಳು ಸಾಕ್ಷಿಯಾದರು.


