ಜೆಡಿಎಸ್ ಮತ್ತು ಬಿಜೆಪಿಯವರು ಸೇರಿಕೊಂಡು ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆಸುತ್ತಿದ್ದಾರೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಲ್ಲಿ (ಇ.ಡಿ) ಏನು ಮಾಡಿಸುತ್ತಿದ್ದಾರೆ ಎಂಬುದು ಗೊತ್ತಿದೆ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ರಾಮನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನನ್ನು ಕಟ್ಟಿ ಹಾಕಲು ಅದೇನು ರಾಜಕಾರಣ ಮಾಡುತ್ತಾರೊ ಮಾಡಲಿ. ನನ್ನನ್ನು ಜೈಲಿಗೆ ಕಳಿಸುತ್ತೇನೆ ಎಂದು ಹಿಂದೆ ನಮ್ಮ ಜಿಲ್ಲೆಯವರಷ್ಟೇ ಅಲ್ಲದೆ ಬೇರೆಯವರೂ ಹೇಳಿದ್ದರು. ನಾನು ಎಲ್ಲದಕ್ಕೂ ತಯಾರಿದ್ದೇನೆ. ಯಾವುದಕ್ಕೂ ಹೆದರುವುದಿಲ್ಲ” ಎಂದು ತಿರುಗೇಟು ನೀಡಿದರು.
ಹಿಂದೆಯೂ ಒಂದಾಗಿದ್ದರು
“ಲೋಕಸಭಾ ಚುನಾವಣೆಯಲ್ಲಿ ಡಿ.ಕೆ. ಸಹೋದರರನ್ನು ಕಟ್ಟಿ ಹಾಕಲು ಬದ್ಧ ವೈರಿಗಳು ಮುಂದಾಗಿದ್ದಾರೆ. ಅವರು ಈಗಷ್ಟೇ ಅಲ್ಲ, ಹಿಂದೆಯೂ ಒಂದಾಗಿದ್ದರು. ಸುರೇಶ್ ಅವರ ಎದುರು ಹಿಂದೊಮ್ಮೆ ಒಬ್ಬರೇ ಅಭ್ಯರ್ಥಿಯನ್ನು ನಿಲ್ಲಿಸಿದ್ದರು. ಆದರೆ, ಸುರೇಶ್ ಅವರು ಮಾಡಿರುವ ಅಭಿವೃದ್ಧಿ ಕೆಲಸವನ್ನು ರಾಜ್ಯದ ಯಾವ ಸಂಸದರೂ ಮಾಡಿಲ್ಲ. ಅದಕ್ಕೆ ದಾಖಲೆಗಳಿವೆ. ಸುರೇಶ್ ವಿರುದ್ಧ ಸ್ಪರ್ಧಿಸಲು ಮುಂದಾಗಿರುವವರು ತಮ್ಮ ಕೈಲಿ ಅಧಿಕಾರವಿದ್ದಾಗ ಏನು ಮಾಡಿದ್ದಾರೆ” ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡರು ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು, ಹಿಂದೆ ಮೋದಿ ವಿರುದ್ಧ ಏನು ಹೇಳಿಕೆ ನೀಡಿದ್ದರು ಎಂದು ನೆನಪಿಸಿಕೊಳ್ಳಲಿ. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ದೇವೇಗೌಡರು ಹೇಳಿದ್ದಾಗ, ನಮ್ಮ ಮನೆಯಲ್ಲಿ ಜಾಗ ಕೊಡ್ತಿನಿ ಎಂದು ಮೋದಿ ಹೇಳಿದ್ದರಲ್ಲವೆ” ಎಂದು ಲೇವಡಿ ಮಾಡಿದರು.
“ಬಿಡದಿ ಪ್ಲ್ಯಾನಿಂಗ್ ಅಥಾರಿಟಿಯನ್ನು ಗ್ರೇಟರ್ ಬೆಂಗಳೂರು ಅಂತಾ ನಾಮಕರಣ ಮಾಡಿ ನಕ್ಷೆ ತಯಾರಾಗುತ್ತಿದೆ. ರಾಮನಗರ ಮಾದರಿ ಜಿಲ್ಲೆಯಾಗಿ ಮಾಡಲು ಸಂಸದರು, ಶಾಸಕರು ನಿರ್ಧರಿಸಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇವೆ” ಎಂದರು.
“ಬಿಡದಿ, ಆನೇಕಲ್ಗೆ ಮೆಟ್ರೋ ವಿಸ್ತರಿಸಲು DPR ರೆಡಿ ಮಾಡುತ್ತಿದ್ದೇವೆ. ಕ್ಷೇತ್ರದ ಅಭಿವೃದ್ಧಿಗೆ ರಾಮಲಿಂಗಾರೆಡ್ಡಿ ದೊಡ್ಡ ಕ್ರಾಂತಿ ಮಾಡುತ್ತಿದ್ದಾರೆ. ನನ್ನ ಜಿಲ್ಲೆಯ ಜನರ ಪರವಾಗಿ ರಾಮಲಿಂಗಾರೆಡ್ಡಿಗೆ ಅಭಿನಂದಿಸುತ್ತೇನೆ. ಪ್ಯಾಸೆಂಜರ್ ಸೀಟು ಅನುಕೂಲ ಆಗುತ್ತೆ. ಇದಕ್ಕೆ ಕ್ಯಾಮೆರಾ, ಫೋನ್ ಚಾರ್ಜರ್ ಅಳವಡಿಸಿದ್ದಾರೆ” ಎಂದು ಹೇಳಿದರು.