ಯುನೈಟೆಡ್ ಕಿಂಗ್ಡಮ್ ಕಾರ್ಯದರ್ಶಿ (ವೇಲ್ಸ್) ಡೇವಿಡ್ ಡೇವಿಸ್ ಅವರು ಸೋಮವಾರ ಇಲ್ಲಿ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರನ್ನು ಭೇಟಿ ಮಾಡಿ, ರಾಜ್ಯದೊಂದಿಗೆ ಹೆಚ್ಚಿನ ಕೈಗಾರಿಕಾ ಸಹಭಾಗಿತ್ವ ಹೊಂದುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ನಡೆದ ವಿಚಾರ ವಿನಿಮಯದ ಸಂದರ್ಭದಲ್ಲಿ ಅವರು, “ಸೆಮಿಕಂಡಕ್ಟರ್, ವೈಮಾಂತರಿಕ್ಷ, ಆಟೋಮೋಟೀವ್ ಆಹಾರ ಮತ್ತು ಪಾನೀಯ, ಮೆಡ್-ಟೆಕ್, ಫಿನ್-ಟೆಕ್ ಹಾಗೂ ಮರುಬಳಕೆ ಇಂಧನ ಮುಂತಾದ ಕ್ಷೇತ್ರಗಳಲ್ಲಿ ವೇಲ್ಸ್ ಪರಿಣತಿ ಹೊಂದಿದೆ. ಮುಂಬರುವ ದಿನಗಳಲ್ಲಿ ತಮ್ಮಲ್ಲಿನ ಕಂಪನಿಗಳು ಕರ್ನಾಟಕದಲ್ಲಿ ಹೆಚ್ಚು ಹೂಡಿಕೆ ಮಾಡಲು ಮತ್ತು ಸಹಭಾಗಿತ್ವ ಹೊಂದಲು ಉತ್ಸುಕವಾಗಿವೆ” ಎಂದು ತಿಳಿಸಿದರು.
ಸಚಿವ ಪಾಟೀಲ್ ಮಾತನಾಡಿ, “ಬೆಂಗಳೂರಿನ ಸಮೀಪದಲ್ಲಿ ಜಾಗತಿಕ ದರ್ಜೆಯ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನಾ ನಗರವು (ಕೆಎಚ್ಐಆರ್ ಸಿಟಿ) 2,000 ಎಕರೆ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರುತ್ತಿದೆ. ವೇಲ್ಸ್ ನ ಕಂಪನಿಗಳು ಇಲ್ಲಿ ಹೂಡಿಕೆ ಮಾಡುವ ಮೂಲಕ, ಈ ಸದವಕಾಶವನ್ನು ಬಳಸಿಕೊಳ್ಳಬೇಕು. ಜೊತೆಗೆ ರಾಜ್ಯದಲ್ಲಿ ಏರೋಸ್ಪೇಸ್, ರಕ್ಷಣೆ ಮತ್ತು ಮಶೀನ್ ಟೂಲ್ಸ್ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಗೆ ಅವಕಾಶವಿದೆ” ಎಂದು ವಿವರಿಸಿದರು.
“ಇದಲ್ಲದೆ, ರಾಜ್ಯ ಸರಕಾರವು ಸದ್ಯದಲ್ಲೇ `ಶುದ್ಧ ಇಂಧನ ನೀತಿ’ಯನ್ನು ಜಾರಿಗೆ ತರುತ್ತಿದೆ. ಇದು ಪ್ರವರ್ಧಮಾನಕ್ಕೆ ಬರುತ್ತಿರುವ ಕ್ಷೇತ್ರವಾಗಿದ್ದು, ಮುಂದಿನ ದಿನಗಳಲ್ಲಿ ಭಾರೀ ಬೇಡಿಕೆ ಕಾಣಲಿದೆ. ನಮ್ಮಲ್ಲಿ ಸರಕಾರಗಳು ಬದಲಾದರೂ ಕೈಗಾರಿಕೆಗಳ ಬೆಳವಣಿಗೆ ಅಬಾಧಿತವಾಗಿ ಮುಂದುವರಿದುಕೊಂಡು ಹೋಗಲಿದೆ. ಇಲ್ಲಿ ಹೂಡಿಕೆಸ್ನೇಹಿ ವಾತಾವರಣವಿದ್ದು, ಅತ್ಯುತ್ತಮ ನೀತಿಗಳಿವೆ” ಎಂದು ಅವರು ಮನದಟ್ಟು ಮಾಡಿಕೊಟ್ಟರು.
“ಕೋವಿಡ್ ಸಂದರ್ಭದಲ್ಲಿ ಭಾರತ ಮತ್ತು ಯುನೈಟೆಡ್ ಕಿಂಗ್ಡಂ ಜತೆಗೂಡಿ ಕೆಲಸ ಮಾಡಿವೆ. ರಾಜ್ಯದಲ್ಲಿ ಉತ್ಪಾದನಾ ಕ್ಷೇತ್ರ, ಫಿನ್ಟೆಕ್, ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ವಿಪುಲ ಅವಕಾಗಳಿವೆ. ಯುನೈಟೆಡ್ ಕಿಂಗ್ಡಂನಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ಇದ್ದು, ಆ ದೇಶವು ತನ್ನ ಅಗತ್ಯವೇನೆಂದು ತಿಳಿಸಿದರೆ ಅದಕ್ಕೆ ತಕ್ಕಂತೆ ತರಬೇತಿ ಕೊಟ್ಟು, ಇಲ್ಲಿ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸಲಾಗುವುದು” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮತ್ತು ಟೆಸ್ಕೋ, ಎ.ಆರ್.ಎಂ., ಮೈಕ್ರಾನ್ ಕ್ಲೀನ್, ರೋಲ್ಸ್ ರಾಯ್, ಎಚ್ ಎಸ್ ಬಿಸಿ ಮತ್ತು ರೆವೊಲಟ್ ಮುಂತಾದ ಕಂಪನಿಗಳ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.