2014ರಲ್ಲಿ ಕೋಟಿಗಳ ಲೆಕ್ಕದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಹತ್ತು ವರ್ಷಗಳ ನಂತರ ಲಕ್ಷಗಳ ಲೆಕ್ಕದಲ್ಲಿ ಉದ್ಯೋಗ ನೀಡಿದ್ದನ್ನು ಸಾಧನೆ ಎಂದು ಬಿಂಬಿಸುತ್ತಿರುವುದು ತಮಾಷೆಯಾಗಿ ಕಾಣುತ್ತಿಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಎಲ್ಲಿಯ 20 ಕೋಟಿ ಉದ್ಯೋಗಗಳು? ಎಲ್ಲಿಯ ರೋಜಗಾರ್ ಮೇಳದ ಲಕ್ಷಗಳ ಲೆಕ್ಕದ ಉದ್ಯೋಗಗಳು? ನಿಜ ಹೇಳಿ ಪ್ರಧಾನಮಂತ್ರಿಗಳೇ ನೀವು ಸೃಷ್ಟಿಸಿರುವ ಉದ್ಯೋಗಗಳ ಸಂಖ್ಯೆ ಎಷ್ಟು?” ಎಂದು ಕೇಳಿದ್ದಾರೆ.
“ನರೇಂದ್ರ ಮೋದಿಯವರೇ, ನಿಮ್ಮದೇ ಸಚಿವ ಸಂಪುಟದ ಜಿತೇಂದರ್ ಸಿಂಗ್ ಅವರು 2022ರ ಜುಲೈ ನಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ “2014-15 ಮತ್ತು 2021 -22ರ ಅವಧಿಯ ನಡುವೆ ಕೇವಲ 7 ಲಕ್ಷ ಹೊಸ ಉದ್ಯೋಗಗಳು ಮಾತ್ರ ಸೃಷ್ಟಿಯಾಗಿತ್ತು ಎಂದು ಹೇಳಿದ್ದರು. ಅಂತಿಮ ಸತ್ಯ ಇದೇ ಇರಬಹುದಾ?” ಎಂದು ವ್ಯಂಗ್ಯವಾಡಿದ್ದಾರೆ.
“ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸುವ ಪ್ರಧಾನಿ ನರೇಂದ್ರ ಮೋದಿಯವರು ಈಗ ತರಾತುರಿಯಿಂದ ಉದ್ಯೋಗ ಮೇಳಗಳನ್ನು ಆಯೋಜಿಸಲು ಕಾರಣ ಯುವಜನರ ಮೇಲಿನ ಕಾಳಜಿಯೇ? ಇಲ್ಲವೇ ಉದ್ಯೋಗ ಇಲ್ಲದೆ ರೊಚ್ಚಿಗೆದ್ದಿರುವ ನಿರುದ್ಯೋಗಿ ಯುವಜನರ ಆಕ್ರೋಶವೇ?” ಎಂದು ತಿರುಗೇಟು ನೀಡಿದ್ದಾರೆ.
“2004-2012ರ ಅವಧಿಯಲ್ಲಿ, ಅಂದರೆ ಯುಪಿಎ ಅವಧಿಯಲ್ಲಿ ಪ್ರತಿವರ್ಷ 75 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಆದರೆ ಈ ಪ್ರಮಾಣ 2013ರ ನಂತರದಲ್ಲಿ 29 ಲಕ್ಷಕ್ಕೆ ಇಳಿದಿದೆ. ನಿರುದ್ಯೋಗದ ತೀವ್ರತೆ ನಮ್ಮ ದೇಶದಲ್ಲಿ ಎಷ್ಟರಮಟ್ಟಿಗೆ ಇದೆಯೆಂದರೆ, ಎನ್.ಸಿ.ಆರ್.ಬಿ ಪ್ರಕಾರ ಪ್ರತಿ ಗಂಟೆಗೆ ಇಬ್ಬರು ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ! ಕರ್ನಾಟಕವೊಂದರಲ್ಲೇ 2021ರಲ್ಲಿ 1,129 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರಿಗೆಲ್ಲಿಯ ರೋಜಗಾರ್ ಮೇಳ” ಎಂದು ಪ್ರಶ್ನಿಸಿದ್ದಾರೆ.
“ಉದ್ಯೋಗ ಅರಸಿ, ದೇಶದಿಂದ ವಿದೇಶಕ್ಕೆ ವಲಸೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಫ್ರಾನ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದ ಈ ವಿಮಾನದಲ್ಲಿ 66 ಮಂದಿ ಗುಜರಾತಿಗಳಿದ್ದರು. ತಮ್ಮನ್ನು ಗುಜರಾತಿನಿಂದ ಅಮೆರಿಕಾಗೆ ಅಕ್ರಮವಾಗಿ ಕರೆದೊಯ್ಯಲು ಏಜೆಂಟ್ ಗಳಿಗೆ ತಲಾ 60 – 80 ಲಕ್ಷ ರೂಪಾಯಿಗಳನ್ನು ನೀಡಿದ್ದರು ಎಂಬ ಅಂಶ ವಿಚಾರಣೆಯಲ್ಲಿ ಬಹಿರಂಗವಾಗಿತ್ತು. 2018 ರಿಂದ 2019ರ ವರೆಗೆ 8,027 ಮಂದಿ, 2019 ರಿಂದ 2020ರ ವರೆಗೆ 19,883 ಮಂದಿ, 2020 ರಿಂದ 2021ರ ವರೆಗೆ 30,662 ಮಂದಿ, 2021 ರಿಂದ 2022ರ ವರೆಗೆ 63,927 ಮಂದಿ ಭಾರತೀಯರು ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿ ಬಂಧನಕ್ಕೊಳಗಾಗಿದ್ದಾರೆ. ಈ ಅಕ್ರಮ ವಲಸಿಗರ ಪೈಕಿ ಬಹುಪಾಲು ಜನರು ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಿಗೆ ಸೇರಿದವರು ಎಂಬುದು ಗಮನಿಸಬೇಕಾದ ಅಂಶ” ಎಂದಿದ್ದಾರೆ.