ಬೆಳಗಾವಿ: ತಾಲ್ಲೂಕಿನ ಹೊಸ ವಂಟಮೂರಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣದ ಮಾಹಿತಿ ಪಡೆಯಲು ಬೆಳಗಾವಿ ಜಿಲ್ಲಾಸ್ಪತ್ರೆಗೆ ಶನಿವಾರ ರಾಷ್ಟ್ರೀಯ ಮಹಿಳಾ ಆಯೋಗದ ತಂಡ ಭೇಟಿ ನೀಡಿ ಸಂತ್ರಸ್ತೆಯ ಆರೋಗ್ಯ ವಿಚಾರಿಸಿತು.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡೆಲಿನಾ ಕೊಂಗಡುಪ್ ನೇತೃತ್ವದ ತಂಡ ಭೇಟಿ ನೀಡಿದ್ದು, ಮಹಿಳೆಗೆ ಸಾಂತ್ವನ ಹೇಳಿತು. ಜತೆಗೆ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿತು.
ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಕಮಿಷನರ್ ಎಸ್.ಎನ್.ಸಿದ್ದರಾಮಪ್ಪ, ಡಿಸಿಪಿ ರೋಹನ್ ಜಗದೀಶ, ಎಸಿಪಿ ಎಸಿಪಿ ನಾರಾಯಣ ಭರಮನಿ ಸೇರಿದಂತೆ ಇತರರು ಇದ್ದರು.
ದೆಹಲಿ ಬಿಜೆಪಿ ನಿಯೋಗ ಭೇಟಿ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ದೆಹಲಿ ಬಿಜೆಪಿ ನಿಯೋಗ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತ ಮಹಿಳೆಯ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದೆ.
ಬಿಜೆಪಿ ಸತ್ಯ ಶೋಧನಾ ತಂಡದಲ್ಲಿ ಸಂಸದರಾದ ಅಪರಾಜಿತ್ ಸಾರಂಗಿ, ಸುನೀತಾ ದುಗ್ಗಲ್, ರಂಜಿತಾ ಕೋಳಿ, ಲಾಕೆಟ್ ಚಟರ್ಜಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಕ್ರಾ ಇದ್ದಾರೆ. ಸದ್ಯ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ನಿಯೋಗ ಬಳಿಕ ಘಟನಾ ಸ್ಥಳ ವಂಟಮೂರಿ ಹಾಗೂ ಕಾಕತಿ ಪೊಲೀಸ್ ಠಾಣೆಗೆ ಭೇಟಿ ನೀಡಲಿದೆ.
ಬಿಮ್ಸ್ ಆಸ್ಪತ್ರೆಗೆ ಬಿಜೆಪಿ ಸತ್ಯಶೋಧನಾ ತಂಡ ಭೇಟಿ ಹಿನ್ನೆಲೆ ಸಂತ್ರಸ್ತೆ ಚಿಕಿತ್ಸೆ ಪಡೆಯುತ್ತಿರುವ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಎಪಿಎಂಸಿ ಠಾಣೆಯ ಸಿಪಿಐ, ಮಹಿಳಾ ಪಿಎಸ್ಐ, ಸಿಬ್ಬಂದಿಯಿಂದ ಭದ್ರತೆ ಕಲ್ಪಿಸಲಾಗಿದೆ.
ಬಿಜೆಪಿ ಪ್ರತಿಭಟನೆ ಕರೆ, ಎಚ್ಚೆತ್ತ ರಾಜ್ಯ ಸರ್ಕಾರ
ಪ್ರಕರಣ ಸಂಬಂಧ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಗೆ ಕರೆ ಕೊಡುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಸಂಜೆಯೇ ಸಂತ್ರಸ್ತ ಮಹಿಳೆಗೆ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಐವತ್ತು ಸಾವಿರ ರೂ. ಪರಿಹಾರ ಘೋಷಿಸಿದೆ.
ಘಟನೆ ನಡೆದ ಗ್ರಾಮಕ್ಕೆ ನಿನ್ನೆ ಸಂಜೆ ಸ್ಥಳೀಯ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ ಸಂತ್ರಸ್ತ ಮಹಿಳೆಯ ಕುಟುಂಬಸ್ಥರಿಂದ ಮಾಹಿತಿ ಪಡೆದರು. ಇದರ ಬೆನ್ನಲ್ಲೇ ತಡವಾಗಿ ಘಟನಾ ಸ್ಥಳಕ್ಕೆ ಆಗಮಿಸಿದ ಕಾಕತಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವಿಜಯ್ ಸಿನ್ನೂರ್ ಅವರನ್ನು ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಅಮಾನತು ಮಾಡಿ ಆದೇಶಿಸಿದ್ದಾರೆ.
ಕಣ್ಣೀರಿಟ್ಟ ಸಂತ್ರಸ್ತೆ ಮಹಿಳೆ
ಘಟನೆ ಕುರಿತು ಸಂತ್ರಸ್ತ ಮಹಿಳೆಯಿಂದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡೆಲಿನಾ ಅವರು ಮಾಹಿತಿ ಕಲೆ ಹಾಕುತ್ತಿದ್ದಾರೆ. ರವಿವಾರ ರಾತ್ರಿ ಹೇಗೆ ಘಟನೆ ಸಂಭವಿಸಿತು ಅನ್ನೋದನ್ನ ವಿವರಿಸುತ್ತಿದ್ದಾಗ ಸಂತ್ರಸ್ತೆ ಮಹಿಳೆ ಕಣ್ಣೀರು ಹಾಕಿದರು. ಘಟನೆಯ ದಿನ ಪೊಲೀಸರು ಬರದೇ ಇದ್ದಿದ್ದರೆ ಕೊಂದೇ ಬಿಡುತ್ತಿದ್ದರು ಎಂದಿದ್ದಾರೆ.