- 26 ಉಪಜಾತಿಗಳನ್ನೊಳಗೊಂಡ ರಾಜ್ಯಮಟ್ಟದ ನಾರಾಯಣ ಗುರು ಮಹಾಒಕ್ಕೂಟ ಅಸ್ತಿತ್ವಕ್ಕೆ
ಸಮಾಜದ ಒಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಾರಾಯಣ ಗುರುಗಳ ಹೆಸರಿನಲ್ಲಿ ನಾವೆಲ್ಲರೂ ಒಂದಾಗಿ ಸಂಘಟಿತರಾದಾಗ ಮಾತ್ರ ಸಮಾಜಕ್ಕೆ ನಿಜವಾದ ಶಕ್ತಿ ಬರಲು ಸಾಧ್ಯ. ಈ ಆಶಯವನ್ನು ದಶಕದ ಹಿಂದೆಯೇ ವ್ಯಕ್ತಪಡಿಸುತ್ತಾ ಬಂದಿದ್ದೆ. ಇಂದು ಅದು ಸಾಕಾರಗೊಂಡಿರುವುದು ಸಂತಸ ಹಾಗೂ ಹೆಮ್ಮೆಯ ಸಂಗತಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಈಡಿಗ, ಬಿಲ್ಲವ, ದೀವರು, ನಾಮಧಾರಿ, ನಾಡರ್, ತಿಯ್ಯ ಸೇರಿದಂತೆ ಒಟ್ಟು 26 ಉಪಜಾತಿಗಳನ್ನು ಒಳಗೊಂಡ ರಾಜ್ಯಮಟ್ಟದ ನಾರಾಯಣ ಗುರು ಮಹಾಒಕ್ಕೂಟ ಶನಿವಾರ ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ನಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. ಕೇರಳದ ನಾರಾಯಣ ಗುರು ಧರ್ಮ ಸಂಘಂ ಮಠದ ಪೀಠಾಧಿಪತಿ ಸ್ವಾಮಿ ಋತುಂಬರಾನಂದ ಸ್ವಾಮೀಜಿ ಅವರು ಮಹಾಒಕ್ಕೂಟವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವರು ಮಾತನಾಡಿದರು.
ನಾರಾಯಣ ಗುರು ಮಹಾಒಕ್ಕೂಟದ ಅಧ್ಯಕ್ಷರಾದ ಜಿ.ಪಿ. ಸುಧಾಕರ್ ಅವರಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಸಂಘಟನೆ ನೂರಾರು ವರ್ಷಗಳ ಕಾಲ ಬಾಳುವ ಮೂಲಕ ಸಮಾಜಕ್ಕೆ ಶಕ್ತಿ ತುಂಬಲಿ. ನಾವೆಲ್ಲರೂ ಬೇರೆ ಬೇರೆ ವೇದಿಕೆಗಳಲ್ಲಿ, ಬೇರೆ ಬೇರೆ ಜವಾಬ್ದಾರಿಗಳಲ್ಲಿದ್ದರೂ ಈ ಸಂಘಟನೆಯೊಂದಿಗೆ ಸದಾ ಇರುತ್ತೇವೆ. ವೇದಿಕೆಯಲ್ಲಿರುವ ಪೂಜ್ಯ ಸ್ವಾಮೀಜಿಗಳಲ್ಲಿ ನನ್ನದೊಂದು ಮನವಿ. ದಯವಿಟ್ಟು ಸಮಾಜದ ಪರವಾಗಿ ಧ್ವನಿ ಎತ್ತಿ, ಸಮಾಜದ ಹಿತಾಸಕ್ತಿಗಾಗಿ ಕೆಲಸ ಮಾಡಿ ಎಂದು ವಿನಂತಿಸಿದರು.
ನಾವು ಸಮಾಜಕ್ಕಾಗಿ ಎಷ್ಟೇ ಉತ್ತಮ ಕೆಲಸಗಳನ್ನು ಮಾಡಿದರೂ ಕೆಲವೊಮ್ಮೆ ಅವುಗಳನ್ನು ಸಮುದಾಯ ಮರೆತುಬಿಡುತ್ತದೆ. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದೆ. ಪಠ್ಯಪುಸ್ತಕಗಳಲ್ಲಿ ನಾರಾಯಣ ಗುರುಗಳ ಚಿಂತನೆಗಳನ್ನು ಸೇರ್ಪಡೆಗೊಳಿಸುವುದು, ನಾರಾಯಣ ಗುರುಗಳ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸುವುದು ಹಾಗೂ ನಿಗಮ-ಮಂಡಳಿ ರಚಿಸುವುದು ಈ ಮೂರು ಬೇಡಿಕೆಗಳಾಗಿದ್ದವು. ಮುಖ್ಯಮಂತ್ರಿಗಳು ಕೂಡಲೇ ಸಮ್ಮತಿಸಿ ಅವುಗಳಿಗೆ ಅನುಮೋದನೆ ನೀಡಿದ್ದರು ಎಂದು ಹಿಂದಿನ ಪ್ರಯತ್ನಗಳನ್ನು ಸ್ಮರಿಸಿದರು.
ಸಮಾಜದ ರಾಜಕೀಯ ಅಸ್ತಿತ್ವಕ್ಕೆ ಒಗ್ಗಟ್ಟು ಅಗತ್ಯ
26 ಉಪಪಂಗಡಗಳು ಹರಿದು ಹಂಚಿಹೋಗದೆ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಸಮಾಜದ ಅಭಿವೃದ್ಧಿ ಮತ್ತು ರಾಜಕೀಯ ಅಸ್ತಿತ್ವವನ್ನು ಬಲಪಡಿಸುವ ದೃಷ್ಟಿಯಿಂದ ಸಂಘಟಿತ ಪ್ರಯತ್ನ ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಮಹಾಒಕ್ಕೂಟ ಅಸ್ತಿತ್ವಕ್ಕೆ ಬಂದಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ, ಧರ್ಮಸ್ಥಳದ ರಾಮ ಕ್ಷೇತ್ರದ ಪೀಠಾಧಿಪತಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಚಿಕ್ಕಮಗಳೂರಿನ ದತ್ತಾಶ್ರಮದ ವಿನಯ್ ಗುರೂಜಿ, ನಿಟ್ಟೂರಿನ ರೇಣುಕಾನಂದ ಸ್ವಾಮೀಜಿ, ಸಾರಗನಜಡ್ಡು ಪೀಠದ ಯೋಗೇಂದ್ರ ಅವಧೂತರು, ನಿಪ್ಪಾಣಿಯ ಅರುಣಾನಂದತೀರ್ಥ ಸ್ವಾಮೀಜಿ, ವರ್ತೂರಿನ ಸ್ವಾಮಿ ದೇವಿಕಾನಂದ, ಅಫಜಲಪುರದ ಶಂಕರಪ್ಪ ಸ್ವಾಮೀಜಿ, ಸೈದಾಪುರದ ಭೀಮಾಶಂಕರ ಶರಣ ಸ್ವಾಮೀಜಿ ಹಾಗೂ ಸಿಗಂದೂರು ಚೌಡೇಶ್ವರಿ ಕ್ಷೇತ್ರದ ಎಸ್. ರಾಮಪ್ಪ ಉಪಸ್ಥಿತರಿದ್ದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್, ಲೋಕಸಭಾ ಸದಸ್ಯರಾದ ಶ್ರೀನಿವಾಸ ಪೂಜಾರಿ, ಶಾಸಕರಾದ ಭೀಮಣ್ಣ ಟಿ. ನಾಯ್ಕ, ವಿ. ಸುನಿಲ್ ಕುಮಾರ್, ಬೇಳೂರು ಗೋಪಾಲಕೃಷ್ಣ, ಜಗದೇವ ಗುತ್ತೇದಾರ್ ಸೇರಿದಂತೆ ಸಮುದಾಯದ ಮಾಜಿ ಸಚಿವರು, ಶಾಸಕರು ಹಾಗೂ ವಿವಿಧ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


