ಭಾರತದ ಸಂವಿಧಾನವು ತನ್ನನ್ನೂ ಒಳಗೊಂಡಂತೆ ದೇಶದ ಕೋಟ್ಯಂತರ ನಾಗರಿಕರ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂವಿಧಾನದ ಅಸಾಧಾರಣ ಆಶಯ ಮತ್ತು ಸ್ಫೂರ್ತಿಯಿಂದಾಗಿ ಸಾಮಾನ್ಯ ಹಾಗೂ ಸೌಲಭ್ಯವಂಚಿತ ಕುಟುಂಬದ ಹಿನ್ನೆಲೆಯ ಮಗುವಿಗೂ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವನ್ನು ಮುನ್ನಡೆಸುವ ಅವಕಾಶ ದೊರೆತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಂವಿಧಾನ ದಿನದ ಹಿನ್ನೆಲೆಯಲ್ಲಿ ಮಾತನಾಡಿರುವ ಪ್ರಧಾನಿ, ಕಾಂಗ್ರೆಸ್ ಪಕ್ಷದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದು, ಆ ಪಕ್ಷವು ತನ್ನ ಆಡಳಿತಾವಧಿಯಲ್ಲಿ ಸಂವಿಧಾನವನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಅಡ್ಡಿಯಾಗಿದ್ದ 370 ಮತ್ತು 35ಎ ವಿಧಿಗಳನ್ನು 2019ರಲ್ಲಿ ತಮ್ಮ ಸರ್ಕಾರ ರದ್ದುಗೊಳಿಸುವ ಮೂಲಕ ಹಿಂದಿನ ತಪ್ಪನ್ನು ಸರಿಪಡಿಸಿದೆ ಎಂದಿದ್ದಾರೆ.
ವಿವಿಧ ಧರ್ಮ, ಭಾಷೆ, ಆಚಾರ-ವಿಚಾರ ಹಾಗೂ ಸಿದ್ಧಾಂತಗಳನ್ನು ಹೊಂದಿರುವ ಭಾರತದಂತಹ ವೈವಿಧ್ಯಮಯ ರಾಷ್ಟ್ರದಲ್ಲಿ ಸಂವಿಧಾನದ ಆಶಯಗಳು ಸಂಸತ್ತು ಮತ್ತು ನ್ಯಾಯಾಲಯಗಳ ಆವರಣಕ್ಕೆ ಮಾತ್ರ ಸೀಮಿತವಾಗದೆ, ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲೂ ಪ್ರತಿಧ್ವನಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ.
ಇದೇ ಆಶಯದೊಂದಿಗೆ ದಶಕದ ಹಿಂದೆ ಎನ್‌ಡಿಎ ಸರ್ಕಾರವು ನವೆಂಬರ್ 26 ಅನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸುವ ನಿರ್ಧಾರ ಕೈಗೊಂಡಿತು ಎಂದು ಅವರು ತಿಳಿಸಿದ್ದಾರೆ.


