ಚುನಾವಣೆಗೆ ಮುನ್ನ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಈಗ ಅವರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಕೊರೆಯುವ ಚಳಿಯಲ್ಲೂ ಮಕ್ಕಳೊಂದಿಗೆ ಹಗಲಿರುಳು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮೂಲಭೂತ ಸೌಕರ್ಯಗಳನ್ನೂ ಒದಗಿಸಿಲ್ಲ. 10 ಸಾವಿರ ಮಹಿಳೆಯರಿಗೆ ಕೇವಲ ಎಂಟು ಶೌಚಾಲಯಗಳಿವೆ. ಕುಡಿಯುವ ನೀರು, ಹಾಲುಣಿಸುವ ತಾಯಂದಿರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿಲ್ಲ. ಚಳಿಯಿಂದಾಗಿ ಮಹಿಳೆಯರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮೊಬೈಲ್ ಕ್ಲಿನಿಕ್ ವ್ಯವಸ್ಥೆಯನ್ನಾದರೂ ಮಾಡಬಹುದಿತ್ತು. ಪ್ರತಿಭಟನಾಕಾರರಿಗೆ ಏನಾದರೂ ತೊಂದರೆಯಾದರೆ ಅದಕ್ಕೆ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.
ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರು ಆಶಾ ಕಾರ್ಯಕರ್ತೆಯರನ್ನು ಕರೆದು ಗೌರವಧನ ಹೆಚ್ಚಿಸುವ ಭರವಸೆ ನೀಡಿದ್ದರು. ಪ್ರಿಯಾಂಕಾ ಗಾಂಧಿ ಕೂಡ ಈ ಭರವಸೆ ನೀಡಿದ್ದರು. ಆದರೆ, ನುಡಿದಂತೆ ನಡೆಯುವ ಬಗ್ಗೆ ಜಾಹೀರಾತು ನೀಡಲು ಹಣ ಖರ್ಚು ಮಾಡಿದ ಸರ್ಕಾರ, ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಮುಂದಾಗಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂ. ನೀಡುವುದಾಗಿ ಭರವಸೆ ನೀಡಲಾಗಿದ್ದು, ಅವರೂ ಹೋರಾಟಕ್ಕೆ ಇಳಿಯುವ ಸಾಧ್ಯತೆಯಿದೆ ಎಂದರು.
ಕಾಂಗ್ರೆಸ್ ಸಮಿತಿಗಳಿಗೆ ಕೋಟ್ಯಂತರ ಖರ್ಚು
ಭಾರತ್ ಜೋಡೋ ಸಂಘಗಳು ಕಾಂಗ್ರೆಸ್‌ನ ಗಂಜಿಕೇಂದ್ರಗಳಾಗಿವೆ. ಆ ಸಂಘಗಳಲ್ಲಿ ಕಾಂಗ್ರೆಸ್‌ನವರೇ ಇರಬೇಕೆಂದು ಸಚಿವರು ಸೂಚಿಸಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೂ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಜನರ ತೆರಿಗೆ ಹಣವನ್ನು ಪಕ್ಷದ ಕಾರ್ಯಕರ್ತರಿಗಾಗಿ ಬಳಸಲಾಗುತ್ತಿದೆ. ರೈತರಿಗೆ ಬರ ಪರಿಹಾರ ನೀಡಲು ಹಣವಿಲ್ಲದ ಸರ್ಕಾರ, ಆಡಂಬರದ ದಸರಾ ಆಚರಣೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಬೆಂಗಳೂರು ಹಬ್ಬ ಆಯೋಜನೆಗೂ ಮುಂದಾಗಿರುವುದು ಸರಿಯಲ್ಲ ಎಂದು ಟೀಕಿಸಿದರು.
ಗೃಹಲಕ್ಷ್ಮಿ ಯೋಜನೆಯನ್ನೂ ಈಗ ಬಿಪಿಎಲ್ ಕುಟುಂಬಗಳಿಗೆ ಸೀಮಿತಗೊಳಿಸಲಾಗಿದೆ. ಮೂರೂವರೆ ವರ್ಷಗಳಲ್ಲಿ ಪ್ರತಿ ಕುಟುಂಬಕ್ಕೆ 84 ಸಾವಿರ ರೂ. ನೀಡಬೇಕಿತ್ತು. ಆದರೆ, ಇದುವರೆಗೆ ಕೇವಲ 30ರಿಂದ 35 ಸಾವಿರ ರೂ. ಮಾತ್ರ ನೀಡಲಾಗಿದೆ ಎಂದು ಆರೋಪಿಸಿದರು.
ಕೇಂದ್ರದ ಬಳಿ ಯಾಕೆ ಹೋಗಬೇಕು?
ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಬಿಜೆಪಿ ತನ್ನ ಸಲಹೆಗಳನ್ನು ನೀಡಿದೆ. ಆದರೆ, ಬರಗಾಲದಲ್ಲಿ ರೈತರಿಗೆ ಬಿಡಿಗಾಸು ಪರಿಹಾರ ನೀಡದ ರಾಜ್ಯ ಸರ್ಕಾರದ ಪರವಾಗಿ ಕೇಂದ್ರದ ಬಳಿ ನಾವೇಕೆ ಮನವಿ ಮಾಡಬೇಕು? ಬಿಜೆಪಿ ಆಡಳಿತಾವಧಿಯಲ್ಲಿ ಎನ್‌ಡಿಆರ್‌ಎಫ್ ಮಾನದಂಡಕ್ಕಿಂತ ದುಪ್ಪಟ್ಟು ಪರಿಹಾರ ನೀಡಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲಾಗಿತ್ತು. ಈಗ ಎಲ್ಲ ಸಮಸ್ಯೆಗಳಿಗೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮತಾಂತರ ಹೆಚ್ಚಾಗುತ್ತಿದೆ. ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ. ಮತಾಂತರ ನಿಷೇಧ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಗಳನ್ನು ಸರ್ಕಾರ ರದ್ದುಪಡಿಸಬಾರದು. ಈ ಕಾಯ್ದೆಗಳನ್ನು ಹಿಂಪಡೆಯಲು ಮುಂದಾದರೆ ಅಧಿವೇಶನದಲ್ಲಿ ಅವಕಾಶ ನೀಡುವುದಿಲ್ಲ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕೆಪಿಎಸ್‌ಸಿ ಹಗರಣ ಸಿಬಿಐಗೆ ವಹಿಸಲಿ
ಕೆಪಿಎಸ್‌ಸಿ ಹಗರಣದ ತನಿಖೆಯ ದಿಕ್ಕನ್ನು ಸರ್ಕಾರ ಬದಲಿಸಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವ ಬದಲು ಎಸ್‌ಐಟಿ ತನಿಖೆಯನ್ನು ದಾರಿ ತಪ್ಪಿಸಲಾಗುತ್ತಿದೆ. ಎಸ್‌ಐಟಿ ಎಂದರೆ ಕ್ಲೀನ್‌ಚಿಟ್ ನೀಡುವ ತಂಡವಾಗಿದೆ ಎಂದು ಆರೋಪಿಸಿದರು.
ಆನೆಗಳ ಹಾವಳಿ ವಿಚಾರದಲ್ಲಿಯೂ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಆನೆಗಳು ನಾಡಿಗೆ ಬರಲು ಕಾರಣವೇನು, ಅವುಗಳ ಆವಾಸಸ್ಥಾನದಲ್ಲಿ ನೀರಿನ ಸಮಸ್ಯೆ ಇದೆಯೇ ಎಂಬುದನ್ನು ಅರಣ್ಯ ಇಲಾಖೆ ಪರಿಶೀಲಿಸಬೇಕಿತ್ತು. ಆನೆಗಳನ್ನು ಏಕಾಏಕಿ ಓಡಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಸರ್ಕಾರ ತನ್ನ ತಪ್ಪನ್ನು ಆನೆಗಳ ಮೇಲೆ ಹೊರಿಸುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಹಾಗೂ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾದ ವಿಚಾರಗಳ ಕುರಿತು ಚರ್ಚಿಸಲು ನವೆಂಬರ್ 26ರಂದು ಬೆಂಗಳೂರಿನಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆಯಲಿದೆ ಎಂದು ಆರ್.ಅಶೋಕ ತಿಳಿಸಿದರು.


