Homeಕರ್ನಾಟಕಟೊಯೊಟಾ ಪ್ರಾಜೆಕ್ಟ್ 4 ಮಹಾರಾಷ್ಟಕ್ಕೆ ಯಾಕೆ ಹೋಯಿತು? ಸಿಎಂಗೆ ಎಚ್‌ಡಿಕೆ ಪ್ರಶ್ನೆ

ಟೊಯೊಟಾ ಪ್ರಾಜೆಕ್ಟ್ 4 ಮಹಾರಾಷ್ಟಕ್ಕೆ ಯಾಕೆ ಹೋಯಿತು? ಸಿಎಂಗೆ ಎಚ್‌ಡಿಕೆ ಪ್ರಶ್ನೆ

ಮುಖ್ಯಮಂತ್ರಿ ಅವರಿಗೆ ರಾಜ್ಯದಲ್ಲಿನ ಭ್ರಷ್ಟಾಚಾರವನ್ನು ಗಮನಿಸಲು ಸಮಯವಿಲ್ಲ. ಆದರೆ ಬೆಂಗಳೂರಿನ ಸುತ್ತಮುತ್ತ ಖಾಲಿ ಜಾಗ ಮತ್ತು ಸರ್ಕಾರಿ ಜಮೀನುಗಳನ್ನು ಹುಡುಕಲು ಮಾತ್ರ ಸಮಯವಿದೆ. ಇತ್ತೀಚೆಗೆ ರಾತ್ರಿ ವೇಳೆ ಖಾಸಗಿ ಕಾರಿನಲ್ಲಿ ಜಮೀನು ನೋಡಲು ತೆರಳಿದ್ದಾಗ ಹಳ್ಳಿಯ ಜನರು ಕಳ್ಳರೆಂದು ಭಾವಿಸಿ ಓಡಿಸಿಕೊಂಡು ಬಂದಿದ್ದರು ಎಂಬ ಮಾಹಿತಿ ಹರಿದಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಬೆಂಗಳೂರಿನ ಜಯನಗರದ ಕ್ಲೌಡ್ ನೈನ್ ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿಲ್ಲ ಎನ್ನುತ್ತಿದ್ದಾರೆ. ಆದರೆ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಟೀಕಿಸಿದರು.

ಇತ್ತೀಚೆಗೆ 20 ಗುಂಟೆ ಜಮೀನಿನ ವಿಚಾರದಲ್ಲಿ ₹50 ಸಾವಿರ ಲಂಚ ಪಡೆದ ಆರೋಪದ ಮೇಲೆ ಕಂದಾಯ ನಿರೀಕ್ಷಕರೊಬ್ಬರು ಅಮಾನತುಗೊಂಡಿದ್ದಾರೆ. ಇದು ಭ್ರಷ್ಟಾಚಾರವಲ್ಲವೇ? ಸಂಬಂಧಪಟ್ಟ ಸಚಿವರು ಅದನ್ನು ಗೌರವಧನ ಎಂದು ಸಮರ್ಥಿಸಿಕೊಂಡಿದ್ದರು. ಗೌರವದಿಂದ ಕೊಡಬೇಕೆಂದರೆ ಅದು ಭ್ರಷ್ಟಾಚಾರವಾಗುವುದಿಲ್ಲವೇ? ರಾಜ್ಯದ ಹಲವು ಕಡೆಗಳಲ್ಲಿ ಕೆಲಸ ಮಾಡಿಕೊಡಲು ಹಣ ಪಡೆದು ಅಧಿಕಾರಿಗಳು ಸಿಕ್ಕಿಬೀಳುತ್ತಿದ್ದಾರೆ. ಇಂತಹ ಪ್ರಕರಣಗಳಿಗೆ ಸಂಬಂಧಿಸಿದ ಟನ್‌ಗಟ್ಟಲೆ ದಾಖಲೆಗಳು ನನ್ನ ಬಳಿ ಇವೆ ಎಂದು ಹೇಳಿದರು.

ರಾತ್ರಿ ವೇಳೆ 150 ಎಕರೆ ಜಮೀನು ಹುಡುಕಾಟ?

ಮುಖ್ಯಮಂತ್ರಿ ಅವರು ಇತ್ತೀಚೆಗೆ ಸೋಂಪುರ ಅಥವಾ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 150 ಎಕರೆ ಜಮೀನು ನೋಡಲು ರಾತ್ರಿ ವೇಳೆ ಖಾಸಗಿ ಕಾರಿನಲ್ಲಿ ತೆರಳಿದ್ದರು. ಈ ಸಂದರ್ಭದಲ್ಲಿ ತಡರಾತ್ರಿ ಅಪರಿಚಿತರು ಬಂದಿದ್ದನ್ನು ಕಂಡ ಗ್ರಾಮಸ್ಥರು ಕಳ್ಳರೆಂದು ಭಾವಿಸಿ ಓಡಿಸಿಕೊಂಡು ಬಂದಿದ್ದಾರೆ ಎಂಬ ಮಾಹಿತಿ ಇದೆ. ಇದು ನಿಜವೋ, ಸುಳ್ಳೋ ಎಂಬುದನ್ನು ಮುಖ್ಯಮಂತ್ರಿಗಳನ್ನೇ ಕೇಳಿ ಎಂದು ಕುಮಾರಸ್ವಾಮಿ ಹೇಳಿದರು.

ಮುಖ್ಯಮಂತ್ರಿಗಳು ರಾತ್ರಿ ವೇಳೆ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಇಂತಹ ಘಟನೆಗಳು ಸಾಕ್ಷಿಯಲ್ಲವೇ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳೇ ಸ್ಪಷ್ಟನೆ ನೀಡಲಿ ಎಂದರು.

ಟೊಯೊಟಾ ಹೂಡಿಕೆ ಮಹಾರಾಷ್ಟ್ರಕ್ಕೆ ಹೋಗಿದ್ದೇಕೆ?

ಮುಖ್ಯಮಂತ್ರಿ ಅವರು ಜಪಾನ್ ಪ್ರವಾಸ ಕೈಗೊಂಡು ಟೊಯೊಟಾ ಕಂಪನಿಗೆ ಭೇಟಿ ನೀಡುತ್ತಾರೆ. ಆದರೆ ಟೊಯೊಟಾ ಕಂಪನಿಯ ಮಹತ್ವದ ನಾಲ್ಕನೇ ಯೋಜನೆ ಮಹಾರಾಷ್ಟ್ರಕ್ಕೆ ಏಕೆ ಸ್ಥಳಾಂತರವಾಯಿತು? ಅಲ್ಲಿ ಸುಮಾರು ₹25 ಸಾವಿರ ಕೋಟಿ ಹೂಡಿಕೆ ಮಾಡಲು ಕಂಪನಿ ಮುಂದಾಗಿರುವುದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದರು.

ಟೊಯೊಟಾ ಕಂಪನಿ ಆರಂಭದಲ್ಲಿ ಹರಿಯಾಣ ಅಥವಾ ಮಹಾರಾಷ್ಟ್ರಕ್ಕೆ ಹೋಗುವ ಸಾಧ್ಯತೆಯಿತ್ತು. ಆಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಯತ್ನಿಸಿ ಕಂಪನಿಯನ್ನು ಕರ್ನಾಟಕಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಆ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಮರಳು, ಇಟ್ಟಿಗೆ ಪೂರೈಕೆಯಲ್ಲೂ ಪೈಪೋಟಿ ನಡೆಸಿ ಹಣ ಮಾಡಿಕೊಂಡರು. ಅಂತಹ ಕೆಲಸವನ್ನು ನಾವು ಮಾಡಿರಲಿಲ್ಲ ಎಂದು ಆರೋಪಿಸಿದರು.

ದೇವೇಗೌಡರು ಪ್ರಯತ್ನಿಸಿ ಕರ್ನಾಟಕಕ್ಕೆ ತಂದಿದ್ದ ಟೊಯೊಟಾ ಕಂಪನಿಯ ಹೊಸ ಯೋಜನೆ ಮಹಾರಾಷ್ಟ್ರಕ್ಕೆ ಹೋಗಿದೆ. ಜಪಾನ್‌ಗೆ ಹೋಗಿ ಹೂಡಿಕೆ ಆಕರ್ಷಣೆಯ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು, ಕರ್ನಾಟಕಕ್ಕೆ ಬರಬೇಕಿದ್ದ ಯೋಜನೆ ಬೇರೆ ರಾಜ್ಯಕ್ಕೆ ಹೋಗಿರುವುದಕ್ಕೆ ಉತ್ತರಿಸಬೇಕು. ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ಮೊದಲು ತಮ್ಮ ಆಡಳಿತದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments