ವಿದ್ಯಾರ್ಥಿಗಳಿಂದ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ, ರಾಜಕಾರಣಿಗಳಿಂದ, ಶಾಸನ ಸಭೆ, ಸಂಸತ್ತಿನಲ್ಲಿ ಭಾಷಣ ಬಿಗಿಯುವುದರಿಂದ ದೇಶವನ್ನು ಕಟ್ಟಲು, ಮುಂಚೂಣಿ ತರಲು ಸಾಧ್ಯವಿಲ್ಲ ದೇಶ ಮುಂಚೂಣಿಗೆ ಬರಬೇಕಾದರೆ ಯುವಕರೇ ಪಾತ್ರ ನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ಶ್ರೀದೇವಿ ನರ್ಸಿಂಗ್ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.
ದೇಶ ಪ್ರೇಮವೆಂದರೆ ಕೇವಲ ಭಾಷಣ ಮಾಡುವುದಲ್ಲ, ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರನ್ನು ಉನ್ನತ ಮಟ್ಟಕ್ಕೆ ಬೆಳೆಸುವುದೇ ನಿಜವಾದ ದೇಶಸೇವೆ ಎಂದರು. ನರ್ಸಿಂಗ್ ವೃತ್ತಿಯಲ್ಲಿ ವಿವಿಧ ವಿಶೇಷ ವಿಭಾಗಗಳಲ್ಲಿ ತರಬೇತಿ ಪಡೆದು ಉನ್ನತ ಮಟ್ಟಕ್ಕೆ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ತಮ್ಮ ಆಸಕ್ತಿಗೆ ಅನುಗುಣವಾಗಿ ವಿಶೇಷ ಕೌಶಲ್ಯಗಳನ್ನು ಕಲಿತು ವೃತ್ತಿಜೀವನದಲ್ಲಿ ಸಾಧನೆ ಮಾಡಬೇಕು. ಮುಂದಿನ15-20 ವರ್ಷಗಳ ಅವಧಿಯಲ್ಲಿ ಜಗತ್ತಿಗೆ ಬೇಕಾಗುವ ಮಾನವ ಸಂಪನ್ಮೂಲಗಳನ್ನು ಒದಗಿಸುವ ಶಕ್ತಿ ಭಾರತಕ್ಕಿದೆ. ಉನ್ನತ ಶಿಕ್ಷಣ ದೊಡ್ಡಮಟ್ಟದ ಕೊಡುಗೆ ನೀಡಿದೆ. ಮಾತು ಮತ್ತು ಕೆಲಸ ದೇಶದ ಬೆಳವಣಿಗೆಗೆ ಪೂರಕವಾಗಿರಬೇಕೆ ಹೊರತು ಮಾರಕವಾಗಬಾರದು ಎಂದು ಮಾತನಾಡಿದರು.
ಭಾಷೆಯ ಅಡೆತಡೆಗಳಿಂದಾಗಿ ಉತ್ತಮ ಉದ್ಯೋಗಾವಕಾಶಗಳು ಕೈತಪ್ಪುವ ಸಾಧ್ಯತೆ ಇದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ವಿವಿಧ ವಿದೇಶಿ ಭಾಷೆಗಳನ್ನು ಕಲಿಯಲು ಅನುಕೂಲವಾಗುವಂತೆ ಕಾಲೇಜುಗಳಲ್ಲಿ ಕೌಶಲ್ಯ, ಪ್ರಯೋಗಾಲದಂತೆ, ಭಾಷಾ ಪ್ರಯೋಗಾಲಯಗಳನ್ನು ಸ್ಥಾಪಿಸುವ ಅಗತ್ಯ ಹೆಚ್ಚಾಗಿದೆ ಎಂದು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಮಾಜಿ ಸಚಿವ ಡಾ.ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಇಂದಿನ ಎ.ಐ. ಯುಗದಲ್ಲಿ ಪದವಿ ಪಡೆದರೆ ಸಾಲದು, ಸ್ಪರ್ಧೆ ಎದುರಿಸಲು ಎಲ್ಲಾ ರೀತಿಯ ಕೌಶಲ್ಯ ಬಹಳ ಮುಖ್ಯವಾಗಿದೆ ಶ್ರೀದೇವಿ ಆಡಳಿತ ಮಂಡಳಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದ್ದು, ಸಾವಿರಾರು ಇಂಜಿನಿಯರ್ ಮತ್ತು ವೈದ್ಯರನ್ನು ತಯಾರು ಮಾಡಿ ದೇಶಕ್ಕೆ ಸಾರ್ಥಕ ಸೇವೆ ಸಲ್ಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀದೇವಿ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ನರ್ಸಿಂಗ್ ವೃತ್ತಿ ಜ್ಞಾನ, ಕೌಶಲ್ಯ ಮಾನವೀಯ ಮೌಲ್ಯಗಳ ಸಮ್ಮಿಲನ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶ್ರೀದೇವಿ ಮತ್ತು ಶ್ರೀರಮಣ ಮಹರ್ಷಿ ನರ್ಸಿಂಗ್ ಕಾಲೇಜಿನ 156 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ನಿರ್ದೇಶಕ ಡಾ. ರಮಣ್ ಎಂ. ಹುಲಿನಾಯ್ಕರ್, ಶ್ರೀದೇವಿ ಚಾರಿಟಬಲ್ ಟ್ರಸ್ಟಿಗಳಾದ ಡಾ.ಲಾವಣ್ಯ, ಅಂಬಿಕಾ ಎಂ. ಹುಲಿನಾಯ್ಕರ್, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಎಂ.ಎಸ್. ಪಾಟೀಲ್, ಮೂರು ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಆರ್.ಕೆ.ಮುನಿಸ್ವಾಮಿ, ಪ್ರೊ.ಉಷಾ.ಎಸ್, ಪ್ರೊ. ಅಂಬಾ ಮೊದಲಾದವರು ಉಪಸ್ಥಿತರಿದ್ದರು.


