12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣ ಮತ್ತು ಶರಣರ ವಿಚಾರಧಾರೆಗಳನ್ನು ತಿರುಚಿ ಅವಹೇಳನಕಾರಿಯಾಗಿ ಬಿಂಬಿಸುವ ಕೆಲಸ ಹಿಂದಿನಿಂದಲೂ ವ್ಯವಸ್ಥಿತವಾಗಿ ಒಂದು ವಲಯದಿಂದ ನಡೆಯುತ್ತ ಬರುತ್ತಿದೆ. ಬಸವಣ್ಣ ಅವರ ಬಗ್ಗೆ ಹೇಗೆಲ್ಲಾ ಅಪನಂಬಿಕೆಗಳನ್ನು ಸಮಾಜದಲ್ಲಿ ಬಿತ್ತಲಾಗುತ್ತಿದೆ ಎಂಬುದನ್ನು ಲೇಖಕರಾದ ರಂಜಾನ್ ದರ್ಗಾ ತಮ್ಮದೇ ಸೂಕ್ಷ್ಮ ಒಳನೋಟಗಳ ಮೂಲಕ ವಿಶ್ಲೇಷಿಸಿದ್ದಾರೆ.
ಶರಣರ ವಚನಗಳು ಮತ್ತು ಶಾಸನಗಳು ಇತಿಹಾಸ ಪ್ರಧಾನವಾಗಿವೆ. ಹರಿಹರನ ʼಬಸವರಾಜ ದೇವರ ರಗಳೆʼ, ಪಾಲ್ಕುರಿಕೆ ಸೋಮನಾಥನ ʼಬಸವ ಪುರಾಣಮುʼ, ಭೀಮಕವಿಯ ʼಬಸವಪುರಾಣʼ, ಸಿಂಗಿರಾಜನ ʼಸಿಂಗಿರಾಜ ಪುರಾಣʼ, ಜೈನಕವಿ ಧರಣಿ ಪಂಡಿತನ ʼಬಿಜ್ಜಳರಾಯ ಚರಿತ್ರೆʼ ಮುಂತಾದವು ಪುರಾಣ ಪ್ರಧಾನವಾಗಿವೆ. ಬಸವಣ್ಣನವರು ರಾಜ್ಯ ಭಂಡಾರದ ಹಣವನ್ನು ದುರುಪಯೋಗ ಮಾಡಿಕೊಂಡ ಬಗ್ಗೆ ಮತ್ತು ಬಿಜ್ಜಳನ ಕೊಲೆ ಮಾಡಿದ ಪ್ರಸಂಗದ ಬಗ್ಗೆ ಯಾವುದೇ ಸಂಗತಿಗಳು ವಚನಗಳಲ್ಲಿ ಮತ್ತು ಶಾಸನಗಳಲ್ಲಿ ಉಲ್ಲೇಖವಾಗಿಲ್ಲ. ʼಬಿಜ್ಜಳನ ಭಂಡರಾವೆನಗೇಕಯ್ಯಾʼ ಎಂದು ಬಸವಣ್ಣನವರು ಹೇಳುವ ಮೂಲಕ ಪಟ್ಟಭದ್ರ ಹಿತಾಸಕ್ತಿಗಳು ಮಾಡಿದ ಆರೋಪವನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ.
ವಚನಗಳಲ್ಲಿ, ಶಾಸನಗಳಲ್ಲಿ ಮತ್ತು ಸಮಕಾಲೀನ ಇತಿಹಾಸದಲ್ಲಿ ಸತ್ಯವನ್ನು ಹುಡುಕುವ ಬದಲಿಗೆ ತಮ್ಮ ವಾದಕ್ಕೆ ಪುಷ್ಟಿಕೊಡುವಂಥ ಪುರಾಣಗಳ ಆಧಾರದಲ್ಲಿ ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದು ತರವಲ್ಲ.
ತಮ್ಮ ವಿಚಾರಗಳ ಪ್ರತಿಪಾದನೆಗಾಗಿ ಪುರಾಣ ಸಾಹಿತಿಗಳು ಕಥೆ ಕಟ್ಟುವುದು ಸಹಜವಾಗಿದೆ. ಹರಳಯ್ಯ ಮಧುವರಸರಿಗೆ ಎಳೆಹೂಟೆ ಶಿಕ್ಷೆಯಿಂದ ಬಿಜ್ಜಳ ಕೊಲ್ಲಿಸಿದ್ದರಿಂದ ಜಗದೇವ ಮೊಲ್ಲಿಬೊಮ್ಮರು ಬಿಜ್ಜಳನ ಕೊಲೆ ಮಾಡಿದರು ಎಂದು ಶರಣರ ಪರವಾಗಿರುವ ಪುರಾಣ ಸಾಹಿತಿಗಳು ಹೇಳಿದ್ದರೆ. ಬಿಜ್ಜಳನ ಕೊಲೆ ರಾಜದ್ರೋಹ ಎಂದು 17ನೇ ಶತಮಾನದ ಜೈನಕವಿ ಧರಣಿ ಪಂಡಿತ ತನ್ನ ʼಬಿಜ್ಜಳರಾಯ ಚೆರಿತೆʼಯಲ್ಲಿ ಆಪಾದಿಸಿದ್ದಾನೆ. ಈ ಕೊಲೆಯ ಹಿಂದೆ ಬಸವಣ್ಣನವರ ಕೈವಾಡವಿತ್ತು ಎಂದು ಸೂಚಿಸಿದ್ದಾನೆ. ಬಿಜ್ಜಳನ ಕೊಲೆಯ ಸಂಬಂಧದಲ್ಲಿ ಬಸವಣ್ಣನವರ ಹೆಸರನ್ನು ಧರಣಿ ಪಂಡಿತ ಎಳೆದುತಂದ ಹಾಗೆ ಇನ್ನಾವ ಕವಿಯೂ ತಂದಿಲ್ಲ! ಇದನ್ನೇ ಮುಂದಿಟ್ಟುಕೊಂಡು ಕೆಲವರು ʼಬಸವಣ್ಣನವರು ಬಿಜ್ಜಳನ ಕೊಲೆ ಮಾಡಿಸಿದರುʼ ಎಂದು ಅಪಪ್ರಚಾರ ಮಾಡುವುದು ಸರಿಯಲ್ಲ.
ಚಿದಾನಂದಮೂರ್ತಿಗಳು ಮಾಡಿದ ಎಡವಟ್ಟು: ಮೂರ್ತಿಗಳು ಬರೆದ “ಬಸವಣ್ಣನವರು” ಪುಸ್ತಕ ಅನೇಕ ಮುದ್ರಣಗಳನ್ನು ಕಂಡಿದೆ. 2017ರ ಪರಿಷ್ಕೃತ ಮುದ್ರಣವನ್ನು ಬೆಂಗಳೂರಿನ ಸ್ನೇಹ ಬುಕ್ ಹೌಸ್ ಪ್ರಕಟಿಸಿದೆ.”ಶಿವದ್ರೋಹವಂಗೈದ ಬಿಜ್ಜಳನ ಕೊಲಿಸುತುಂ” ಎಂಬ 14ನೇ ಶತಮಾನದ ಭೀಮಕವಿಯ ಬಸವಪುರಾಣದ ಸಾಲನ್ನು 13ನೇ ಶತಮಾನದ ಹರಿಹರನ ತಲೆಗೆ ಕಟ್ಟಿದ್ದಾರೆ. ಬಿಜ್ಜಳನನ್ನು ಕೊಂದವರು ಜಗದೇವ ಮಲ್ಲಿಬೊಮ್ಮರು ಎಂದು ಭೀಮಕವಿ ಹೇಳಿದ್ದಾನೆ ಹೊರತಾಗಿ ಬಸವಣ್ಣನ ಪ್ರಚೋದನೆ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಚಿದಾನಂದಮೂರ್ತಿಗಳು ಸುಳ್ಳು ಬರೆಯುವುದಲ್ಲದೆ ಆ ಕೊಲೆಯನ್ನು ಬಸವಣ್ಣನವರ ತಲೆಗೆ ಕಟ್ಟಲು ಪ್ರಯತ್ನಿಸಿ ಅದನ್ನು ಬೆಂಬಲಿಸುವ ಚಾಣಾಕ್ಷತನವನ್ನು ತೋರಿದ್ದಾರೆ. “ಕೊಲೆಗೆ, ದಯವೆ ಧರ್ಮದ ಮೂಲ ಎಂದು ಪ್ರತಿಪಾದಿಸಿ ಬದುಕಿದ ಬಸವಣ್ಣನವರ ಪರೋಕ್ಷ ಸಹಮತವಿತ್ತೆ ಎಂಬುದನ್ನು ಹೀಗೆ ಪರಿಶೀಲಿಸಬಹುದು. ಹರಳಯ್ಯ ಮಧುವಯ್ಯರು ಹುಟ್ಟಿನಿಂದ ದಲಿತ, ಬ್ರಾಹ್ಮಣರಾಗಿದ್ದು ಆ ಮೇಲೆ ವೀರಶೈವರಾಗಿ ಪರಸ್ಪರ ರಕ್ತಸಂಬಂಧವನ್ನು ಬೆಳೆಸಲು ಮುಂದಾದದ್ದು ವೀರಶೈವರಿಗೆ ಒಪ್ಪಿಗೆ ಇತ್ತು. … (ಈ ವರ್ಣಸಂಕರವನ್ನು ಬಿಜ್ಜಳ ವಿರೋಧಿಸಿದ) ಹರಳಯ್ಯ ಮಧುವರಸರ ಕಣ್ಣುಗಳನ್ನು ಬಿಜ್ಜಳ ಕೀಳಿಸಿದಾಗ ಕಲ್ಯಾಣ ತೀವ್ರವಾಗಿ ಕ್ಷೋಭೆಗೊಂಡಿತು. ಬಿಜ್ಜಳನ ಪರವಾಗಿದ್ದ ಸೈನ್ಯ ಮತ್ತು ಜನತೆ ಅಮಾಯಕ ಲಿಂಗಾಯತರ ಕೊಲೆ ಮಾಡಿದರು. ಆಗ ಉಂಟಾದ ಹಿಂಸೆಯನ್ನು ತಾಳಲಾರದೆ ಬಸವಣ್ಣ ಕಲ್ಯಾಣವನ್ನು ಬಿಟ್ಟು ಕೂಡಲಸಂಗಮಕ್ಕೆ ತೆರಳಿದರೂ ಅವರಿಗೆ ಬಿಜ್ಜಳನ ಬಗ್ಗೆ ತೀವ್ರ ಕೋಪವಿದ್ದಿತು. ಅವರಿಗೆ ಬಿಜ್ಜಳನಿಗೆ ಯಾರಾದರೂ ಕೊಂದರೆ ತಪ್ಪಲ್ಲ ಎಂಬ ಭಾವನೆಯೂ ಇದ್ದಿತು. ಜಗದೇವನಿಗೆ ಬಸವಣ್ಣನವರ ಆ ಭಾವನೆ ತಿಳಿದು ಬಿಜ್ಜಳನ ಕೊಲೆ ಮಾಡಲು ಅದು ಉತ್ಸಾಹವನ್ನು ನೀಡಿತು. ಬಸವಣ್ಣನವರು ಜಗದೇವನಿಗೆ ಬಿಜ್ಜಳನ ಕೊಲೆ ಮಾಡುವಂತೆ ನೇರವಾಗಿ ಆಜ್ಞಾಪಿಸದಿದ್ದರೂ ಕೊಲೆಗೆ ಅವರ ಮೌನ ಸಮ್ಮತಿಯಿದ್ದಿತು ಎಂಬ ಊಹೆ ನಿರಾಧಾರವಾದುದಲ್ಲ. ಬಿಜ್ಜಳನ ಕೊಲೆ ಆಗದಿದ್ದರೆ ಸಾವಿರಾರು ಅಮಾಯಕ ಲಿಂಗಾಯತರ ಮತ್ತು ಇತರರ ಕೊಲೆ ನಡೆದು ಅದು ಲಿಂಗಾಯತ ಧರ್ಮ ಪ್ರಸಾರಕ್ಕೆ ಅಡ್ಡಿಯಾಗುತ್ತಿತ್ತು”
ಹೀಗೆ ಸಂಶೋಧಕ ಡಾ. ಎಂ. ಚಿದಾನಂದಮೂತಿ ಅವರು ತಮ್ಮ ಚಾಣಾಕ್ಷತನವನ್ನು ಪ್ರದರ್ಶಿಸಿದ್ದಾರೆ. “ಶಿವದ್ರೋಹವಂಗೈದ ಬಿಜ್ಜಳನ ಕೊಲಿಸುತುಂ” ಎಂಬ ಭೀಮಕವಿಯ ಸಾಲನ್ನು ಹರಿಹರನ ತಲೆಗೆ ಕಟ್ಟಿದ ನಂತರ ಆ ಕೊಲೆಯನ್ನು ಬಸವಣ್ಣನವರ ತಲೆಗೆ ಕಟ್ಟುವ ಚಿದಾನಂದಮೂರ್ತಿಯವರ ದುರುದ್ದೇಶ, ಮುಗ್ಧರು ಮತ್ತು ಮೂರ್ಖರು ʼಅಹುದು ಅಹುದುʼ ಎನ್ನುವ ಹಾಗೆ ಇದೆ. ಹರಿಹರನ ʼಬಸವರಾಜ ದೇವರ ರಗಳೆʼಯ ಕೇವಲ ಆರಂಭದ ೧೩ ಸ್ಥಲಗಳು ಮಾತ್ರ ಸಿಕ್ಕಿವೆ. ಸಿಕ್ಕ ಭಾಗದಲ್ಲಿ ಹರಳಯ್ಯ ಮಧುವರಸರಿಗೆ ವಿಧಿಸಿದ ಎಳೆಹೂಟೆ ಶಿಕ್ಷೆ ಮತ್ತು ಬಿಜ್ಜಳನ ಕೊಲೆಯ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಇಡೀ ಕಾವ್ಯ ಬಸವಣ್ಣನವರ ಮಹೋನ್ನತ ವ್ಯಕ್ತಿತ್ವವನ್ನು ಎತ್ತಿ ತೋರಿಸುವಂಥ ಪವಾಡಗಳಿಂದ ತುಂಬಿದೆ. ಹರಿಹರ ಮೈಮನದುಂಬಿ ಬಸವಣ್ಣನವರನ್ನು ಹಾಡಿ ಹೊಗಳಿದ್ದಾನೆ. ಹರಿಹರ ಆಗಲಿ, ಭೀಮಕವಿಯಾಗಲಿ ಇನ್ನಾವುದೇ ಲಿಂಗಾಯತ ಕವಿಯಾಗಲಿ ಬಸವಣ್ಣನವರನ್ನು ಕೊಲೆಗಡುಕ ಎಂದು ಹೇಳಲು ಸಾಧ್ಯವೆ?
ವಚನಗಳ ಸಮಸ್ಯೆ
ಪಟ್ಟಭದ್ರ ಹಿತಾಸಕ್ತಿಗಳು ಕಲ್ಯಾಣದಲ್ಲಿ ಹತ್ಯಾಕಾಂಡ ನಡೆಸಿ ಅನೇಕ ಶರಣರ ಕೊಲೆ ಮಾಡಿದವು. ಅವರ ಅಮೂಲ್ಯ ವಚನಕಟ್ಟುಗಳು ಬೆಂಕಿಗೆ ಆಹುತಿಯಾದವು. ಎಲ್ಲ ಶರಣರು ತಮಗೆ ತೋಚಿದಂತೆ ದಿಕ್ಕಾಪಾಲಾಗಿ ಹೋದರು. ವಚನ ರಕ್ಷಣೆಗಾಗಿ ಅನೇಕ ಶರಣರು ಉಳವಿಯ ಕಡೆಗೆ ಸಾಗಿದರು.
15ನೇ ಶತಮಾನದ ಆರಂಭದಲ್ಲಿ ಶಿವಗಣ ಪ್ರಸಾದಿ ಮಹಾದೇವಯ್ಯನವರು ಮೊದಲ ಬಾರಿಗೆ ʼಶೂನ್ಯ ಸಂಪಾದನೆʼ ರಚಿಸಿದರು. ಅದಕ್ಕೆ ಪಗರಣ (ನಾಟಕ) ಎಂದು ಕರೆದರು. 17ನೇ ಶತಮಾನದ ಆರಂಭದ ವರೆಗೆ ಒಟ್ಟು 200 ವರ್ಷಗಳ ಅವಧಿಯಲ್ಲಿ ನಾಲ್ಕು ಶೂನ್ಯಸಂಪಾದನೆಗಳು ರಚನೆಯಾದವು. ಇವೆಲ್ಲ ಮೂಲ ಸಂಪಾದನೆಯ ವಿಸ್ತೃತ ರೂಪಗಳು. ಎಲ್ಲ ಶೂನ್ಯಸಂಪಾದನೆಗಳು ನಾಟಕೀಯ ಅಂಶವನ್ನೇ ಒಳಗೊಂಡಿವೆ. ನಾಟಕೀಯ ಸಂಬಂಧವನ್ನು ಬೆಳೆಸುವುದಕ್ಕಾಗಿ ಈ ಸಂಪಾದಕರು ಅನೇಕ ವಚನಗಳನ್ನು ವಿವಿಧ ಶರಣರ ಹೆಸರಲ್ಲಿ ಪ್ರಸಂಗಗಳಿಗೆ ತಕ್ಕಂತೆ ವಚನ ರಚನೆ ಮಾಡಿ ಜೋಡಿಸಿದ್ದಾರೆ.
12ನೇ ಶತಮಾನದ ವಚನಕಟ್ಟುಗಳು ಸಿಕ್ಕಿಲ್ಲ. ತಾಡೋಲೆಗಳನ್ನು ಶತಶತಮಾನಗಳ ವರೆಗೆ ಸರಂಕ್ಷಿಸಿ ಇಡುವ ಯಾವುದೇ ತಂತ್ರಜ್ಞಾನ ಅಭಿವೃದ್ಧಿ ಹೊಂದಿದ್ದಿಲ್ಲ. ಕಾಲಕಾಲಕ್ಕೆ ಬದಲಾಗುತ್ತಿರುವ ಭಾಷೆಗೆ ಅನುಗುಣವಾಗಿ ಮತ್ತು ಆಯಾ ಕಾಲದ ಹಿತಾಸಕ್ತಿಗೆ ಅನುಗುಣವಾಗಿ ವಚನಗಳಲ್ಲಿ ಅನೇಕ ಪ್ರಕ್ಷಿಪ್ತ ವಚನಗಳು ಸೇರಿದವು. ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ವಚನಗಳಲ್ಲಿ ಕೆಲವೊಂದು ಶಬ್ದಗಳನ್ನು ಕೂಡಿಸುವುದು ಮತ್ತು ಕಳೆಯುವುದು ನಡೆದೇ ಇತ್ತು. ʼಚಾತುರ್ವರ್ಣಾತೀತನೆ ವೀರಶೈವʼ ಎಂದು ಸಿದ್ಧರಾಮರ ಒಂದು ವಚನದಲ್ಲಿ ಪ್ರಕಟಿಸಲಾಗಿದೆ. ಇಲ್ಲಿ ಲಿಂಗಾಯತ ಪದದ ಬದಲಿಗೆ ವೀರಶೈವ ಪದವನ್ನು ಸೇರಿಸಿದ್ದು ಸ್ಪಷ್ಟವಾಗುತ್ತದೆ. ಏಕೆಂದರೆ ʼಲಿಂಗಾಯತ್ತಂ ಬೋ ಸ್ವತಂತ್ರಶೀಲʼ ಎಂದು ಘೋಷಿಸುವ ಸಿದ್ಧರಾಮ ಹೀಗೆ ಹೇಳಲು ಸಾಧ್ಯವೇ ಎಂಬುದು ಯಾರಿಗಾದರೂ ಹೊಳೆಯದೆ ಇರಲು ಸಾಧ್ಯವಿಲ್ಲ.
ಕಾಲದ ತುಳಿತಕ್ಕೆ ಸಿಕ್ಕು ಕನ್ನಡದ ʼಱʼ (ಶಕಟರೇಫೆ) ಮತ್ತು ʼೞ” (ರಳ) ಅಕ್ಷರಗಳು ಮಾಯವಾಗಿವೆ. ಆದರೆ ಅವುಗಳಿಂದ ಕೂಡಿದ ಶಬ್ದಗಳು ಉಳಿದುಕೊಂಡಿವೆ. ಆದರೆ ಈಗಿನ ಕಾಲದ ಕನ್ನಡಿಗರಿಗೆ ಈ ಅಕ್ಷರಗಳ ಸಂಪರ್ಕ ಇಲ್ಲದ ಕಾರಣ ಶಕಟರೇಫೆಯ ಸ್ಥಾನದಲ್ಲಿ ʼರʼ ಅಕ್ಷರವನ್ನು ಬಳಸುತ್ತಾರೆ. ರಳ ಸ್ಥಾನದಲ್ಲಿ ʼಳʼ ಬಳಸುತ್ತಾರೆ.
ಈ ಬದಲಾವಣೆಯ ಕಾರಣ ಬಸವಣ್ಣನವರ ಒಂದು ವಚನದ ಅರ್ಥ ತದ್ವಿರುದ್ಧವಾಗಿ ಗೊಂದಲವುಂಟಾಯಿತು.
“ಮರೆಯಲಾಗದು ಹರಿಯ ಮರೆಯಲಾಗದು ಬ್ರಹ್ಮನ!
ಮರೆಯಲಾಗದು ತೆತ್ತೀಸಕೋಟಿ ದೇವರ್ಕಳ!
ನಮ್ಮ ಕೂಡಲಸಂಗಮದೇವರ ಮರೆಯಲಹುದು.”
ಇಲ್ಲಿ ʼಮಱೆʼ ಶಬ್ದವಿದೆ. ಆದರೆ ʼಮರೆʼ ಎಂದು ಪ್ರಕಟವಾದ ಕಾರಣ ಬೇರೆ ಅರ್ಥ ಕೊಡುತ್ತದೆ. ʼಮಱೆʼ ಅಂದರೆ ಅವಲಂಬಿತವಾಗು ಅಥವಾ ಮೊರೆಹೋಗು ಎಂಬ ಅರ್ಥ ಹೊಂದಿರುವುದರಿಂದ ಇಡೀ ವಚನದ ಆಶಯ ಬೇರೆಯೆ ಇದೆ ಎಂಬುದು ತಿಳಿದುಬರುತ್ತದೆ.
ವಚನಗಳಲ್ಲಿನ ಇಂಥ ತಪ್ಪುಗಳನ್ನು ಸರಿಪಡಿಸಬೇಕು. ಪ್ರಕ್ಷಿಪ್ತ ವಚನಗಳನ್ನು ಮತ್ತು ವಚನಗಳಲ್ಲಿ ಸೇರಿಸಲ್ಪಟ್ಟ ಶಬ್ದಗಳನ್ನು ತರ್ಕಬದ್ಧವಾಗಿ ತೆಗೆದು ಮೂಲ ಶಬ್ದವನ್ನು ಸೇರಿಸುವ ಪ್ರಯತ್ನ ಮಾಡಬೇಕು. 12ನೇ ಶತಮಾನಕ್ಕೆ ಸೀಮಿತವಾದ ವಚನಗಳನ್ನು ಮತ್ತು ಸಾರ್ವಕಾಲಿಕ ವಚನಗಳನ್ನು ಪ್ರತ್ಯೇಕವಾಗಿ ಪ್ರಕಟಿಸಬೇಕು. ಸ್ಥಲಕಟ್ಟುಗಳ ಸಂಪಾದನೆ 15ನೇ ಶತಮಾನದ್ದು ಹೊರತಾಗಿ 12ನೇ ಶತಮಾನದ್ದಲ್ಲ ಎಂಬುದನ್ನು ಅರಿತುಕೊಂಡಿರಬೇಕು. ಇಲ್ಲಿಯ ವರೆಗಿನ ಜನಪ್ರಿಯ ಸಂಪುಟಗಳ ಬದಲಿಗೆ ಪಾಠಾಂತರಗಳ ಅಡಿ ಟಿಪ್ಪಣಿಯೊಂದಿಗೆ ವಚನಗಳನ್ನು ಪ್ರಕಟಿಸಬೇಕು. “ಅರಸು ಮುನಿದಡೆ ನಾಡೊಳಗಿರಬಾರದಯ್ಯಾ. ಗಂಡ ಮುನಿದಡೆ ಮನೆಯೊಳಗಿರಬಾರದಯ್ಯಾ” ಎಂದು ಬಸವಣ್ಣನವರ ವಚನವೊಂದು ಪ್ರಕಟವಾಗಿದೆ. ಹಾಗಾದರೆ ಗಂಡ ಮುನಿದರೆ ಹೆಂಡತಿ ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುವುದು. ಆಗ ನಾವು ಪಾಠಾಂತರಗಳನ್ನು ಹುಡುಕಬೇಕಾಗುವುದು. ಈ ವಚನಕ್ಕೆ 10 ಪಾಠಾಂತರಗಳಿವೆ. ಅವುಗಳಲ್ಲಿ ಒಂದು ʼಹೆಂಡತಿಯಾಗಿʼ ಪದ ಆ ಪಾಠಾಂತರದಲ್ಲಿ ಸೇರಿದೆ. ಈ ಪದವನ್ನು ಸೇರಿಸಿ ʼಗಂಡ ಮುನಿದಡೆ ಹೆಂಡತಿಯಾಗಿ ಮನೆಯೊಳಗಿರಬಾರದಯ್ಯಾʼ ಎಂಬ ಸಾಲು ಅರ್ಥಪೂರ್ಣವಾಗುತ್ತದೆ. ಗಂಡ ಮುನಿದರೆ ಹೆಂಡತಿಯಾದವಳು ಸೊಸೆಯಾಗಿ, ಅತ್ತಿಗೆಯಾಗಿ, ತಾಯಿಯಾಗಿ ಮನೆಯಲ್ಲಿ ಇರಬೇಕು ಎಂಬುದನ್ನು ಈ ವಾಕ್ಯ ಸೂಚಿಸುವ ಮೂಲಕ, ಗಂಡನಿಗೆ ʼಶಿಕ್ಷೆʼ ಕೊಡುವ ರೀತಿಯಲ್ಲಿ ಸ್ತ್ರೀವಾದಿ ನಿಲುವನ್ನು ತಾಳುತ್ತದೆ.
ವಚನಗಳ ಪರಿಷ್ಕರಣೆ ಮತ್ತು ಪುರಾಣಗಳ ಮೇಲಿನ ಕಡಿಮೆ ಅವಲಂಬನೆ ಈ ಕಾಲದ ಅವಶ್ಯಕತೆಯಾಗಿದೆ.
ಬರಹ: ರಂಜಾನ್ ದರ್ಗಾ


