- ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನಾರ್ಜನೆ ವಿಸ್ತರಣೆಗೆ ಹೊಸ ಆಯಾಮ: ಈಶ್ವರ ಖಂಡ್ರೆ
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 5888 ಅರಿವು ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ 6342 ಗ್ರಾಮ ಗ್ರಂಥಾಲಯಗಳ ಕಾರ್ಯಾರಂಭಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಇಂದು ವಿಧ್ಯುಕ್ತ ಚಾಲನೆ ನೀಡಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಗ್ರಾಮ ಗ್ರಂಥಾಲಯ ಉದ್ಘಾಟಿಸಿದ ಅವರು, 5,888 ಅರಿವು ಕೇಂದ್ರಗಳು ಸಮುದಾಯ ಗ್ರಂಥಾಲಯ ಮತ್ತು ಡಿಜಿಟಲ್ ಕಲಿಕಾ ಕೇಂದ್ರಗಳಾಗಿ ವಾರದ 6 ದಿನಗಳ ಕಾಲ ಕನಿಷ್ಠ 8 ಗಂಟೆಗಳಕಾಲ ಕಾರ್ಯ ನಿರ್ವಹಹಿಸುತ್ತಿವೆ. ಆದರೆ ಈ ಶಾಖಾ ಗ್ರಂಥಾಲಯಗಳು ವಾರಾಂತ್ಯದಲ್ಲಿ 2 ದಿನಗಳ ಕಾಲ ಬೆಳಗ್ಗೆ 10ರಿಂದ ಸಂಜೆ 4ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
ಜನಸಂಖ್ಯೆಯ ಆಧಾರದಲ್ಲಿ ಒಂದು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ನಾಲ್ಕೈದು ಗ್ರಾಮಗಳು ಬರುತ್ತವೆ. ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಅರಿವು ಕೇಂದ್ರ ಇರುತ್ತದೆ. ಆದರೆ, ಉಳಿದ ಗ್ರಾಮಗಳಲ್ಲಿ ಗ್ರಂಥಾಲಯಗಳಿರುವುದಿಲ್ಲ. ಹೀಗಾಗಿ 4 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಗ್ರಂಥಾಲಯ (branch library) ಆರಂಭಿಸಲಾಗುತ್ತಿದೆ ಎಂದರು.
ಗ್ರಾಮೀಣ ಮಕ್ಕಳ ಕಲಿಕೆಗೆ ಹೊಸ ಆಯಾಮ- ಖಂಡ್ರೆ
ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾವ ದೇಶದಲ್ಲಿ ಹೆಚ್ಚಿನ ಗ್ರಂಥಾಲಯಗಳಿರುತ್ತವೋ ಅಲ್ಲಿ ಜ್ಞಾನದ ಹೊಳೆ ಹರಿಯುತ್ತಿರುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಹೀಗಾಗಿ ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನಾರ್ಜನೆ ವಿಸ್ತರಣೆಗೆ ಹೊಸ ಆಯಾಮ ನೀಡಲು ಈ ಗ್ರಾಮ ಗ್ರಂಥಾಲಯಗಳು ಸಹಕಾರಿ ಎಂದರು.
ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ ಪುಸ್ತಕ ನಮ್ಮನ್ನು ತಲೆ ಎತ್ತಿ ಬದುಕುವಂತೆ ಮಾಡುತ್ತವೆ. ಇಂದು ಮಕ್ಕಳು, ಯುವಜನರು ಮೊಬೈಲ್ ರೀಲ್ಸ್, ವಿಡಿಯೋ ಗೇಮ್ಸ್ ಗಳಲ್ಲಿ ಕಳೆದು ಹೋಗುತ್ತಿದ್ದು, ಓದಿನ ಆಸಕ್ತಿ ಬೆಳೆಸಲು ಗ್ರಾಮ ಗ್ರಂಥಾಲಯಗಳು ಉತ್ತೇಚನ ನೀಡುತ್ತವೆ ಎಂದರು.
ಅರಿವು ಕೇಂದ್ರಗಳಲ್ಲಿ ಡಿಜಿಟಲ್ ಗ್ರಂಥಾಲಯ:
ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ‘ಅರಿವು ಕೇಂದ್ರ’ಗಳಾಗಿ ಮೇಲ್ದರ್ಜೆಗೇರಿಸುವ ಮೂಲಕ ಡಿಜಿಟಲ್ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗಿದೆ. ಜೊತೆಗೆ ವಿಕಲಚೇತನಸ್ನೇಹಿ ಕಲಿಕಾ ಸಾಧನಗಳನ್ನೂ ನೀಡಲಾಗಿದೆ. ದೃಷ್ಟಿ ಮತ್ತು ಶ್ರವಣ ಚೇತನ ಮಕ್ಕಳ ಕಲಿಕೆಗಾಗಿ 899 ಬೀಕನ್ ಲೈಬ್ರರಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಉಚಿತ ಸದಸ್ಯತ್ವ- 51 ಲಕ್ಷ ಮಕ್ಕಳ ನೋಂದಣಿ:
ಅರಿವು ಕೇಂದ್ರಗಳಲ್ಲಿ 6ರಿಂದ 18 ವರ್ಷದೊಳಗಿನ ಮಕ್ಕಳಿಗೆ ಉಚಿತ ಗ್ರಂಥಾಲಯ ಸದಸ್ಯತ್ವ ಒದಗಿಸಲಾಗಿದ್ದು, ಗ್ರಂಥಾಲಯದಿಂದ ಪುಸ್ತಕಗಳನ್ನು ಮನೆಗೆ ತಗೆದುಕೊಂಡು ಹೋಗಿ ಓದುವ ಅವಕಾಶ ಕಲ್ಪಿಸಲಾಗಿದೆ. ಈ ಉಪಕ್ರಮದ ಪರಿಣಾಮವಾಗಿ ರಾಜ್ಯದ ಗ್ರಾಮೀಣ ಗ್ರಂಥಾಲಯಗಳಲ್ಲಿ 51 ಲಕ್ಷಕ್ಕೂ ಹೆಚ್ಚು ಮಕ್ಕಳು ಸದಸ್ಯರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದರು.
ಅರಿವು ಕೇಂದ್ರದ ಗ್ರಂಥಪಾಲಕರಿಗೆ 19200ರೂ. ಸಂಭಾವನೆ ಖಾತ್ರಿ:
ಅರಿವು ಕೇಂದ್ರಗಳಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುವವರಿಗೆ 19201 ರೂ. ಮಾಸಿಕ ಸಂಭಾವನೆಯನ್ನು ಖಾತ್ರಿಪಡಿಸಲಾಗಿದೆ ಎಂದೂ ಅವರು ತಿಳಿಸಿದರು. ರಾಜ್ಯದ ಎಲ್ಲ 6342 ಗ್ರಾಮ ಗ್ರಂಥಾಲಯಗಳು ವಿಧ್ಯುಕ್ತವಾಗಿ ಉದ್ಘಾಟನೆ ಆಗಿವೆ ಎಂದು ಈಶ್ವರ ಖಂಡ್ರೆ ಅಧಿಕೃತವಾಗಿ ಘೋಷಿಸಿದರು.


