Homeದೇಶರಾಮ ಮಂದಿರದ ದೇಣಿಗೆ ಕದ್ದ ಹಣ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ!

ರಾಮ ಮಂದಿರದ ದೇಣಿಗೆ ಕದ್ದ ಹಣ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ!

ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಪ್ರಕರಣದ ತನಿಖೆಯ ವ್ಯಾಪ್ತಿ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ. ಕಳವಾದ ಹಣದ ಒಂದು ಭಾಗವನ್ನು ಆರೋಪಿಗಳು ಷೇರು ಮಾರುಕಟ್ಟೆ ಹಾಗೂ ಇತರ ಹಣಕಾಸು ಹೂಡಿಕೆ ಸಾಧನಗಳಲ್ಲಿ ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ.

ಹಣದ ಮೂಲವನ್ನು ಮರೆಮಾಚುವುದಷ್ಟೇ ಅಲ್ಲದೆ, ಅದರಿಂದ ಲಾಭ ಗಳಿಸುವ ಉದ್ದೇಶವೂ ಆರೋಪಿಗಳದ್ದಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಅಯೋಧ್ಯೆ ಪೊಲೀಸರು ಆರೋಪಿಗಳ ಮನೆಗಳಲ್ಲಿ ಮತ್ತೊಮ್ಮೆ ಶೋಧ ನಡೆಸಿದ್ದು, ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದಾಗಿ ತಿಳಿದುಬಂದಿದೆ. ತನಿಖೆಯ ಮಾಹಿತಿ ಬಲ್ಲ ಮೂಲಗಳ ಪ್ರಕಾರ, ನಿನ್ನೆ ಪೊಲೀಸರು ಆರೋಪಿ ಅನುಕಲ್ಪ್ ಮಿಶ್ರಾ ಅವರನ್ನು ಅವರ ಮನೆಗೆ ಕರೆದೊಯ್ದು ಶೋಧ ನಡೆಸಿ, ಕುಟುಂಬ ಸದಸ್ಯರನ್ನು ಸಹ ವಿಚಾರಣೆಗೊಳಪಡಿಸಿದರು.

ವಿಚಾರಣೆ ವೇಳೆ, ತಾನು ಹಾಗೂ ಸಹ ಆರೋಪಿ ಅವಿನಾಶ್ ಶುಕ್ಲಾ ಕಳವಾದ ದೇಣಿಗೆ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾಗಿ ಅನುಕಲ್ಪ್ ಮಿಶ್ರಾ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಅವರು ಬಡ್ಡಿಗೆ ಹಣ ನೀಡುವುದರ ಜೊತೆಗೆ, ಸಂಬಂಧಿಕರು ಹಾಗೂ ಆಪ್ತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿ, ಬಳಿಕ ಅದನ್ನು ತಮ್ಮ ಖಾತೆಗಳಿಗೆ ಮರಳಿ ವರ್ಗಾಯಿಸುತ್ತಿದ್ದರು ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಬುಧವಾರ ಪೊಲೀಸರು ಲವ್‌ಕುಶ್ ಮಿಶ್ರಾ ಹಾಗೂ ಕರುಣೇಶ್ ಪಾಂಡೆ ಅವರನ್ನು ಸಹ ಅವರ ಮನೆಗಳಿಗೆ ಕರೆದೊಯ್ದು ಶೋಧ ನಡೆಸಿದ್ದರು. ಮೂವರು ಆರೋಪಿಗಳನ್ನೂ 40 ಗಂಟೆಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಈ ಶೋಧ ಕಾರ್ಯವನ್ನು ವಿಧಿ ವಿಜ್ಞಾನ ತಜ್ಞರು ಹಾಗೂ ಸ್ವತಂತ್ರ ಸಾಕ್ಷಿದಾರರ ಸಮ್ಮುಖದಲ್ಲಿ ನಡೆಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಧಿಕಾರಿಗಳು ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಹಣದ ಜಾಡು ಪತ್ತೆಹಚ್ಚಲು ನೆರವಾಗುವ ಎಲೆಕ್ಟ್ರಾನಿಕ್ ಸಾಧನಗಳು, ಹೂಡಿಕೆ ದಾಖಲೆಗಳು ಹಾಗೂ ಇತರ ಹಣಕಾಸು ಸಂಬಂಧಿತ ಸಾಕ್ಷ್ಯಗಳನ್ನು ಶೋಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments