ಕರ್ನಾಟಕವನ್ನು ಅರಬ್ ರಾಷ್ಟ್ರಗಳ ಪ್ರವಾಸಿಗರಿಗೆ ಪ್ರಮುಖ ವೈದ್ಯಕೀಯ ಮತ್ತು ವೆಲ್‌ನೆಸ್ ಪ್ರವಾಸೋದ್ಯಮ ತಾಣವಾಗಿ ರೂಪಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ‘ಇಂಡೋ-ಅರಬ್ ಕನೆಕ್ಟ್’ ಯೋಜನೆ ರೂಪಿಸಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ರಾಜ್ಯದ ಖ್ಯಾತ ಆಸ್ಪತ್ರೆಗಳು, ಪರಿಣತ ವೈದ್ಯರು, ಉನ್ನತ ಚಿಕಿತ್ಸಾ ಸೌಲಭ್ಯಗಳು, ವೆಲ್‌ನೆಸ್ ಸೇವೆಗಳು ಹಾಗೂ ಆತಿಥ್ಯ ವಲಯವನ್ನು ಒಟ್ಟುಗೂಡಿಸಿ ಅರಬ್ ಮಾರುಕಟ್ಟೆಗೆ ಸಮಗ್ರ ವೈದ್ಯಕೀಯ ಪ್ರವಾಸಿ ಅನುಭವವನ್ನು ಪರಿಚಯಿಸುವುದು ಯೋಜನೆಯ ಉದ್ದೇಶವಾಗಿದೆ.
ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಯು.ಟಿ. ಖಾದರ್ ಅವರೊಂದಿಗೆ ಸಹ ಸಮಾಲೋಚನೆ ನಡೆಸಿ, ಆರೋಗ್ಯ, ವೈದ್ಯಕೀಯ, ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯಗಳನ್ನು ಒಂದೇ ವೇದಿಕೆಯಲ್ಲಿ ಜೋಡಿಸುವ ಕುರಿತು ಮುಂದಿನ ರೂಪುರೇಷೆ ಸಿದ್ಧಪಡಿಸಲಾಗುವುದು.
ಪೂರ್ವಸಿದ್ಧತೆಯ ಭಾಗವಾಗಿ ಜನವರಿಯಲ್ಲಿ ಬೆಂಗಳೂರಿನಲ್ಲಿ ವೈದ್ಯರು, ಆಸ್ಪತ್ರೆಗಳು ಮತ್ತು ಆರೋಗ್ಯ ಕ್ಷೇತ್ರದ ಪ್ರಮುಖ ಸಂಸ್ಥೆಗಳ ಸಮ್ಮೇಳನ ಆಯೋಜಿಸುವ ಪ್ರಸ್ತಾವನೆ ಇದೆ. ಅರಬ್ ಪ್ರವಾಸಿಗರ ಅಗತ್ಯಗಳು, ವಿಶೇಷ ಚಿಕಿತ್ಸಾ ಸೇವೆಗಳು, ರೋಗಿಗಳ ಅನುಕೂಲ, ವಸತಿ, ಸಾರಿಗೆ, ಭಾಷಾ ನೆರವು ಮತ್ತು ಚಿಕಿತ್ಸೆಯ ನಂತರದ ಆರೈಕೆ ಕುರಿತು ಸಮಗ್ರ ಕಾರ್ಯತಂತ್ರ ರೂಪಿಸಲು ಈ ಸಮ್ಮೇಳನ ನೆರವಾಗಲಿದೆ.
“ಕರ್ನಾಟಕ ರಾಜ್ಯದಲ್ಲಿ ಉತ್ತಮ ವೈದ್ಯಕೀಯ ಮೂಲಸೌಕರ್ಯ, ಪರಿಣತ ವೈದ್ಯರು ಮತ್ತು ವಿಶ್ವದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವಂತಹ ಆಸ್ಪತ್ರೆಗಳಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಆರೋಗ್ಯ ಸೇವೆ ಮತ್ತು ಪ್ರವಾಸೋದ್ಯಮವನ್ನು ಜೋಡಿಸಿ, ಅರಬ್ ರಾಷ್ಟ್ರಗಳೊಂದಿಗೆ ಸಂಪರ್ಕ ಬೆಳೆಸುವ ಮೂಲಕ ಕರ್ನಾಟಕವನ್ನು ವಿಶ್ವಾಸಾರ್ಹ ವೈದ್ಯಕೀಯ ಮತ್ತು ವೆಲ್‌ನೆಸ್ ಪ್ರವಾಸಿ ತಾಣವಾಗಿ ರೂಪಿಸುವುದು ನಮ್ಮ ಗುರಿಯಾಗಿದೆ,” ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಭಾರತಕ್ಕೆ ಚಿಕಿತ್ಸೆಗಾಗಿ ಬರುವ ಅರಬ್ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರತಿವರ್ಷ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಅರಬ್ ಪ್ರವಾಸಿಗರು ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಆಗಮಿಸುತ್ತಿದ್ದು, ಈ ಮಾರುಕಟ್ಟೆಯಲ್ಲಿ ಕರ್ನಾಟಕದ ಪಾಲನ್ನು ಹೆಚ್ಚಿಸುವುದು ಯೋಜನೆಯ ಪ್ರಮುಖ ಗುರಿಯಾಗಿದೆ.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ವೈದ್ಯಕೀಯ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ, ಆರೋಗ್ಯ ಕ್ಷೇತ್ರ, ಆಸ್ಪತ್ರೆಗಳು ಮತ್ತು ಸಂಬಂಧಿತ ಸೇವಾ ವಲಯಗಳ ನಡುವೆ ಪರಿಣಾಮಕಾರಿ ಸಮನ್ವಯ ಅಗತ್ಯವಾಗಿದೆ. ವೈದ್ಯರು, ಆಸ್ಪತ್ರೆಗಳು, ಹೋಟೆಲ್‌ಗಳು, ಟ್ರಾವೆಲ್ ಸಂಸ್ಥೆಗಳು ಮತ್ತು ವೆಲ್‌ನೆಸ್ ಕೇಂದ್ರಗಳನ್ನು ಒಂದೇ ವೇದಿಕೆಯಲ್ಲಿ ಜೋಡಿಸುವ ವ್ಯವಸ್ಥೆ ರೂಪಿಸಲಾಗುವುದು. ಜನವರಿಯಲ್ಲಿ ನಡೆಯಲಿರುವ ಸಮ್ಮೇಳನ ಈ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾಗಲಿದೆ,” ಎಂದರು.
ರೋಗಿಗಳು ಮತ್ತು ಅವರೊಂದಿಗೆ ಆಗಮಿಸುವ ಕುಟುಂಬ ಸದಸ್ಯರಿಗೆ ಚಿಕಿತ್ಸೆ ಜೊತೆಗೆ ವಸತಿ, ಸಾರಿಗೆ, ಭಾಷಾ ಸಹಾಯ, ವೆಲ್‌ನೆಸ್ ಮತ್ತು ಆಯ್ದ ಪ್ರವಾಸಿ ಅನುಭವಗಳನ್ನು ಒದಗಿಸುವ ಮೂಲಕ ಕರ್ನಾಟಕದಲ್ಲಿ ಸಮಗ್ರ ವೈದ್ಯಕೀಯ ಪ್ರವಾಸೋದ್ಯಮ ಪರಿಸರ ನಿರ್ಮಿಸಲು ಇಲಾಖೆ ಉದ್ದೇಶಿಸಿದೆ.


