ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡಲೇ ಒಳ ಮೀಸಲಾತಿ ಜಾರಿಗೆ ತರಬೇಕು. ಸಮಾಜದಲ್ಲಿ ಸಮಾನತೆ ಹಾಗೂ ಒಳಮೀಸಲಾತಿ ಜಾರಿಗೆ ಬರುವವರೆಗೂ ನಿರಂತರ ಹೋರಾಟ ಮುಂದುವರಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ ಸೇವಾ ಸಂಕಲ್ಪ ಅಭಿಯಾನ ಆಯೋಜನಾ ಸಮಿತಿ ಹಾಗೂ ಚಿತ್ರದುರ್ಗ ಜಿಲ್ಲೆ ವತಿಯಿಂದ ಏರ್ಪಡಿಸಿದ್ದ ಮಾದಿಗ ಕಾರ್ಯಕರ್ತರ ಜಿಲ್ಲಾ ಸಮಾವೇಶ-2026 ಮತ್ತು ಮಾದಿಗ ಮುನ್ನಡೆ-II ಒಳಮೀಸಲಾತಿ ಕಗ್ಗಂಟು ಬಿಡಿಸಿದ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಬಡತನ ಮತ್ತು ಬರದ ಬೇಗೆಯಲ್ಲಿ ಜನತೆ ಸಿಲುಕಿಕೊಂಡಿದ್ದರೆ, ಕೆಲವೇ ವ್ಯಕ್ತಿಗಳು ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿ ಶ್ರೀಮಂತ ಜೀವನ ನಡೆಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸರಿಯಲ್ಲ ಎಂದು ಅವರು ಟೀಕಿಸಿದರು. ರಾಜ್ಯದ ಸಂಪತ್ತು ಕೆಲವೇ ಕುಟುಂಬಗಳ ಖಜಾನೆಗೆ ಸೇರುತ್ತಿರುವುದು ಸಮರ್ಪಕವಲ್ಲ ಎಂದು ಹೇಳಿದರು.
ಸಮಾಜದ ವಂಚಿತ ಸಮುದಾಯಗಳು ಕಳೆದ 35 ವರ್ಷಗಳಿಂದ ಒಳ ಮೀಸಲಾತಿಗಾಗಿ ನಿರಂತರ ಬೇಡಿಕೆ ಇಡುತ್ತಿವೆ. ಜನಸಂಖ್ಯೆಯ ಅನುಪಾತದಲ್ಲಿ ಪ್ರತಿಯೊಬ್ಬರಿಗೂ ಹಕ್ಕು ನೀಡಬೇಕು ಮತ್ತು ಸಾಂವಿಧಾನಿಕ ನ್ಯಾಯ ದೊರಕಿಸಬೇಕು ಎಂದು ಅವರು ಒತ್ತಾಯಿಸಿದರು. “ಈ ದೇಶದ ಮಾಲಿಕರು ನೀವು. ಈ ದೇಶದ ಸಂಪತ್ತು, ಭವಿಷ್ಯದ ಮೇಲೆ ನಿಮಗೆ ಎಲ್ಲರಂತೆ ಸಂಪೂರ್ಣ ಹಕ್ಕಿದೆ. ನೀವು ಶೋಷಿತರಲ್ಲ, ಸ್ವಾಭಿಮಾನಿಗಳು. ಒಂದು ರೊಟ್ಟಿಯಲ್ಲಿ ನಾಲ್ಕು ಪಾಲು ಇದ್ದರೆ ನಮಗೂ ಪಾಲಿದೆ. ನಮ್ಮ ಪಾಲು ಇಟ್ಟುಕೊಂಡು ಕೊಡದೆ ನೀವೇ ತಿಂದುಕೊಂಡು ಬಂದಿದ್ದೀರಿ. ಜಾಗ ಖಾಲಿ ಮಾಡಿ, ನಮ್ಮ ಪಾಲಿನ ರೊಟ್ಟಿಯನ್ನು ನಾವೇ ಇಟ್ಟುಕೊಳ್ಳುತ್ತೇವೆ” ಎಂದು ಅವರು ಹೇಳಿದರು.
ಒಳ ಮೀಸಲಾತಿ ಜಾರಿಯಲ್ಲಿ ತಾವು ಕೇವಲ ನಿಮಿತ್ತ ಮಾತ್ರ ಎಂದು ಹೇಳಿದ ಬೊಮ್ಮಾಯಿ, ಮಾದಿಗ ಸಮುದಾಯದ ತಾಯಂದಿರ ಕಷ್ಟ, ಕಣ್ಣೀರು ಮತ್ತು ತ್ಯಾಗವನ್ನು ನೆನಪಿಸಿ, ವಿದ್ಯಾವಂತರಾಗಿ ಉತ್ತಮ ಕೆಲಸ ಪಡೆಯುವ ಮೂಲಕ ಆ ತಾಯಿಯರಿಗೆ ಫಲ ಸಿಗಬೇಕು ಎಂದರು. ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ನಾರಾಯಣಸ್ವಾಮಿ ಅವರ ಪಾತ್ರವನ್ನು ಪ್ರಶಂಸಿಸಿದರು. ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರವಿದೆ ಎಂದು ಆದೇಶ ನೀಡಿದೆ ಎಂದು ನೆನಪಿಸಿದರು.
ತಮ್ಮ ಆಡಳಿತದಲ್ಲಿ ಎಲ್ಲಾ 101 ಜಾತಿಗಳಿಗೆ ಸಮಾನವಾಗಿ ಒಳ ಮೀಸಲಾತಿ ನೀಡಲಾಗಿತ್ತು ಮತ್ತು ಯಾವುದೇ ಸಮುದಾಯಕ್ಕೆ ಅನ್ಯಾಯವಾಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಬಂಜಾರಾ ಮತ್ತು ಬೋವಿ ಸಮುದಾಯಗಳನ್ನು ಎಸ್.ಸಿ. ಪಟ್ಟಿಯಿಂದ ಹೊರಗಿಡಬೇಕು ಎಂಬ ಪಿಟಿಷನ್‌ಗೆ ವಿರೋಧ ವ್ಯಕ್ತಪಡಿಸಿ, ಅವುಗಳನ್ನು ಎಸ್.ಸಿ. ಪಟ್ಟಿಯಲ್ಲಿ ಉಳಿಸಬೇಕು ಎಂದು ಬರೆದುಕೊಟ್ಟಿದ್ದೇವೆ ಎಂದು ಹೇಳಿದರು. ರಿಸರ್ವೇಷನ್ ಬೇಡ ಎನ್ನುವವರಿಗೆ “ನಿಮ್ಮ ಆಸ್ತಿ ಬಿಟ್ಟು ದಲಿತ ಕೇರಿಗೆ ಬಂದು ಜೀವನ ಮಾಡಿ, ನಂತರ ಹೇಳಿ” ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬದುಕಿನ ರಾಜಕಾರಣ ಮಾಡುತ್ತೇವೆ ಎಂದು ಹೇಳುತ್ತಾರೆ. ನಿಜವಾಗಿಯೂ ಸಾರ್ಥಕತೆ ತೋರಿಸಬೇಕಾದರೆ ಒಳ ಮೀಸಲಾತಿ ಆದೇಶವನ್ನು ಕೂಡಲೇ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು. “ಭಾವನೆ ಜೊತೆಗೆ ರಾಜಕಾರಣ ಮಾಡುತ್ತಾ ಹೆಸರು ಮಾತ್ರ ಬದುಕಿನ ಬಗ್ಗೆ ಹೇಳುತ್ತಿದ್ದೀರಿ. ರಾಜ್ಯದಲ್ಲಿ ಹೃದಯ ಶ್ರೀಮಂತಿಕೆಯ ರಾಜಕಾರಣ ಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸೇವೆ ಮುಂದುವರಿಯಬೇಕು. ರಾಜ್ಯದಲ್ಲಿಯೂ ಅವರ ನೇತೃತ್ವದಲ್ಲಿ ಸರ್ಕಾರ ಬರುತ್ತದೆ” ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಸಂಪೂರ್ಣ ಪ್ರಮಾಣದಲ್ಲಿ ಒಳ ಮೀಸಲಾತಿ ಜಾರಿಯಾಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ ಬೊಮ್ಮಾಯಿ, ಕೇವಲ ರಾಜಕೀಯ ಭಾಷಣಗಳಲ್ಲದೆ ಬದುಕಿನ ರಾಜಕಾರಣದ ಮೂಲಕ ಜನರ ಭಾವನೆಗಳಿಗೆ ಸ್ಪಂದಿಸಿ ಕೂಡಲೇ ಆದೇಶ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮಾದರ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷ ಡಾ. ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವರು ಎ. ನಾರಾಯಣಸ್ವಾಮಿ, ಜಿ.ಎಂ. ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.


