ಕುಮಾರಕೃಪ ಸರ್ಕಾರಿ ಅತಿಥಿಗೃಹವನ್ನು ‘ಗಂಗಾ’ ಎಂದು ಮರುನಾಮಕರಣ ಮಾಡಿ ಅಧಿಕೃತ ನಿವಾಸವಾಗಿ ಪರಿವರ್ತಿಸಲಾಗಿದೆ. ಕಟ್ಟಡದ ಮೂಲ ಪರಂಪರೆಯನ್ನು ಉಳಿಸಿಕೊಂಡು ಶೇ.10ರಷ್ಟು ಮಾತ್ರ ಮರುವಿನ್ಯಾಸ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಸೋಮವಾರ ನೂತನ ಅಧಿಕೃತ ನಿವಾಸ ‘ಗಂಗಾ’ದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಗೆ ಈ ಹಿಂದೆ ನೀಡಲಾಗಿದ್ದ ಸರ್ಕಾರಿ ನಿವಾಸ ಚಿಕ್ಕದಾಗಿತ್ತು. ಕುಮಾರಕೃಪ ಅತಿಥಿಗೃಹ ಬಳಕೆಯಾಗದೆ ಉಳಿದಿದ್ದರಿಂದ ಅದನ್ನು ಅಧಿಕೃತ ನಿವಾಸವಾಗಿ ಪರಿವರ್ತಿಸುವ ನಿರ್ಧಾರ ಕೈಗೊಂಡಿದ್ದೇನೆ. ಇಂದು ಇಲ್ಲಿ ಖಾಸಗಿ ಪೂಜೆ ನೆರವೇರಿಸಿದ್ದೇನೆ. ಗುರುವಾರ ರಾಜ್ಯದ 224 ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರನ್ನು ಆಹ್ವಾನಿಸಿದ್ದು, ಅವರೊಂದಿಗೆ ಈ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಲಿದ್ದೇನೆ ಎಂದರು.
ಭದ್ರತೆ, ರಸ್ತೆ ಸೌಕರ್ಯಕ್ಕೆ ಹೆಚ್ಚಿನ ವೆಚ್ಚ
ನಿವಾಸದ ನವೀಕರಣಕ್ಕೆ ಮಾಡಿರುವ ವೆಚ್ಚದ ಕುರಿತು ಕೇಳಿಬರುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಭದ್ರತೆ ಹಾಗೂ ರಸ್ತೆ ಸೌಕರ್ಯ ಕಲ್ಪಿಸಲು ಹೆಚ್ಚಿನ ವೆಚ್ಚವಾಗಿದೆ. ಉಳಿದಂತೆ ಶೇ.90ರಷ್ಟು ಪೀಠೋಪಕರಣಗಳು ನನ್ನ ಖಾಸಗಿ ಬಳಕೆಯದ್ದಾಗಿವೆ. ಕಡಿಮೆ ಬೆಲೆಯ ಅಂದರೆ ₹60ರಿಂದ ₹80 ಮೌಲ್ಯದ ಗ್ರಾನೈಟ್ ಬಳಸಲಾಗಿದೆ. ವೆಚ್ಚದ ಬಗ್ಗೆ ಟೀಕೆಗಳು ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ನನ್ನ ಮನೆಯಲ್ಲಿದ್ದ ಹಾಗೂ ಕುಮಾರಕೃಪದಲ್ಲಿದ್ದ ಹಳೆಯ ಪೀಠೋಪಕರಣಗಳನ್ನೇ ಬಳಸಿಕೊಂಡಿದ್ದೇನೆ. ಈ ಕುರಿತು ಕೆಲವರು ಆರ್ಟಿಐ ಅರ್ಜಿಯನ್ನೂ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಪಾರಂಪರಿಕ ಕಟ್ಟಡದ ಸ್ವರೂಪ ಬದಲಿಸಲಾಗಿದೆ ಎಂಬ ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದವರು ಟೀಕೆ ಮಾಡುವುದು ಅವರ ಕರ್ತವ್ಯ. ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇನೆ. ಬಂದು ಪರಿಶೀಲಿಸಲಿ ಎಂದರು.
ಸಾರ್ವಜನಿಕರ ಭೇಟಿಗೆ ಪ್ರತ್ಯೇಕ ವ್ಯವಸ್ಥೆ
ಗಂಗಾ ನಿವಾಸದಲ್ಲಿ ಶಾಸಕರು ಹಾಗೂ ಅಧಿಕಾರಿಗಳ ಭೇಟಿಗೆ ಮತ್ತು ಸಭೆ, ಚರ್ಚೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರ ಭೇಟಿಗಾಗಿ ಪಕ್ಕದಲ್ಲಿರುವ ಕೃಷ್ಣಾ ನಿವಾಸದಲ್ಲಿ ಪ್ರತ್ಯೇಕ ಹಾಲ್ ನಿರ್ಮಿಸಲಾಗುತ್ತಿದೆ. ಇದಕ್ಕೆ ಇನ್ನೂ ಒಂದೆರಡು ತಿಂಗಳು ಕಾಲಾವಕಾಶ ಬೇಕಾಗಬಹುದು ಎಂದು ಹೇಳಿದರು.
ಯಾರೂ ಇಲ್ಲಿ ಶಾಶ್ವತವಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವವರಿಗೆ ಅನುಕೂಲವಾಗಬೇಕು. ಬಳಕೆಯಾಗದೆ ವ್ಯರ್ಥವಾಗುತ್ತಿದ್ದ ಅತಿಥಿಗೃಹವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ತಮ್ಮ ದೆಹಲಿ ಭೇಟಿಯ ಕುರಿತು ಮಾತನಾಡಿದ ಅವರು, ಇಂದು ರಾತ್ರಿ ದೆಹಲಿಗೆ ತೆರಳಿ, ನಾಯಕರೊಬ್ಬರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸಾಗಲಿದ್ದೇನೆ. ಇಂದು ರಾತ್ರಿ ಬೆಂಗಳೂರಿನಲ್ಲೇ ಉಳಿಯುತ್ತೇನೆ ಎಂದರು.


