ಅಪರಾಧ ಮಾಡಿದವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ಆದರೆ ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಆತನ ಕುಟುಂಬದ ಸದಸ್ಯರು ಏಕೆ ಶಿಕ್ಷೆ ಅನುಭವಿಸಬೇಕು? ಜೈಲಿನಲ್ಲಿರುವ ವ್ಯಕ್ತಿಯ ತಪ್ಪಿಗೆ ಹೊರಗಿರುವ ವೃದ್ಧ ತಂದೆ-ತಾಯಿಯರು, ಹೆಂಡತಿ, ಮಕ್ಕಳು ಹಾಗೂ ಸಹೋದರ-ಸಹೋದರಿಯರು ಅನುಭವಿಸುತ್ತಿರುವ ನೋವಿಗೆ ಯಾರು ಹೊಣೆ? ಇಂತಹ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕೈದಿಗಳ ಕುಟುಂಬಗಳ ಸಂಘವು ನ್ಯಾಯಕ್ಕಾಗಿ ಸರ್ಕಾರದ ಮೊರೆ ಹೋಗಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ‘ನ್ಯಾಯಕ್ಕಾಗಿ ಕೈದಿಗಳ ಕುಟುಂಬಗಳ ಸಂಘ’ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೈದಿಗಳ ಕುಟುಂಬದ ಸದಸ್ಯರು ತಮ್ಮ ಸಂಕಷ್ಟ, ನೋವು ಮತ್ತು ಅಳಲನ್ನು ಹಂಚಿಕೊಂಡರು.
ಒಬ್ಬ ವ್ಯಕ್ತಿ ಅಪರಾಧ ಪ್ರಕರಣದಲ್ಲಿ ಸಿಲುಕಿದ ತಕ್ಷಣ ಆತನ ಕುಟುಂಬವನ್ನೂ ಸಮಾಜ ಅನುಮಾನದ ದೃಷ್ಟಿಯಿಂದ ನೋಡುತ್ತಿದೆ. ಮನೆಗೆ ಪೊಲೀಸರು ಬರುವುದು, ನೆರೆಹೊರೆಯವರ ಪ್ರಶ್ನೆಗಳು, ಸಂಬಂಧಿಕರ ನಿರ್ಲಕ್ಷ್ಯ, ಮಕ್ಕಳ ಶಾಲೆಯಲ್ಲಿ ಎದುರಾಗುವ ಮುಜುಗರ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ವಿಶೇಷವಾಗಿ ವೃದ್ಧ ತಂದೆ-ತಾಯಿಯರು, ಮಹಿಳೆಯರು ಮತ್ತು ಮಕ್ಕಳ ಬದುಕು ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದು ಕುಟುಂಬದ ಸದಸ್ಯರು ಅಳಲು ತೋಡಿಕೊಂಡರು.
ಪೊಲೀಸ್ ಕಿರುಕುಳದ ಆರೋಪ
ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ಕುಟುಂಬದ ಸದಸ್ಯರನ್ನು ಠಾಣೆಗೆ ಕರೆಸುವುದು, ಬೆದರಿಸುವುದು, ಮಾನಸಿಕ ಒತ್ತಡ ಹೇರುವುದು ಹಾಗೂ ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳನ್ನು ಕುಟುಂಬದವರು ಮಾಡಿದರು. ಅಪರಾಧ ತನಿಖೆ ನಡೆಸುವುದು ಪೊಲೀಸರ ಕರ್ತವ್ಯವಾದರೂ, ಅದರ ಹೆಸರಿನಲ್ಲಿ ನಿರಪರಾಧ ಕುಟುಂಬದ ಸದಸ್ಯರ ಹಕ್ಕುಗಳಿಗೆ ಧಕ್ಕೆ ಉಂಟಾಗಬಾರದು. ತನಿಖೆ ಕಾನೂನಿನ ಚೌಕಟ್ಟಿನಲ್ಲಿ ನಡೆಯಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಕಾನೂನು ನೆರವು ಒದಗಿಸುವ ಹೆಸರಿನಲ್ಲಿ ಕೆಲವು ವಕೀಲರಿಂದಲೂ ಕುಟುಂಬಗಳು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ ಎಂಬ ಆರೋಪಗಳನ್ನು ಮಾಡಿದರು. ಈಗಾಗಲೇ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡಿರುವ ಕುಟುಂಬಗಳು ಪ್ರಕರಣದ ವೆಚ್ಚ ಭರಿಸಲಾಗದೆ ಸಾಲದ ಸುಳಿಗೆ ಸಿಲುಕುತ್ತಿವೆ ಎಂದು ತಿಳಿಸಿದರು.

ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಆತಂಕ
ಸಾಮಾಜಿಕ ಅವಮಾನ, ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಒತ್ತಡದಿಂದಾಗಿ ಕೆಲವು ಕುಟುಂಬದ ಸದಸ್ಯರು ಆತ್ಮಹತ್ಯೆಯಂತಹ ದುರಂತ ನಿರ್ಧಾರಗಳಿಗೆ ಮುಂದಾಗಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಸಿದ್ದಮ್ಮ ಎಂಬುವರು ತಮ್ಮ ಮೊಮ್ಮಗ ಮಹಾದೇವ ಎರಡು ವರ್ಷ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದರು. ರವಿ ಎಂಬುವರು ತಮ್ಮ ಅಳಿಯ ಅಪ್ಪು ಆತ್ಮಹತ್ಯೆಗೂ ಮುನ್ನ ಪೊಲೀಸರ ಕಿರುಕುಳ, ಅವಮಾನ ಮತ್ತು ಸಮಾಜದ ತಿರಸ್ಕಾರ ಎದುರಿಸಿದ್ದ ಎಂದು ಕುಟುಂಬದ ಪರವಾಗಿ ಆರೋಪಿಸಿದರು. ಈ ಘಟನೆಗಳ ಹಿಂದಿನ ಪರಿಸ್ಥಿತಿಗಳ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಕುಟುಂಬಗಳ ಹಲವು ಬೇಡಿಕೆಗಳು
ಕೈದಿಗಳ ಕುಟುಂಬಗಳಿಗೆ ಸುಲಭವಾಗಿ ದೊರೆಯುವ ಉಚಿತ ಕಾನೂನು ನೆರವು, ಪ್ರಕರಣಗಳ ಕುರಿತು ಪಾರದರ್ಶಕ ಮಾಹಿತಿ, ಪೊಲೀಸ್ ಕಿರುಕುಳದಿಂದ ರಕ್ಷಣೆ, ವೈದ್ಯಕೀಯ ನೆರವು, ಅರ್ಹರಿಗೆ ವೃದ್ಧಾಪ್ಯ ವೇತನ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಸಂಘಟನೆ ಆಗ್ರಹಿಸಿತು.
ಜೈಲಿನಿಂದ ಬಿಡುಗಡೆಯಾದವರಿಗೆ ಪುನರ್ವಸತಿ ಮತ್ತು ಜೀವನೋಪಾಯಕ್ಕೆ ಅವಕಾಶ ಕಲ್ಪಿಸಬೇಕು. ಕೈದಿಗಳ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು. ಕುಟುಂಬಗಳು ಮಾಡಿರುವ ಕಿರುಕುಳದ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸರ್ಕಾರ, ಕಾನೂನು ಸೇವಾ ಪ್ರಾಧಿಕಾರಗಳು ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದರು.
ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಧ್ಯಾನ್ ಪೂಣಚ್ಛ, ರಾಘವೇಂದ್ರ ತೋಗರ್ಸಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಸೋಮಸುಂದರ ರೆಡ್ಡಿ, ನಂಜುಂಡಪ್ಪ ವಿ., ಟಿವಿ9ನ ಕಿರಣ್ ಎಚ್.ವಿ., ಅಹಿಂದ ನ್ಯೂಸ್‌ನ ಶಿವಕುಮಾರ್ ದೇಶಿ, ಹಿರಿಯ ಪತ್ರಕರ್ತರಾದ ರಮೇಶ್ ಅಭಿಮನ್ಯು ಹಾಗೂ ಚಿತ್ರಲೋಕ ಡಾಟ್ ಕಾಮ್‌ನ ವೀರೇಶ್ ಕೆ.ಎಂ. ಉಪಸ್ಥಿತರಿದ್ದರು.


