Homeಕರ್ನಾಟಕಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಗೆ ಡಿಜಿಟಲ್ ವೇದಿಕೆ ಅಗತ್ಯ: ಪ್ರಭಾ ಮಲ್ಲಿಕಾರ್ಜುನ್

ಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಗೆ ಡಿಜಿಟಲ್ ವೇದಿಕೆ ಅಗತ್ಯ: ಪ್ರಭಾ ಮಲ್ಲಿಕಾರ್ಜುನ್

ಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಯು ಕೇವಲ ಪರಿಚಯಾತ್ಮಕ ತರಬೇತಿಗೆ ಸೀಮಿತವಾಗಬಾರದು, ಪರಿಣಾಮಕಾರಿ ಶಾಸನ ರಚನೆ, ನೀತಿ ನಿರೂಪಣೆ, ಹಣಕಾಸಿನ ಮೇಲ್ವಿಚಾರಣೆ ಹಾಗೂ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಪೂರಕವಾಗಿರಬೇಕು ಎಂದು ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಹೇಳಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾಮನ್‌ವೆಲ್ತ್‌ ಮಹಿಳಾ ಸಂಸದೀಯ ಪ್ರತಿನಿಧಿಗಳ (ಸಿಡಬ್ಲ್ಯುಪಿ) ಭಾರತ ವಲಯದ ಪ್ರಥಮ ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂವಾದ, ಸಮಾನತೆ, ಸಹಭಾಗಿತ್ವ ಹಾಗೂ ಸಾಮಾಜಿಕ ಸುಧಾರಣೆಗೆ ಆದ್ಯತೆ ನೀಡಿದ ಬಸವಣ್ಣನವರ ನಾಡಿನಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಐತಿಹಾಸಿಕ ಅನುಭವ ಮಂಟಪದ ಆದರ್ಶಗಳು ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳೊಂದಿಗೆ ಆಳವಾದ ಸಂಬಂಧ ಹೊಂದಿವೆ ಎಂದರು.

ಶಾಸನ ಪ್ರಕ್ರಿಯೆ, ಜಾರಿಯಲ್ಲಿರುವ ಯೋಜನೆಗಳು, ಬಜೆಟ್‌ ಅನುದಾನ, ಇಲಾಖೆಗಳ ಮಾಹಿತಿ, ಸಮಿತಿ ವರದಿಗಳು ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾದ ಸಂಪನ್ಮೂಲಗಳ ವಿವರ ಒಂದೇ ಕಡೆ ದೊರೆಯುವಂತೆ ಜನಪ್ರತಿನಿಧಿಗಳಿಗಾಗಿ ಏಕೀಕೃತ ಡಿಜಿಟಲ್‌ ಪೋರ್ಟಲ್‌ ರೂಪಿಸಬೇಕು ಎಂದು ಸಲಹೆ ನೀಡಿದರು.

ಡಿಜಿಟಲ್‌ ಸಂಸದ್‌ ಪೋರ್ಟಲ್‌ನ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುರಿತು ತರಬೇತಿ ನೀಡಬೇಕು. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ (ಎಂಪಿಲ್ಯಾಡ್ಸ್‌) ಸಮರ್ಪಕ ಬಳಕೆಗೆ ಅಗತ್ಯ ಮಾರ್ಗದರ್ಶನವೂ ದೊರೆಯಬೇಕು ಎಂದು ಒತ್ತಿ ಹೇಳಿದರು.

ಸಂಸತ್ತಿನ ಅಧಿವೇಶನಗಳಿಗೆ ಹೊಂದಿಕೆಯಾಗುವಂತೆ ದೆಹಲಿಯಲ್ಲಿ ವಾರ್ಷಿಕವಾಗಿ ಪ್ರಾಯೋಗಿಕ ಹಾಗೂ ವ್ಯವಸ್ಥಿತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ರಾಜ್ಯಮಟ್ಟದ ಕಾರ್ಯಾಗಾರಗಳು, ಪ್ರಾದೇಶಿಕ ಭಾಷೆಗಳಲ್ಲಿನ ತರಬೇತಿ, ವೆಬಿನಾರ್‌ ಹಾಗೂ ಸುಲಭವಾಗಿ ಬಳಸಬಹುದಾದ ಆನ್‌ಲೈನ್‌ ಕಲಿಕಾ ವ್ಯವಸ್ಥೆಗಳನ್ನು ವಿಸ್ತರಿಸಬೇಕು ಎಂಬ ಪ್ರಸ್ತಾವನೆಯನ್ನು ಮುಂದಿಟ್ಟರು.

ಪಕ್ಷಭೇದ ಮೀರಿ ಮಹಿಳೆಯರ ಸಬಲೀಕರಣಕ್ಕೆ ನೆರವಾಗಿರುವ ಉತ್ತಮ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಕುರಿತು ಅನುಭವ ಹಂಚಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು. ಸಂಶೋಧನೆ ಮತ್ತು ಸಂಸದೀಯ ಸಮಿತಿಗಳ ಕಾರ್ಯನಿರ್ವಹಣೆಗೆ ತಜ್ಞರ ನೆರವು, ನೀತಿ ವಿಷಯಗಳ ಸಂಕ್ಷಿಪ್ತ ವರದಿ, ಹಣಕಾಸು ವಿಶ್ಲೇಷಣೆ ಹಾಗೂ ಯೋಜನೆಗಳ ಅನುಷ್ಠಾನ ಪರಿಶೀಲನೆಗೆ ಬೆಂಬಲ ಒದಗಿಸಬೇಕು ಎಂದರು.

ಮೈಸೂರಿನ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಯು 2023ರ ನವೆಂಬರ್‌ನಲ್ಲಿ 49 ಸಾವಿರಕ್ಕೂ ಹೆಚ್ಚು ಮಹಿಳಾ ಗ್ರಾಮ ಪಂಚಾಯಿತಿ ಸದಸ್ಯರಿಗಾಗಿ ವಸತಿಯುತ ನಾಯಕತ್ವ ತರಬೇತಿ ಆರಂಭಿಸಿತ್ತು. ಇದು ರಾಜ್ಯದ ಸುಮಾರು ಒಂದು ಲಕ್ಷ ಪಂಚಾಯಿತಿ ಸದಸ್ಯರಲ್ಲಿ ಅರ್ಧದಷ್ಟು ಮಂದಿಯನ್ನು ಒಳಗೊಳ್ಳುವ ಮಹತ್ವದ ಪ್ರಯತ್ನವಾಗಿದೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಮಹಿಳಾ ಪಂಚಾಯಿತಿ ಪ್ರತಿನಿಧಿಗಳನ್ನು ಸಿದ್ಧಗೊಳಿಸಲು ಇದೇ ಸಂಸ್ಥೆಯನ್ನು ಬಳಸಿಕೊಳ್ಳಬಹುದು ಎಂದು ಹೇಳಿದರು.

ಮಹಿಳೆಯರಿಗೆ ಶೇ 33ರಷ್ಟು ಪ್ರಾತಿನಿಧ್ಯ ಕಲ್ಪಿಸುವ ಆಶಯವು ಅರ್ಥಪೂರ್ಣ ಪಾಲ್ಗೊಳ್ಳುವಿಕೆ, ನಾಯಕತ್ವ ಹಾಗೂ ನೀತಿ ನಿರೂಪಣೆಯಲ್ಲಿ ಪ್ರಭಾವ ಬೀರುವ ಅವಕಾಶವಾಗಿ ರೂಪುಗೊಳ್ಳಬೇಕು. ಇದಕ್ಕಾಗಿ ಮಹಿಳಾ ಜನಪ್ರತಿನಿಧಿಗಳಿಗೆ ನಾಯಕತ್ವ ತರಬೇತಿ ಹಾಗೂ ಅನುಭವಿ ಪ್ರತಿನಿಧಿಗಳ ಮಾರ್ಗದರ್ಶನ ಅಗತ್ಯ ಎಂದು ತಿಳಿಸಿದರು.

ನಾವು ಎಷ್ಟು ಕಾರ್ಯಾಗಾರಗಳನ್ನು ನಡೆಸಿದ್ದೇವೆ ಎಂಬುದರಿಂದ ಸಾಮರ್ಥ್ಯ ವೃದ್ಧಿಯನ್ನು ಅಳೆಯಬಾರದು. ಜನಪ್ರತಿನಿಧಿಗಳು ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ, ಸಂಸ್ಥೆಗಳು ಎಷ್ಟು ಉತ್ತರದಾಯಿಯಾಗುತ್ತವೆ ಹಾಗೂ ನಾಗರಿಕರ ಬದುಕಿನಲ್ಲಿ ಎಷ್ಟು ಅರ್ಥಪೂರ್ಣವಾಗಿ ಸುಧಾರಣೆಯಾಗುತ್ತದೆ ಎಂಬುದೇ ಅದರ ಮಾನದಂಡವಾಗಬೇಕು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments