Homeಕರ್ನಾಟಕರಾಜ್ಯ ಬಜೆಟ್‌: ಪ್ರಮುಖ ನೀರಾವರಿ ಯೋಜನಗಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ರಾಜ್ಯ ಬಜೆಟ್‌: ಪ್ರಮುಖ ನೀರಾವರಿ ಯೋಜನಗಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಮೇಕೆದಾಟು ಯೋಜನೆಯಡಿ ಮುಳುಗಡೆಯಾಗುವ ಭೂಮಿಯನ್ನು ಗುರುತಿಸುವ ಸರ್ವೆ ಹಾಗೂ ಮರಗಳ ಎಣಿಕೆ ಪ್ರಕ್ರಿಯೆಯನ್ನು ಚಾಲನೆಗೊಳಿಸಿದ್ದು, ಉಳಿದ ಅಗತ್ಯ ತೀರುವಳಿಗಳನ್ನು ಸಕ್ಷಮ ಪ್ರಾಧಿಕಾರಗಳಿಂದ ಪಡೆದು ಶೀಘ್ರವಾಗಿ ಪ್ರಾರಂಭಿಸಲು ಆದ್ಯತೆ ಮೇರೆಗೆ ಕ್ರಮವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬಜೆಟ್‌ ಭಾಷಣದಲ್ಲಿ ಜಲಸಂಪನ್ಮೂಲ ಇಲಾಖೆ ಕುರಿತು ಮಾತನಾಡಿ, “ಕಾವೇರಿ ಕಣಿವೆಯ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕಾಗಿ ಒಂದು ಪ್ರತ್ಯೇಕ ಯೋಜನಾ ವಿಭಾಗವನ್ನು ಹಾಗೂ 2 ಉಪ ವಿಭಾಗಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ” ಎಂದರು.

“ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ದೊಡ್ಡನಗರದ ಬಳಿಯ ವಿತರಣಾ ತೊಟ್ಟಿಯವರೆಗೆ ಪೂರ್ವ ಪರೀಕ್ಷಾರ್ಥವಾಗಿ (Pre-Commissioning Test) ನೀರು ಹರಿಸಿ ಚಾಲನೆಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಯೋಜನೆಯ ಎಲ್ಲಾ ಲಿಫ್ಟ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗುರುತ್ವ ಕಾಲುವೆಗೆ ನೀರು ಹರಿಸಲಾಗುವುದರ ಜೊತೆ ಸಮತೋಲನಾ ಜಲಾಶಯದ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು” ಎಂದು ಹೇಳಿದರು.

ಉತ್ತರ ಕರ್ನಾಟಕದ ಪ್ರಮುಖ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಯೋಜನೆಯಡಿಯ ಉಪ ಯೋಜನೆಗಳನ್ನು ಪೂರ್ಣಗೊಳಿಸಲು ಹಾಗೂ ಇದರಡಿ ಭೂಸ್ವಾಧೀನ ಮತ್ತು ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಕೃಷ್ಣಾ ನ್ಯಾಯಾಧಿಕರಣ-2ರ ಅಂತಿಮ ತೀರ್ಪಿನ ಬಾಕಿಯಿರುವ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದರೊಂದಿಗೆ ಅಗತ್ಯವಿರುವ ಕಾನೂನಾತ್ಮಕ ಕ್ರಮಗಳನ್ನು ಮುಂದುವರೆಸಲಾಗುವುದು” ಎಂದು ಭರವಸೆ ನೀಡಿದರು.

“ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ತನ್ನ 2023-24ನೇ ಸಾಲಿನ ಆಯವ್ಯಯದಲ್ಲಿ 5,300 ಕೋಟಿ ರೂ. ಅನುದಾನ ಘೋಷಿಸಿಲಾಗಿತ್ತು. ಆದರೆ ಈವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ. ಅನುದಾನವನ್ನು ಬಿಡುಗಡೆ ಮಾಡಿ ಯೋಜನೆಯನ್ನು ರೈತರಿಗೆ ತಲುಪಿಸಲು ಸಹಕಾರಿಯಾಗುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು” ಎಂದರು.

“ಕಳಸಾ ಮತ್ತು ಬಂಡೂರಾ ನಾಲಾ ತಿರುವು ಯೋಜನೆಗಳಡಿ 3.9 TMC ನೀರಿನ ಬಳಕೆಗಾಗಿ ವಿವರವಾದ ಯೋಜನಾ ವರದಿಗಳಿಗೆ ಕೇಂದ್ರ ಜಲ ಆಯೋಗದ ತೀರುವಳಿ ದೊರಕಿದ್ದು, ಪ್ರಸ್ತುತ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅರಣ್ಯ ತೀರುವಳಿ ನಿರೀಕ್ಷಿಸಿ ರಾಜ್ಯ ಸರ್ಕಾರವು ಟೆಂಡರ್ ಪ್ರಕ್ರಿಯೆ ಚಾಲನೆಗೊಳಿಸಿದೆ” ಎಂದರು.

ಸಮತೋಲನಾ ಜಲಾಶಯ ನಿರ್ಮಾಣ

“ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಸಂಗ್ರಹಣೆಯಿಂದ ಉಂಟಾಗಿರುವ ನೀರು ಸಂಗ್ರಹಣೆ ಸಾಮರ್ಥ್ಯದ ಕೊರತೆ ನಿವಾರಿಸಲು ಜಲಾಶಯ ವ್ಯಾಪ್ತಿಯಲ್ಲಿನ ರೈತರ ಬಹುದಿನದ ಬೇಡಿಕೆಯಾದ ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಯೋಜನೆಯ 15,600 ಕೋಟಿ ರೂ. ಮೊತ್ತದ ವಿವರವಾದ ಯೋಜನಾ ವರದಿ ಸಿದ್ಧವಾಗಿದ್ದು, ಸದರಿ ಯೋಜನೆಯ ಅನುಷ್ಠಾನ ಸಂಬಂಧ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚನೆ ಪ್ರಕ್ರಿಯೆ ಚಾಲನೆಗೊಳಿಸಿದ್ದು, ಯೋಜನೆ ಕಾರ್ಯಗತಗೊಳಿಸಲು ಆದ್ಯತೆ ನೀಡಲಾಗುವುದು” ಎಂದು ತಿಳಿಸಿದರು.

ಪ್ರತಿಷ್ಠಿತ ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನ ಉದ್ಯಾನವನವನ್ನು ವಿಶ್ವದರ್ಜೆಯ ಪ್ರವಾಸೋದ್ಯಮ ಆಕರ್ಷಣೀಯ ಕೇಂದ್ರವನ್ನಾಗಿ ಉನ್ನತೀಕರಿಸುವ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕ್ರಮ.

“ಧಾರವಾಡದಲ್ಲಿರುವ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯನ್ನು (ವಾಲ್ಮಿ) ಪ್ರಸಕ್ತ ಸಾಲಿನಲ್ಲಿ Centre of Excellence in Water Management ಆಗಿ ಉನ್ನತೀಕರನ.

ಪಾವಗಡ ಸೋಲಾರ್ ಪಾರ್ಕ್ ಮಾದರಿಯಲ್ಲಿ ಜಲಸಂಪನ್ಮೂಲ ಇಲಾಖೆಯ ಮಾಲೀಕತ್ವವಿರುವ ಜಮೀನಿನಲ್ಲಿ ಮತ್ತು ಜಲಾಶಯಗಳ ಹಿನ್ನೀರಿನಲ್ಲಿ ಸೂಕ್ತ ಮಾದರಿಯ ಸೋಲಾರ್ ಪಾರ್ಕ್‌ಗಳನ್ನು ಸ್ಥಾಪಿಸುವ ಯೋಜನೆಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳುವ ಭರವಸೆ

ಕೃಷ್ಣಾ ಭಾಗ್ಯ ಜಲ ನಿಗಮದಡಿ ಏತ ನೀರಾವರಿ ಯೋಜನೆಗಳಾದ ಬಾಗಲಕೋಟೆ ಜಿಲ್ಲೆಯ ಕೆರೂರು, ವಿಜಯಪುರ ಜಿಲ್ಲೆಯ ಹೊರ್ತಿ-ರೇವಣಸಿದ್ದೇಶ್ವರ, ಚಿಮ್ಮಲಗಿ, ಮುಳವಾಡ, ಯಾದಗಿರಿ ಜಿಲ್ಲೆಯ ಭೀಮಾ ಪ್ಲಾಂಕ್, ಪ್ರಸಕ್ತ ಸಾಲಿನಲ್ಲಿ 3,779 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನಗೊಳಿಸುವ ಭರವಸೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ-ಕುಕನೂರು ತಾಲ್ಲೂಕಿನ 38 ಕೆರೆಗಳನ್ನು ಕುಡಿಯುವ ನೀರು ಹಾಗೂ ಅಂತರ ಜಲ ಅಭಿವೃದ್ಧಿಗಾಗಿ ಕೆರೆ ತುಂಬಿಸುವ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ 970 ಕೋಟಿ ರೂ. ಅಂದಾಜು ಮೊತ್ತದಲ್ಲಿ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಹಾಗೂ ಇತರ ಪ್ರದೇಶಗಳಿಗೆ ನಾರಾಯಣಪುರ ಬಲದಂಡೆ ಕಾಲುವೆಯಿಂದ ಅಂದಾಜು 990 ಕೋಟಿ ರೂ. ಮೊತ್ತದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳುವ ಕ್ರಮ

ಧಾರವಾಡ ಜಿಲ್ಲೆಯಲ್ಲಿ ಬೆಣ್ಣೆಹಳ್ಳದಿಂದ ಪ್ರವಾಹ ಪೀಡಿತ ಗ್ರಾಮಗಳಿಗೆ ತಡೆಗೋಡೆ ನಿರ್ಮಾಣ ಮಾಡಲು ರಾಜ್ಯ ವಿಪತ್ತು ಉಪಶಮನ ನಿಧಿಯಿಂದ (SDMF) ಯೋಜನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments