ಕರ್ನಾಟಕಕ್ಕೆ ನಿರಂತರವಾಗಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿರುವ ರಾಜ್ಯ ಸರ್ಕಾರ, ಕೇಂದ್ರದ ತಾರತಮ್ಯ ವಿರೋಧಿಸಿ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದೆ.
ಕೇಂದ್ರ ಸರ್ಕಾರದ ವಿರುದ್ದ ಫೆಬ್ರವರಿ 07 ರಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಬೆಳಿಗ್ಗೆ 11.00 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹೋರಾಟಕ್ಕೆ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ರಾಜ್ಯದ ಎಲ್ಲ ಸಂಸದರಿಗೆ, ರಾಜ್ಯ ಸಭಾ ಸದಸ್ಯರಿಗೆ ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಿಗೆ ಖುದ್ದಾಗಿ ಪತ್ರ ಬರೆದಿದ್ದಾರೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಡಿ ವಿ ಸದಾನಂದಗೌಡ, ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಅನಂತ ಕುಮಾರ್ ಹೆಗಡೆ, ಪ್ರತಾಪ್ ಸಿಂಹ, ಸುಮಲತಾ ಅಂಬರೀಷ್ ಸೇರಿದಂತೆ ಎಲ್ಲ ಸಂಸದರಿಗೆ ಮತ್ತು ರಾಜ್ಯಸಭಾ ಸದಸ್ಯರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಪತ್ರದ ಮೂಲಕ ಸಿದ್ದರಾಮಯ್ಯ ಕೋರಿದ್ದಾರೆ.
ಪತ್ರದಲ್ಲಿ ಏನಿದೆ?
“ಕೇಂದ್ರ ಸರ್ಕಾರದಿಂದ ಆಗುತ್ತಿರುವ ನಿರಂತರ ಅನ್ಯಾಯ ಮತ್ತು ಕರ್ನಾಟಕದ ವಿಚಾರವಾಗಿ ಕೇಂದ್ರ ಸರ್ಕಾರವು ತೋರುತ್ತಿರುವ ಮಲತಾಯಿ ಧೋರಣೆಯು ತಮಗೆ ಈಗಾಗಲೇ ತಿಳಿದ ವಿಷಯವಾಗಿರುತ್ತದೆ. ಇದರ ವಿರುದ್ಧ ಪ್ರತಿಭಟಿಸಲು ಮತ್ತು ದೇಶದ ಗಮನ ಸೆಳೆಯಲು ತೀರ್ಮಾನಿಸಲಾಗಿದೆ. ರಾಜ್ಯದ ಉಪ ಮುಖ್ಯಮಂತ್ರಿಗಳು, ಎಲ್ಲ ಸಚಿವರು, ಶಾಸಕರು ಮತ್ತು ಸಂಸದರು ಸೇರಿ ದೆಹಲಿಯ ಜಂತರ್ ಮಂತರ್‌ನಲ್ಲಿ ಫೆಬ್ರವರಿ, 07 ರಂದು ಒಂದು ದಿನದ ಧರಣಿ ಸತ್ಯಾಗ್ರಹವನ್ನು ನಡೆಸಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದ್ದಾರೆ.
“ಕರ್ನಾಟಕಕ್ಕೆ ತೆರಿಗೆ ಪಾಲಿನ ಹಂಚಿಕೆಯಲ್ಲಿ ಆಗುತ್ತಿರುವ ಭಾರೀ ಅನ್ಯಾಯ, ಬರಪರಿಹಾರ ನೀಡದಿರುವುದು, ವಿವಿಧ ಯೋಜನೆಗಳಿಗೆ ಅನುಮತಿ ಮತ್ತು ನೆರವು ನೀಡುವಲ್ಲಿ ತೋರುತ್ತಿರುವ ನಿರ್ಲಕ್ಷ ಮತ್ತು ವಿಳಂಬ ಇತ್ಯಾದಿಗಳು ರಾಜ್ಯದಲ್ಲಿ ಜನಜೀವನವನ್ನು ವಿಪರೀತವಾಗಿ ಬಾಧಿಸುತ್ತಿವೆ. ಈ ವಿಚಾರವನ್ನು ಜವಾಬ್ದಾರಿಯುತ ಚುನಾಯಿತ ಪ್ರತಿನಿಧಿಗಳಾದ ತಾವು ಅರಿತೇ ಇರುತ್ತೀರಿ. ಆದುದರಿಂದ, ಈ ಧರಣಿ ಸತ್ಯಾಗ್ರಹದಲ್ಲಿ ತಾವು ಕೂಡಾ ಪಾಲ್ಗೊಂಡು ಅದರ ಯಶಸ್ಸಿಗೆ ನೆರವಾಗಬೇಕು ಎಂದು ತಮ್ಮಲ್ಲಿ ಕರ್ನಾಟಕದ ಸಮಸ್ತ ಜನತೆಯ ಪರವಾಗಿ ವಿನಂತಿಸುತ್ತೇನೆ” ಎಂದು ಸಿದ್ದರಾಮಯ್ಯ ಕೋರಿದ್ದಾರೆ.