ಶತಾಯುಷಿ, ಸಿದ್ಧಗಂಗಾ ಮಠಾಧೀಶರಾಗಿದ್ದ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಕೊಡಬೇಕಿತ್ತು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಭಾರತದ ಮಾಜಿ ಪ್ರಧಾನಿ, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಿರುವ ವಿಚಾರವಾಗಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, “ಅಡ್ವಾಣಿಯವರು ದೇಶದ ಹಿರಿಯ ರಾಜಕಾರಣಿ. ಅವರಿಗೆ ಭಾರತ ರತ್ನ ನೀಡಿದ್ದಕ್ಕೆ ನಮ್ಮ ತಕರಾರೇನೂ ಇಲ್ಲ. ಆದರೆ, ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಕೊಡಬೇಕಿತ್ತು” ಎಂದರು.
“ಕೇಂದ್ರ ಸರ್ಕಾರದ ತೀರ್ಮಾನಕ್ಕೆ ನಮ್ಮದೇನು ತಕರಾರು ಇಲ್ಲ. ಆದರೆ ನಮ್ಮ ರಾಜ್ಯದಲ್ಲಿ ಅನ್ನದಾಸೋಹಕ್ಕೆ ಶ್ರೀಗಳು ಹೆಸರಾಗಿದ್ದವರು. ನಡೆದಾಡುವ ದೇವರೆಂದೇ ಖ್ಯಾತರಾದ ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ಈ ಹಿಂದೆಯೇ ನಮ್ಮ ಸರ್ಕಾರ ಮನವಿ ಮಾಡಿದೆ. ಅವರಿಗೆ ಗೌರವ ಸಲ್ಲಿಸಬೇಕು ಎಂಬುದು ಬಹುತೇಕ ಕನ್ನಡಿಗರ ಒತ್ತಾಸೆ” ಎಂದು ಹೇಳಿದರು.
ಪತ್ರ ಬರೆದಿದ್ದೆ: ಸಿದ್ದರಾಮಯ್ಯ
ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಅಡ್ವಾಣಿಯವರಿಗೆ ಭಾರತ ರತ್ನ ದೊರೆತಿರುವ ಬಗ್ಗೆ ಮಾತನಾಡಿ, “ಅಡ್ವಾಣಿ ಅವರಿಗೆ ಕೊಡಲಿ, ಬೇಡ ಎಂದು ನಾವು ಹೇಳಿಲ್ಲ. ಆದರೆ, ನಾನು ತುಮಕೂರು ಸಿದ್ಧಗಂಗಸ್ವಾಮಿಗಳಿಗೆ ಕೊಡಬೇಕು ಎಂದು ತಿಳಿಸಿ ಪತ್ರ ಬರೆದಿದ್ದೆ” ಎಂದು ತಿಳಿಸಿದರು.