Homeಕರ್ನಾಟಕಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿಯಾಗಿದೆ: ಸಿಎಂ ಸಿದ್ದರಾಮಯ್ಯ ಟೀಕೆ

ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿಯಾಗಿದೆ: ಸಿಎಂ ಸಿದ್ದರಾಮಯ್ಯ ಟೀಕೆ

– ಕಾರ್ಮಿಕರು ದೇಶದ ಆರ್ಥಿಕ ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು:ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾರ್ಮಿಕರು ದೇಶದ ಆರ್ಥಿಕ ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿದ್ದರು. ಯಾವುದೇ ಕೆಲಸ ಮಾಡಿದರೂ ಅದಕ್ಕೆ ಸಮಾನ ಗೌರವ ನೀಡಬೇಕು. ಕಾರ್ಮಿಕರು ದೇಶದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಅಗತ್ಯ ಎಂದರು.

ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ

ದೇಶದಲ್ಲಿ 75% ಗಿಂತ ಹೆಚ್ಚು ಅಸಂಘಟಿತ ಕಾರ್ಮಿಕರಿದ್ದಾರೆ. ಕೇಂದ್ರ ಸರ್ಕಾರ ಕಾರ್ಮಿಕರ ವಿರೋಧಿಯಾಗಿದ್ದು, ಕಾರ್ಪೊರೇಟ್ ಸಂಸ್ಥೆಗಳ ಪರವಾಗಿದೆ ಎಂದರು.

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದ್ದು, ಅವರನ್ನು ಗೌರವಿಸುತ್ತದೆ. ರಾಜ್ಯ ಸರ್ಕಾರ ಕಾರ್ಮಿಕರಿಗೆ ಅನೇಕ ಸೌಲಭ್ಯಗಳನ್ನು ನೀಡಿದೆ. ಕಾರ್ಮಿಕರು ಕೆಲಸದ ವೇಳೆ ಮೃತಪಟ್ಟರೆ ಅವರಿಗೆ ನೀಡುತ್ತಿದ್ದ 5 ಲಕ್ಷಗಳ ಪರಿಹಾರ ಮೊತ್ತವನ್ನು 8 ಲಕ್ಷಕ್ಕೆ ಹೆಚ್ಚಿಸಿದೆ. ಸಹಜ ಮರಣ ಹೊಂದಿದವರ ಸಂಸ್ಕಾರಕ್ಕೆ ನೀಡುತ್ತಿದ್ದ 75 ಸಾವಿರ ರೂ.ಗಳನ್ನು ಒಂದೂವರೆ ಲಕ್ಷಕ್ಕೆ ಹೆಚ್ಚಿಸಿದೆ ಎಂದರು.

30256 ಗಿಗ್ ಕಾರ್ಮಿಕರ ನೋಂದಣಿ

ಪಕ್ಷದ ವರಿಷ್ಠ ರಾಹುಲ್ ಗಾಂಧಿಯವರು ಸಂತೋಷ ಲಾಡ್ ಹಾಗೂ ಪ್ರಿಯಾಂಕಾ ಖರ್ಗೆ ಹಾಗೂ ನನ್ನೊಂದಿಗೆ ಚರ್ಚಿಸಿ ಕಾರ್ಮಿಕರಿಗೆ ನೆರವಾಗುವ ಕೆಲಸವನ್ನು ಮಾಡಿದ್ದಾರೆ. ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ ಯಡಿ 30256 ಗಿಗ್ ಕಾರ್ಮಿಕರನ್ನು ನೋಂದಾಯಿಸಲಾಗಿದ್ದು, ಅಪಘಾತದಲ್ಲಿ ಮರಣ ಹೊಂದಿವವರಿಗೆ 4 ಲಕ್ಷ ರೂ ಪರಿಹಾರ ನೀಡಲು ತೀರ್ಮಾನಿಸಿದೆ. ಈಗಾಗಲೇ ಐದು ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ ಎಂದರು.

ಶ್ರಮಿಕ ವರ್ಗಗಳ ಮಕ್ಕಳೂ ಉತ್ತಮ ಶಿಕ್ಷಣ ಪಡೆಯಬೇಕು

2026-27 ಕ್ಕೆ ಶ್ರಮಿಕ ವರ್ಗಗಳ ಮಕ್ಕಳೂ ಉತ್ತಮ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಕಾರ್ಮಿಕರ ಮಕ್ಕಳಿಗೆ 104 ವಸತಿ ಶಾಲೆಗಳನ್ನು ತೆರೆಯಲಾಗಿದೆ. ವಸತಿ ಶಾಲೆಗಳಲ್ಲಿ 99.42% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಾರ್ಮಿಕರ ಮಕ್ಕಳೂ ಉನ್ನತ ಶಿಕ್ಷಣ ಪಡೆಯಲು ಈ ಶಾಲೆಗಳು ನೆರವಾಗಲಿವೆ ಎಂದರು.

ಕಾಂಗ್ರೆಸ್ ಪಕ್ಷ ಕಾರ್ಮಿಕರ ಜೊತೆಗಿದೆ

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಾರಿಗೆ ತಂಡ ಕಾನೂನುಗಳು ಕಾರ್ಮಿಕರ ಹಿತವನ್ನು ಕಾದಿವೆ ಹಾಗೂ ಜಗಜೀವನ ರಾಮ್ ಅವರೂ ಕಾರ್ಮಿಕರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದರು. ಕಾಂಗ್ರೆಸ್ ಪಕ್ಷ ಕಾರ್ಮಿಕರ ಜೊತೆಗಿದೆ ಎಂದರು.

ಕಾರ್ಮಿಕರ ಹೋರಾಟ

ಎಂಟು ಗಂಟೆಗಳ ಕೆಲಸದ ಅವಧಿ, ಎಂಟು ಗಂಟೆಗಳ ವಿಶ್ರಾಂತಿ, ಎಂಟು ಗಂಟೆಗಳ ಕಾಲ ಮನರಂಜನೆ ಅಗತ್ಯವೆಂದು 1886 ರಲ್ಲಿ ಚಿಕಾಗೋದಲ್ಲಿ ನಡೆದ ಕಾರ್ಮಿಕರ ಸಂಘಟನೆಗಳು ಹೋರಾಟಗಾರರ ಬೇಡಿಕೆಯಾಗಿತ್ತು. ಅದಕ್ಕೂ ಮುನ್ನ 14 ರಿಂದ 18 ಗಂಟೆಗಳ ಕಾಲ ಕೆಲಸ ಮಾಡಬೇಕಿತ್ತು. ಕಾರ್ಮಿಕರ ಹೋರಾಟದ ದಿನವನ್ನೇ ವಿಶ್ವ ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಡಿಸಿಎಂ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ‌ ಅಹಮದ್, ಮಾಜಿ ಸಚಿವ ಹಾಗೂ ಗ್ಯಾರಂಟಿ ಅನುಷ್ಠಾನ‌ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments