Homeಕರ್ನಾಟಕಕಟ್ಟಡ ನಿರ್ಮಾಣ ನಕ್ಷೆಗೆ ಪ್ರಮಾಣೀಕೃತ ವಾಸ್ತುಶಿಲ್ಪಿಗಳ ಸ್ವಯಂ ದೃಢೀಕರಣ ವ್ಯವಸ್ಥೆ ಶೀಘ್ರ ಜಾರಿ: ಡಿ ಕೆ...

ಕಟ್ಟಡ ನಿರ್ಮಾಣ ನಕ್ಷೆಗೆ ಪ್ರಮಾಣೀಕೃತ ವಾಸ್ತುಶಿಲ್ಪಿಗಳ ಸ್ವಯಂ ದೃಢೀಕರಣ ವ್ಯವಸ್ಥೆ ಶೀಘ್ರ ಜಾರಿ: ಡಿ ಕೆ ಶಿವಕುಮಾರ್

ಪ್ರಮಾಣೀಕೃತ ವಾಸ್ತುಶಿಲ್ಪಿಗಳಿಂದ (Architect) ಕಟ್ಟಡ ನಿರ್ಮಾಣ ನಕ್ಷೆಯ ಸ್ವಯಂ ದೃಢೀಕರಣ ವ್ಯವಸ್ಥೆ ಜಾರಿಗೆ ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೋ ಆರ್ಟ್ ಕೇಂದ್ರದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಟಿರಿಯರ್ ಡಿಸೈನ್ ಶುಕ್ರವಾರ ಏರ್ಪಡಿಸಿದ್ದ “ಡಿಸೈನೂರು” ಹಬ್ಬದಲ್ಲಿ ಮಾತನಾಡಿ, “ಪ್ರಮಾಣಿಕೃತ ಲೆಕ್ಕಪರಿಶೋಧಕರು ಇರುವಂತೆ, ಪ್ರಮಾಣೀಕೃತ ಕಟ್ಟಡ ವಾಸ್ತುಶಿಲ್ಪಿಗಳಿಗೆ ನಿವೇಶನಗಳ ಕಟ್ಟಡಗಳ ನಕ್ಷೆ ಸ್ವಯಂ ದೃಢೀಕರಿಸುವ ಅವಕಾಶ ನೀಡಲಾಗುವುದು. ಇದರಿಂದ ನಕ್ಷೆ ಮಂಜೂರಿಗೆ ಜನ ಪದೇ, ಪದೇ ಬಿಬಿಎಂಪಿಯ ಬಾಗಿಲು ತುಳಿಯುವುದು ತಪ್ಪುತ್ತದೆ. ಅಧಿಕಾರಿಗಳ ಕಿರುಕುಳ ಸೇರಿದಂತೆ ಕೆಲಸ ವಿಳಂಬವಾಗುವುದೂ ತಪ್ಪುತ್ತದೆ” ಎಂದರು.

“ಈ ನೆಲದ ಕಾನೂನಿನ ಅರಿವಿರುವ ಕಟ್ಟಡ ವಾಸ್ತುಶಿಲ್ಪಿಗಳು ಸರ್ಕಾರದ ನಿರ್ಣಯಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ಜನಸಾಮಾನ್ಯರು ಮನೆ ಕಟ್ಟಲು ಪರದಾಡುವ ಸ್ಥಿತಿ ಈ ಕಾನೂನಿನಿಂದ ಪರಿಹಾರವಾಗಲಿದೆ. ನೀವೆಲ್ಲಾ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೀರಿ ಎನ್ನುವ ನಂಬಿಕೆ ನನಗಿದೆ” ಎಂದು ಹೇಳಿದರು.

“ಎಷ್ಟು ಅಳತೆಯ ನಿವೇಶನಗಳ ಕಟ್ಟಡಗಳಿಗೆ ಇದು ಅನ್ವಯ ಆಗಲಿದೆ ಎಂಬುದರ ಬಗ್ಗೆ ಒಂದೆರಡು ದಿನದಲ್ಲಿ ವಿವರ ನೀಡಲಾಗುವುದು. ಕಟ್ಟಡ ಮತ್ತು ಒಳಾಂಗಣ ವಿನ್ಯಾಸ ಕ್ಷೇತ್ರಕ್ಕೆ ಬೆಂಗಳೂರು ಮಟ್ಟದಲ್ಲಿ ಸ್ಪರ್ಧೆಯಿಲ್ಲ, ಬದಲಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಏರ್ಪಟ್ಟಿದೆ. ನಮಗೆಲ್ಲರಿಗೂ ನಾವು ಮಾಡುವ ಕೆಲಸದ ಬಗ್ಗೆ ಗೌರವ ಮತ್ತು ಹೆಮ್ಮೆ ಇರಬೇಕು. ನಿರ್ಮಾಣ ಮತ್ತು ವಿನ್ಯಾಸ ಕ್ಷೇತ್ರದ ತಂತ್ರಜ್ಞಾನ ಸಾಕಷ್ಟು ಬೆಳವಣಿಗೆ ಕಂಡಿದೆ” ಎಂದರು.

“ಸೌಂದರ್ಯ ವರ್ಧಕ ಉತ್ಪನ್ನಗಳ ಮಾರುಕಟ್ಟೆಗೆ ಹೆಚ್ಚು ಬೇಡಿಕೆ ಇದೆ ಎಂದು ನನ್ನ ಮಗಳು ಆಗಾಗ್ಗೆ ಹೇಳುತ್ತಿರುತ್ತಾಳೆ. ಏಕೆಂದರೆ ಸೌಂದರ್ಯ ಪ್ರಜ್ಞೆ ಎನ್ನುವುದು ಜನರ ತಲೆಯಲ್ಲಿ ಕುಳಿತಿದೆ. ಸಾಮಾನ್ಯ ಕಟ್ಟಡ ನಿರ್ಮಾಣಕ್ಕಿಂತ ಶೇ 10 ರಷ್ಟು ಹೆಚ್ಚುವರಿ ವೆಚ್ಚ ಕಟ್ಟಡ ವಿನ್ಯಾಸ ಮತ್ತು ಒಳಾಂಗಣ ವಿನ್ಯಾಸಕ್ಕೆ ಖರ್ಚಾಗುತ್ತದೆ. ಇದರ ಬಗ್ಗೆ ಗ್ರಾಹಕರಿಗೆ ಮನವರಿಕೆ ಮಾಡುವುದು ನಿಮ್ಮ ಕೆಲಸ” ಎಂದು ಹೇಳಿದರು.

“ಮುಂದಿನ ದಿನಗಳಲ್ಲಿ ಕಟ್ಟಡ ವಿನ್ಯಾಸಕಾರರಿಗೆ ಹೆಚ್ಚು, ಹೆಚ್ಚು ಕೆಲಸ ದೊರೆಯುವಂತಾಗಲಿ. ನಿಮ್ಮ ಕೆಲಸದ ವಿಚಾರದಲ್ಲಿ ಯಾವುದಾದರೂ ತೊಂದರೆ ಉಂಟಾದರೆ ನೇರವಾಗಿ ನನ್ನ ಭೇಟಿಯಾಗಿ ಸಮಸ್ಯೆ ತಿಳಿಸಬಹುದು. ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments