ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದೆ. ಸದ್ಯದ ಟ್ರೆಂಡ್ ಪ್ರಕಾರ ಬಿಜೆಪಿ 171ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬೇಕಿರುವುದು 148 ಸ್ಥಾನಗಳು. ಇದರೊಂದಿಗೆ ಕೇಸರಿ ಪಕ್ಷ ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೇರುವ ಉತ್ಸಾಹದಲ್ಲಿದೆ.
ಬಿಜೆಪಿ ಭಾರೀ ಮುನ್ನಡೆ ಸಾಧಿಸುತ್ತಿದ್ದಂತೆ ಕೋಲ್ಕತ್ತಾದಲ್ಲಿರುವ ಪಕ್ಷದ ರಾಜ್ಯ ಪ್ರಧಾನ ಕಚೇರಿಯ ಹೊರಗೆ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳನ್ನು ಹಿಡಿದುಕೊಂಡು ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತಿದ್ದಾರೆ. ಅಮಿತ್ ಶಾ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಗುಣಗಾನ ಮಾಡುತ್ತಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಚಾಲ್ತಿಯಲ್ಲಿರುವಂತೆಯೇ ಹಾಲಿ ಟ್ರೆಂಡ್ ಅನ್ನು ಬಿಜೆಪಿ ಸಂಚು ಎಂದು ಕರೆದಿರುವ ಟಿಎಂಸಿ ಮುಖ್ಯಸ್ಥೆ ಹಾಗೂ ಸಿಎಂ ಮಮತಾ ಬ್ಯಾನರ್ಜಿ, ಫಲಿತಾಂಶ ತಮಗೆ ಅನುಕೂಲವಾಗಿಸಿಕೊಳ್ಳಲು ಯೋಜನೆ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರ ಧೈರ್ಯ ಕುಗ್ಗಿಸಲು, ಬಿಜೆಪಿ ಮೊದಲು ತಮಗೆ ಅನುಕೂಲಕರವಾಗಿರುವ ಕ್ಷೇತ್ರಗಳ ಫಲಿತಾಂಶಗಳನ್ನು ತೋರಿಸುತ್ತಿದೆ ಮತ್ತು ಟಿಎಂಸಿ ಮುನ್ನಡೆ ಸಾಧಿಸಿರುವ ಫಲಿತಾಂಶಗಳನ್ನು ತಡವಾಗಿ ತೋರಿಸುವ ಯೋಜನೆ ಹೊಂದಿದೆ. ಮೂರು ಅಥವಾ ನಾಲ್ಕು ಸುತ್ತುಗಳನ್ನು ಎಣಿಸಲಾಗಿದ್ದರೂ, ಒಟ್ಟು 14-18 ಸುತ್ತುಗಳಿವೆ. ಆಗ ನೀವು ಗೆಲ್ಲುತ್ತೀರಿ. ಕಾದು ನೋಡಿ. ನಾವು ನಿಮ್ಮೊಂದಿಗಿದ್ದೇವೆ. ಭಯಪಡಬೇಡಿ. ನಾವು ಹುಲಿ ಮರಿಗಳಂತೆ ಹೋರಾಡುತ್ತೇವೆ” ಎಂದು ಮಮತಾ ಹೇಳಿದ್ದಾರೆ.
ರಾಜಕೀಯ ಹಿಂಸಾಚಾರ
ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ದ ಬೆನ್ನಲ್ಲೇ ರಾಜಕೀಯ ಹಿಂಸಾಚಾರ ಭುಗಿಲೆದ್ದಿದ್ದು, ಕೂಚ್ ಬೆಹಾರ್ನ ದಿನ್ಹಾಟಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ. ಹೀಗಾಗಿ ಕೇಂದ್ರ ಪಡೆಗಳ ಸಿಬ್ಬಂದಿ ಲಾಠಿ ಚಾರ್ಜ್ ನಡೆಸಿದರು.
ಜಲ್ಪೈಗುರಿಯ ಡಿಐಜಿ ಅಂಜಲಿ ಸಿಂಗ್ ಈ ಬಗ್ಗೆ ಮಾತನಾಡಿ, “ಕಾನೂನು ಮತ್ತು ಸುವ್ಯವಸ್ಥೆಯೊಂದಿಗೆ ಪರಿಸ್ಥಿತಿ ಶಾಂತಿಯುತವಾಗಿದೆ. ಯಾವುದೇ ಅಡ್ಡಿ ಅಥವಾ ಯಾವುದೇ ಅತಂಕದ ನಿರೀಕ್ಷೆಯಿಲ್ಲ. ಪರಿಸ್ಥಿತಿ ಶಾಂತಿಯುತವಾಗಿದೆ. ಯಾವುದೇ ಪರಿಸ್ಥಿತಿ ಉದ್ಭವಿಸಿದಲ್ಲಿ ನಾವು ಪಡೆಗಳನ್ನು ಸಿದ್ಧವಾಗಿಟ್ಟುಕೊಂಡಿದ್ದೇವೆ” ಎಂದು ಹೇಳಿದ್ದಾರೆ.


