ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಮಹಿಳೆ ಮೇಲೆ ಗ್ಯಾಂಗ್ರೇಪ್ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಸರ್ಕಾರ ಅತ್ಯಾಚಾರಿಗಳ ಪರ ನಿಂತಿದೆ ಎಂದಿದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ” ಹೀನ ಕೃತ್ಯಗಳು ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಅತ್ಯಾಚಾರ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಕೊಡಿ ಅಂದರೂ ಸರ್ಕಾರ ನೀಡುತ್ತಿಲ್ಲ ಯಾಕೆ” ಎಂದು ಪ್ರಶ್ನಿಸಿದರು.
“ಹಾನಗಲ್‌ನಲ್ಲಿ ಗ್ಯಾಂಗ್ರೇಪ್ ಪ್ರಕರಣ ಬಹಿರಂಗಗೊಂಡಿದೆ. ನೈತಿಕ ಪೊಲೀಸ್ಗಿರಿ ಪ್ರಕರಣಗಳೂ ಬಹಿರಂಗವಾಗಿವೆ. ಇಂತಹ ಕೃತ್ಯ ಎಸಗುವ ಗ್ಯಾಂಗ್ ಸಕ್ರಿಯವಾಗಿದೆ. ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಆಡಳಿತ ವ್ಯವಸ್ಥೆ, ಸರ್ಕಾರ ರೇಪಿಸ್ಟ್ಗಳ ಜೊತೆ ನಿಂತಿದೆ” ಎಂದು ಕಿಡಿ ಕಾರಿದರು.
“ಪೋಸ್ಕೋ ಕೇಸ್ನಲ್ಲಿ ಕೇಸ್ ದಾಖಲು ಮಾಡಿಲ್ಲ. ಸುಳ್ಳು ಮೆಡಿಕಲ್ ಎಕ್ಸಾಮಿನ್ ಆಗಿವೆ. ಇದು ಮೆಡಿಕೋ ಲೀಗಲ್ ಕೇಸ್, ಸರ್ಕಾರ ಸಂತ್ರಸ್ತೆ ಬಗ್ಗೆ ಜವಾಬ್ದಾರಿ ತಗೊಬೇಕು. ಸಿಎಂ ಶಾಸಕರಿಗೆ ಹೇಳಿದ್ದೀನಿ ಅಂತಾರೆ. ಅಂದ್ರೆ ಸರ್ಕಾರ ಸತ್ತಿದೆಯಾ? ಆರೋಗ್ಯ ಇಲಾಖೆ ಸತ್ತಿದೆಯಾ? ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
“ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕ್ರಿಮಿನಲ್‌ಗಳಿಗೆ ಕುಮಕ್ಕು ಸಿಗುತ್ತಿದೆ. ಅಪರಾಧ ಕೃತ್ಯ ಎಸಗಿದವರಲ್ಲಿ ವೋಟ್ ಬ್ಯಾಂಕ್ ಇದೆ. ಹೀಗಾಗಿ ಅವರ ರಕ್ಷಣೆ ಮಾಡುವ ಕೆಲಸವನ್ನ ಸರ್ಕಾರ ಮಾಡುತ್ತಿದೆ” ಎಂದು ಆರೋಪಿಸಿದರು.
“ಹಾನಗಲ್‌ನಲ್ಲಿ ಗ್ಯಾಂಗ್ ರೇಪ್ ಪ್ರಕರಣವನ್ನ ಖಂಡಿಸಿ ನಾವು ಇವತ್ತು ಪ್ರತಿಭಟನೆ ಮಾಡುತ್ತಿದ್ದೇವೆ. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಆದ್ರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಗ್ಯಾಂಗ್ ರೇಪ್ ಪ್ರಕರಣದಲ್ಲಿ ಸರಿಯಾದ ರೀತಿಯಲ್ಲಿ ತನಿಖೆ ನಡೆಯುತ್ತಿದೆ ಅಂತಾರೆ. ಹಾಗಾದ್ರೆ ಇಬ್ಬರೂ ಪೊಲೀಸರನ್ನು ಅಮಾನತು ಮಾಡಿದ್ದು ಏಕೆ? ಆ ಹೆಣ್ಣು ಮಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡಿಸಲು ಇವರಿಂದ ಆಗಿಲ್ಲ” ಎಂದರು.