Homeಕರ್ನಾಟಕರಾಷ್ಟ್ರೀಯ ಜೈವಿಕ ಉದ್ಯಮಶೀಲತಾ ಸ್ಪರ್ಧೆ | ವಿಜೇತ ನವೋದ್ಯಮಕ್ಕೆ ₹ 50 ಲಕ್ಷಗಳವರೆಗೆ ಹೂಡಿಕೆ ಬೆಂಬಲ:...

ರಾಷ್ಟ್ರೀಯ ಜೈವಿಕ ಉದ್ಯಮಶೀಲತಾ ಸ್ಪರ್ಧೆ | ವಿಜೇತ ನವೋದ್ಯಮಕ್ಕೆ ₹ 50 ಲಕ್ಷಗಳವರೆಗೆ ಹೂಡಿಕೆ ಬೆಂಬಲ: ಪ್ರಿಯಾಂಕ್ ಖರ್ಗೆ

ಜೈವಿಕ ತಂತ್ರಜ್ಞಾನ ಮತ್ತು ನಾವೀನ್ಯತಾ ಕ್ಷೇತ್ರದಲ್ಲಿ ಕರ್ನಾಟಕದ ಮುಂಚೂಣಿ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸೆಲ್ಯುಲರ್ ಮತ್ತು ಮಾಲಿಕ್ಯೂಲರ್ ಪ್ಲಾಟ್‍ಫಾರ್ಮ್ ಕೇಂದ್ರವು ರಾಷ್ಟ್ರೀಯ ಜೈವಿಕ ಉದ್ಯಮಶೀಲತಾ ಸ್ಪರ್ಧೆಯ (ಎನ್‍ಬಿಇಸಿ 2026) ಒಂಬತ್ತನೇ ಆವೃತ್ತಿಗೆ ಇಂದಿನಿಂದ ಚಾಲನೆ ನೀಡಿದೆ.

ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್ ಇಲಾಖೆ, ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಕೃಷಿ ಮಹಾ ಸವಾಲುಗಳ (ಎಜಿಸಿ) ಕಾರ್ಯಕ್ರಮದ ಮೂರನೇ ಸಮೂಹದ ವಿಜೇತರನ್ನು ಪ್ರಕಟಿಸಲಾಗಿದೆ.

ರಾಜ್ಯ ಸರ್ಕಾರದ ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್., ಇಲಾಖೆಯ ನಿರ್ದೇಶಕ ಮತ್ತು ಕೆಐಟಿಎಸ್ (ಕಿಟ್ಸ್) ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಮತ್ತು ಸಿ-ಸಿಎಎಂಪಿಯ ಸಿಇಒ ಮತ್ತು ನಿರ್ದೇಶಕ ಡಾ. ತಸ್ಲಿಮರಿಫ್ ಸೈಯದ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ʼರಾಷ್ಟ್ರೀಯ ಜೈವಿಕ ಉದ್ಯಮಶೀಲತಾ ಸ್ಪರ್ಧೆಯಂತಹ ವೇದಿಕೆಗಳು ನಾವೀನ್ಯತೆಯನ್ನು ಹೆಚ್ಚು ಹೆಚ್ಚು ಜನರಿಗೆ ಪರಿಚಯಿಸಲು ನೆರವಾಗುತ್ತವೆ. ಯುವ ಮನಸ್ಸುಗಳು ವೈಜ್ಞಾನಿಕ ವಿಚಾರಗಳನ್ನು ಕಾರ್ಯಸಾಧ್ಯವಾದ, ವಾಸ್ತವ ಜಗತ್ತಿನ ಪರಿಹಾರಗಳಾಗಿ ಮಾರ್ಪಡಿಸಲು ಹೇಗೆ ಅನುವು ಮಾಡಿಕೊಡುತ್ತವೆ ಎಂಬುದನ್ನು ಗಮನಿಸಲು ಸಹಕಾರಿಯಾಗಿವೆʼ ಎಂದರು.

ʼಕರ್ನಾಟಕವು ಭಾರತದ ಜೈವಿಕ ತಂತ್ರಜ್ಞಾನ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿದೆ. ಸರ್ಕಾರದ ಪ್ರಗತಿಪರ, ಉದ್ಯಮ ಸ್ನೇಹಿನೀತಿಗಳು ಮತ್ತು ಜೈವಿಕ ತಂತ್ರಜ್ಞಾನ ನೀತಿ ಮತ್ತು ಜೈವಿಕ ಆರ್ಥಿಕ ವರದಿಯಂತಹ ಉಪಕ್ರಮಗಳಿಂದ ಬೆಂಬಲಿತವಾಗಿದೆ. ನಾವು ಇಂದು 9ನೇ ಆವೃತ್ತಿಯನ್ನು ಪ್ರಾರಂಭಿಸುತ್ತಿದ್ದಂತೆ ಎನ್‍ಬಿಇಸಿ 2026 ಜೈವಿಕ ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಜಾಗತಿಕ ಕೇಂದ್ರವಾಗಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸ ನನಗಿದೆʼ ಎಂದು ಸಚಿವ ಖರ್ಗೆ ಹೇಳಿದರು.

ʼಕೃಷಿ ಕ್ಷೇತ್ರವು ರಾಜ್ಯದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿದ್ದು ನಮ್ಮ ರಾಜ್ಯದ ಶೇ 70ರಷ್ಟು ಜನರು ಕೃಷಿಯನ್ನು ತಮ್ಮ ಜೀವನೋಪಾಯಕ್ಕೆ ಅವಲಂಬಿಸಿದ್ದಾರೆ. ಆದರೂ ಹವಾಮಾನ ವೈಪರೀತ್ಯ, ಮಣ್ಣಿನಲ್ಲಿ ಪೋಷಕಾಂಶಗಳ ಕ್ಷೀಣತೆ ಮತ್ತು ಮಾರುಕಟ್ಟೆಯ ಏರಿಳಿತಗಳಂತಹ ಸವಾಲುಗಳು ಬೆಳೆಯ ಉತ್ಪಾದನೆಯಲ್ಲಿ ಮತ್ತು ರೈತರ ಆದಾಯದ ಮೇಲೆ ಪರಿಣಾಮವನ್ನು ಬೀರುತ್ತಲೇ ಇವೆʼ ಎಂದು ಅವರು ಕೃಷಿ ಕ್ಷೇತ್ರದ ಬಿಕ್ಕಟ್ಟುಗಳನ್ನು ವಿಶ್ಲೇಷಿಸಿದರು.

ರಾಷ್ಟ್ರೀಯ ಜೈವಿಕ ಉದ್ಯಮಶೀಲತಾ ಸ್ಪರ್ಧಾ ಕಾರ್ಯಕ್ರಮವನ್ನು 2017ರಲ್ಲಿ ಪ್ರಾರಂಭಿಸಲಾಗಿದ್ದು, ಪ್ರತಿ ವರ್ಷ ಹೊಸ ನವೋದ್ಯಮಗಳಿಗೆ, ಉದ್ಯಮಶೀಲರಿಗೆ, ನವೀನ ತಂತ್ರಜ್ಞರಿಗೆ ಮತ್ತು ವಿದ್ಯಾರ್ಥಿಗಳಿಗೆ ಭಾರತದಾದ್ಯಂತ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರ ಎಂಟು ಆವೃತ್ತಿಗಳಲ್ಲಿ 130ಕ್ಕೂ ಹೆಚ್ಚು ವ್ಯವಹಾರ ಕಲ್ಪನೆಗಳು ಒಟ್ಟಾರೆ ₹ 40 ಕೋಟಿಗೂ ಹೆಚ್ಚಿನ ಮೊತ್ತದ ನಗದು ಬಹುಮಾನಗಳು ಮತ್ತು ಹೂಡಿಕೆ ಅವಕಾಶಗಳನ್ನು ಪಡೆದುಕೊಂಡಿವೆ.

ಈ ವರ್ಷ ಎನ್‍ಬಿಇಸಿ 2026ರಲ್ಲಿ, ₹ 20 ಕೋಟಿವರೆಗಿನ ನಗದು ಬಹುಮಾನಗಳು ಮತ್ತು ವಿಜೇತ ನವೋದ್ಯಮಗಳು, ನಾವೀನ್ಯಕಾರರು ಮತ್ತು ವಿದ್ಯಾರ್ಥಿ ತಂಡಗಳಿಗೆ ಹೂಡಿಕೆ ಅವಕಾಶಗಳನ್ನು ಒಳಗೊಂಡಿದೆ. ಇದು ಭಾರತದ ಜೈವಿಕ ನವೋದ್ಯಮ ವ್ಯವಸ್ಥೆಯಲ್ಲಿ ಅತಿ ದೊಡ್ಡ ಮತ್ತು ಹೆಚ್ಚಿನ ಪಾಲು ಹೊಂದಿರುವ ವೇದಿಕೆಗಳಲ್ಲಿ ಒಂದಾಗಿದೆ.

ಎನ್‍ಬಿಇಸಿ 2026ಗಾಗಿ ಅರ್ಜಿಗಳ ಆಹ್ವಾನವನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಇದೇ ಮೇ 31ರವರೆಗೆ ನವೋದ್ಯಮಗಳು, ವೈಯಕ್ತಿಕ ನಾವೀನ್ಯಕಾರರು ಮತ್ತು ವಿದ್ಯಾರ್ಥಿಗಳಿಗೆ ಮುಕ್ತವಾಗಿರಲಿದೆ. ಅರ್ಜಿಗಳನ್ನು https://www.nationalbioentrepreneurship.in/ ವೆಬ್‍ಸೈಟ್‍ನಲ್ಲಿ ಸಲ್ಲಿಸಬಹುದು.
ಕೃಷಿ ಮಹಾ ಸವಾಲು ಕಾರ್ಯಕ್ರಮದ (ಎಜಿಸಿ) ಸಮೂಹ 3ರ ವಿಜೇತರು
ಕರ್ನಾಟಕ ಸರ್ಕಾರ ಮತ್ತು ʼಸಿ- ಕ್ಯಾಂಪ್‌ʼ ಮೂರನೇ ಆವೃತ್ತಿಯ ಕೃಷಿ ಮಹಾಸವಾಲುಗಳ ಸವಾಲುಗಳ ಆರು ವಿಜೇತ ನವೋದ್ಯಮಗಳ ಹೆಸರುಗಳನ್ನು ಪ್ರಕಟಿಸಲಾಗಿದೆ.

ವಿಜೇತರು:
• ಬಯೊಸೌಕ್ ಇನೋವೇಷನ್ ಪ್ರೈವೇಟ್ ಲಿಮಿಟೆಡ್
• ಕಾಂಟ್ರಿವೇಷನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್
• ಅರ್ಥವಕ್ರ್ಸ್ ಬಯೋಮ್ಯಾಟ್ ಪ್ರೈವೇಟ್ ಲಿಮಿಟೆಡ್
• ಫಾಮ್ರ್ಸ್‍2ಫೋರ್ಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್
• ರೂಟ್ಸ್‌ಕಾರ್ಟ್ ಅಗ್ರಿಟೆಕ್ ಪ್ರೈವೇಟ್ ಲಿಮಿಟೆಡ್
• ವಪಾಕ್ ಬಯಪ್ಲಾಸ್ಟಿಕ್ ಪ್ರೈವೇಟ್ ಲಿಮಿಟೆಡ್

ಆಯ್ಕೆಯಾದ ಈ ಪ್ರತಿಯೊಂದು ನವೋದ್ಯಮಕ್ಕೆ ₹ 50 ಲಕ್ಷಗಳವರೆಗೆ ಹೂಡಿಕೆ ಬೆಂಬಲ ನೀಡಲಾಗುತ್ತದೆ. ಜೊತೆಗೆ ಮಾರ್ಗದರ್ಶನ, ಸೌಲಭ್ಯಗಳ ಲಭ್ಯತೆ, ಹಾಗೂ ಪರಿಹಾರಗಳನ್ನು ನೈಜ ಜಗತ್ತಿನಲ್ಲಿ ನಿಯೋಜಿಸಲು ಅನುವು ಮಾಡಿಕೊಡಲಾಗುವುದು.

2021ರಲ್ಲಿ ಪ್ರಾರಂಭಿಸಲಾದ ಕೃಷಿ ಮಹಾ ಸವಾಲುಗಳ ಕಾರ್ಯಕ್ರಮವು ಹವಾಮಾನ ಸಾಮರ್ಥ್ಯ, ಸುಸ್ಥಿರ ಪದಾರ್ಥಗಳು, ನಿಖರ ಕೃಷಿ ಮತ್ತು ಆಹಾರ ಸುರಕ್ಷತೆ ಸೇರಿದಂತೆ ಕೃಷಿಯಲ್ಲಿನ ಮಹತ್ವದ ಸವಾಲುಗಳನ್ನು ಪರಿಹರಿಸುವ ಆಳವಾದ ವಿಜ್ಞಾನ ನಾವೀನ್ಯತೆಗಳನ್ನು ಬೆಂಬಲಿಸುವ ಪ್ರಮುಖ ಹೆಜ್ಜೆಯಾಗಿದೆ.

ಇತ್ತೀಚಿನ ಸಮೂಹದ ಸೇರ್ಪಡೆಯೊಂದಿಗೆ ಈ ಕಾರ್ಯಕ್ರಮವು ಈಗ ಕೃಷಿ ವಲಯಕ್ಕೆ ಪರಿಣಾಮಕಾರಿ, ಕಾರ್ಯಸಾಧ್ಯವಾದ ಪರಿಹಾರಗಳ ಮೇಲೆ ಕೆಲಸ ಮಾಡುವ 15 ನವೋದ್ಯಮಗಳಿಗೆ ನೆರವಾಗಲಿದೆ.
• ಪ್ಲಾಸ್ಟಿಕ್ ಮಲ್ಚಿಂಗ್
• ಅಡಿಕೆ ಮತ್ತು ಶ್ರೀಗಂಧದಂತಹ ಹೆಚ್ಚಿನ ಮೌಲ್ಯದ ಬೆಳೆಗಳಲ್ಲಿ ಕೀಟ ಮತ್ತು ರೋಗ ನಿಯಂತ್ರಂ
• ಸುಧಾರಿತ ಕಾರ್ಯಸಾಧ್ಯವಾದ ಕೃಷಿ ಯಾಂತ್ರೀಕರಣ
• ಸಂಸ್ಕರಿತ ಆಹಾರ ಸುರಕ್ಷತೆಗಾಗಿ ಹಾಳಾಗುವ ವಸ್ತುಗಳಲ್ಲಿ ಮಾಲಿನ್ಯ ಮತ್ತು ಕಲಬೆರಕೆಯ ಪತ್ತೆ
• ಜಲಚರ ಸಾಕಣೆ ಮತ್ತು ಕೋಳಿ ಸಾಕಣೆಯಲ್ಲಿ ನೈಜ- ಸಮಯದ ರೋಗ ಮೇಲ್ವಿಚಾರಣೆ
• ಬರ ನಿರೋಧಕ ಮತ್ತು ರೋಗ ನಿರೋಧಕ ಬೆಳೆ ಪ್ರಭೇದಗಳ ಅಭಿವೃದ್ಧಿ
• ಭತ್ತ ಮತ್ತು ಕೆಂಪು ಬೇಳೆ ಕೃಷಿಗೆ ನಿಖರ ಪೋಷಕಾಂಶ ಮತ್ತು ನೀರಿನ ನಿರ್ವಹಣೆ ಇತ್ಯಾದಿ.

ರಾಜ್ಯ ಸರ್ಕಾರವು ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದ ಡಾ. ತಸ್ಲಿಮರಿಫ್ ಸೈಯದ್ ಅವರು, ʼಕಳೆದ ಎಂಟು ವರ್ಷಗಳಲ್ಲಿ ಎನ್‍ಬಿಇಸಿ ಆರಂಭಿಕ ಹಂತದ ಜೈವಿಕ ತಂತ್ರಜ್ಞಾನ ಉದ್ಯಮಶೀಲತೆಯನ್ನು ವರ್ಧಿಸುವ ಪ್ರಬಲ ವೇದಿಕೆಯಾಗಿ ರೂಪುಗೊಂಡಿದೆ. ಇದರ ಜತೆಗೆ ಕೃಷಿ ಮಹಾ ಸವಾಲು ಕಾರ್ಯಕ್ರಮವು ಕೃಷಿಯಲ್ಲಿನ ಸಮಸ್ಯೆಗಳಿಗೆ ನಿರ್ಣಾಯಕ, ನೈಜ ಪರಿಹಾರಗಳನ್ನು ಒದಗಿಸುತ್ತಿರುವುದು ಮೆಚ್ಚುವ ವಿಷಯ. ಈ ಹೆಜ್ಜೆಗಳು ವಿಜ್ಞಾನ ಆಧಾರಿತ ನಾವೀನ್ಯತೆಗಳ ಬಲವಾದ ರಕ್ಷಣಾ ಕವಚವನ್ನು ಒದಗಿಸುತ್ತಿವೆʼ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments