ಗುಜರಾತ್ ರಾಜಧಾನಿ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಒಂದು ನಿಮಿಷದೊಳಗೆ ಪತನಗೊಂಡು, ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ಸೇರಿದಂತೆ 265ಕ್ಕೂ ಅಧಿಕ ಮಂದಿ ಧಾರುಣವಾಗಿ ಮೃತಪಟ್ಟಿದ್ದಾರೆ.
ಜಗತ್ತಿನಲ್ಲೇ ಸಂಭವಿಸಿದ ಅತಿದೊಡ್ಡ ವಿಮಾನ ದುರಂತಗಳ ಸಾಲಿಗೆ ಈ ವಿಮಾನ ಪತನ ಸೇರ್ಪಡೆಯಾಗಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 242 ಮಂದಿಯನ್ನು ಹೊತ್ತ ವಿಮಾನವು ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ಸೆಕೆಂಡುಗಳಲ್ಲಿ ಬಿ.ಜೆ. ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಅಪ್ಪಳಿಸಿದೆ.
ರಕ್ಷಣಾ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಅವಶೇಷಗಳಡಿಯಿಂದ 204 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಸುಮಾರು 41 ಮಂದಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಹಮದಾಬಾದ್ ನಗರ ಪೊಲೀಸ್ ಆಯುಕ್ತ ಜಿ.ಎಸ್.ಮಲಿಕ್ ಹೇಳಿದ್ದಾರೆ.
ಓರ್ವ ಪ್ರಯಾಣಿಕ ಜಿಗಿದು ಪ್ರಾಣ ಉಳಿಸಿಕೊಂಡ
ವಿಮಾನದ 11ಎ ಸೀಟಿನಲ್ಲಿದ್ದ ವ್ಯಕ್ತಿ ಬದುಕುಳಿದಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಬದುಕುಳಿದ ಪ್ರಯಾಣಿಕನನ್ನು ವಿಶ್ವಾಸ್ ಕುಮಾರ್ ರಮೇಶ್ ಎಂದು ಗುರುತಿಸಲಾಗಿದೆ. ವಿಮಾನ ದುರಂತವಾಗುವ ವೇಳೆ ಕಿಟಕಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಮೃತರ ಮತ್ತು ಬದುಕುಳಿದವರ ನಿಖರ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಬೋಯಿಂಗ್ 787 ಡ್ರೀಮ್‌ಲೈನರ್ ನಿರ್ವಹಿಸುತ್ತಿದ್ದ ವಿಮಾನ ಜೂನ್ 12, 2025 ರಂದು ಮಧ್ಯಾಹ್ನ 1:38 ಕ್ಕೆ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿತ್ತು. ವಿಮಾನ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರ ನೇತೃತ್ವದಲ್ಲಿತ್ತು. ಕ್ಲೈವ್ ಕುಂದರ್ ಸಹ-ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ವಿಮಾನದಲ್ಲಿ 230 ವಯಸ್ಕರು ಮತ್ತು 2 ಶಿಶುಗಳು ಸೇರಿದಂತೆ 232 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು, ಒಟ್ಟು 242 ಜನರು ಇದ್ದರು.
ತಲಾ 1 ಕೋಟಿ ರೂ. ಪರಿಹಾರ ಘೋಷಣೆ
ಗುಜರಾತನ ಅಹಮದಾಬಾದ್ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಟಾಟಾ ಗ್ರೂಪ್ (TATA Group) ತಲಾ 1 ಕೋಟಿ ರೂ. ಪರಿಹಾರ ಘೋಷಿಸಿದೆ.
ಈ ದುರಂತಕ್ಕೆ ಟಾಟಾ ಗ್ರೂಪ್ನ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂತಾಪ ಸೂಚಿಸಿ, “ಈ ದುರಂತ ಘಟನೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ಮತ್ತು ಗಾಯಗೊಂಡವರೊಂದಿಗೆ ಇವೆ” ಎಂದು ಹೇಳಿದ್ದಾರೆ.
“ದುರಂತದಲ್ಲಿ ಮೃತರ ಕುಟುಂಬಗಳಿಗೆ ಟಾಟಾ ಗ್ರೂಪ್ ತಲಾ 1 ಕೋಟಿ ರೂ. ಹಾಗೂ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಸಹ ಭರಿಸುತ್ತೇವೆ ಮತ್ತು ಅವರಿಗೆ ಅಗತ್ಯವಿರುವ ಎಲ್ಲಾ ಆರೈಕೆ ಮತ್ತು ಬೆಂಬಲ ದೊರೆಯುವಂತೆ ನೋಡಿಕೊಳ್ಳುತ್ತೇವೆ. ವಿಮಾನ ಪತನಗೊಂಡ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ನ ಪುನರ್ನಿರ್ಮಾಣಕ್ಕೆ ನೆರವು ನೀಡುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.