ಸಮಕಾಲೀನ ಜಗತ್ತಿನ ಜಟಿಲತೆ ಮತ್ತು ಅದು ಒಡ್ಡುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಬೌದ್ಧಿಕ ಧೈರ್ಯ ಅತ್ಯಗತ್ಯವಾಗಿದೆ. ವಿಜ್ಞಾನಿ ರಾಮಜಿ ರಾಘವನ್ ಇಲ್ಲಿ ಸ್ಥಾಪಿಸಿರುವ ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಶನ್ ಈ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದೆ. ನಮ್ಮ ದೇಶದಲ್ಲಿ ನಿಜವಾದ ಬೌದ್ಧಿಕ ಆಸ್ತಿಯ ನಿರ್ಮಾಣ ಗ್ರಾಮೀಣ ಪ್ರದೇಶದಲ್ಲಿ ಸಂಭವಿಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಪ್ರತಿಷ್ಠಾನವು ಶನಿವಾರ ಇಲ್ಲಿ ಏರ್ಪಡಿಸಿದ್ದ ವಾರ್ಷಿಕ ಸಭೆ ‘ಪ್ರೇರಣಾ-2026’ರಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 172 ಎಕರೆ ವಿಶಾಲವಾದ ಜಾಗದಲ್ಲಿ ಅಸ್ತಿತ್ವಕ್ಕೆ ಬಂದಿರುವ ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಶನ್ ಜ್ಞಾನವನ್ನು ಸೃಷ್ಟಿಸುತ್ತ, ಗ್ರಾಮಾಂತರ ಪ್ರದೇಶದೊಂದಿಗೆ ಬೆಸೆದುಕೊಂಡಿದೆ. ಡೇಟಾ ಮತ್ತು ಬದಲಾವಣೆ ತರಬಲ್ಲ ನವೀನ ತಂತ್ರಜ್ಞಾನ, ಹಾಗೂ ಸಂಕೀರ್ಣ ಸವಾಲುಗಳು ಇಂದು ಮಹತ್ತರ ಪಾತ್ರ ವಹಿಸುತ್ತಿವೆ ಎಂದಿದ್ದಾರೆ.
ಕರ್ನಾಟಕವು ಇದುವರೆಗೂ ಐಟಿ ಹಬ್ ಆಗಿತ್ತು. ಈಗ ನಮ್ಮ ರಾಜ್ಯವು ಡೀಪ್ ಟೆಕ್ ತಂತ್ರಜ್ಞಾನ ಧಾರೆಗಳ ತಾಣವಾಗಿದೆ. ಭಾರತದಲ್ಲಿರುವ ಅಗಾಧ ಜನಸಂಖ್ಯೆಯನ್ನು ಸಂಶೋಧನೆ ಮತ್ತು ಆವಿಷ್ಕಾರಗಳಿಗಾಗಿ ಸದ್ಬಳಕೆ ಮಾಡಿಕೊಳ್ಳುವುದು ಪ್ರತಿಭಾವಂತ ಯುವಜನರ ಕೈಯಲ್ಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕವು ತಂತ್ರಜ್ಞಾನ, ಇಎಸ್ಡಿಎಂ, ಏರೋಸ್ಪೇಸ್ ಮುಂತಾದ ವಲಯಗಳಲ್ಲಿ ಇಡೀ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಜತೆಗೆ ಬೆಂಗಳೂರು ನಗರವೊಂದರಲ್ಲೇ 900 ಜಿಸಿಸಿ ಕೇಂದ್ರಗಳಿವೆ. ಬಂಡವಾಳ ಹೂಡಿಕೆಗೆ ಅಗತ್ಯವಾದ ಸರಿಯಾದ ಕಾರ್ಯ ಪರಿಸರ ನಮ್ಮಲ್ಲಿದೆ. ಆದ್ದರಿಂದ ಯುವಜನರು ಕೇವಲ ತಮ್ಮ ಭವಿಷ್ಯವನ್ನು ಅರಸದೆ, ಅದರ ವೇಗವನ್ನು ಕೂಡ ನಿರ್ಧರಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಎಐ, ರೋಬೋಟಿಕ್ಸ್, ಸೆಮಿಕಂಡಕ್ಟರ್ ಮುಂತಾದವು ಹಳ್ಳಿಯ ಮಕ್ಕಳಿಗೂ ಸಿಗಬೇಕು. ಉದ್ಯಮಿಗಳು ಈ ನಿಟ್ಟಿನಲ್ಲಿ ಯೋಚಿಸಬೇಕು. ಕೇವಲ ಯಂತ್ರೋಪಕರಣಗಳಿಂದ ಹೆಚ್ಚಿನ ಪ್ರಯೋಜನವಿಲ್ಲ. ಇದರ ಜತೆಗೆ ಹೊಸತನ್ನು ಸಾಧಿಸುವ ಛಲವಿರಬೇಕು. ವಿಜಯಪುರ ಜಿಲ್ಲೆಯಲ್ಲಿ ನಾನು ಕೋಟಿ ವೃಕ್ಷ ಅಭಿಯಾನವನ್ನು ಶುರು ಮಾಡಿದ್ದು ಹೀಗೆ. ಈಗ ನಾವು ಐದು ಕೋಟಿ ಗಿಡ ನೆಟ್ಟು, ಪೋಷಿಸಿದ್ದೇವೆ. ಮುಂದಿನ ಹತ್ತು ವರ್ಷಗಳಲ್ಲಿ ಈ ಸಂಖ್ಯೆ ಹತ್ತು ಕೋಟಿ ತಲುಪಲಿದೆ. ಇದರಿಂದಾಗಿ ಬರಪೀಡಿತ ಪ್ರದೇಶದಲ್ಲಿ ಹಸಿರು ಹೊದಿಕೆ ಸೃಷ್ಟಿಯಾಗಿ, ಈಗ ಎಲ್ಲರ ನ ಸೆಳೆಯುತ್ತಿದೆ. ಹಿಂದೆ ನೀರಾವರಿ ಸಚಿವನಾಗಿದ್ದಾಗ ಇದೇ ರೀತಿಯಲ್ಲಿ 3,000ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದೆ’ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಸಂಸ್ಥಾಪಕ ರಾಮಜಿ ರಾಘವನ್, ಟಿ ಎಸ್ ಸುರೇಶ್ ಮತ್ತು ಸಾವಿರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಚಿವರು ಕ್ಯಾಂಪಸ್ಸಿನಲ್ಲಿ ಇರುವ ಅನ್ವೇಷಣಾ ಕೇಂದ್ರ, ಗುರುಗೃಹ ಮತ್ತು ಮಾನವಿಕ ಹಾಗೂ ಮಾಧ್ಯಮ ಕೇಂದ್ರಗಳನ್ನು ವೀಕ್ಷಿಸಿ, ಅಲ್ಲಿಯ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡರು.


