ರಾಜ್ಯದ ದಲಿತ ಸಮುದಾಯದ ಬಹುಕಾಲದ ಬೇಡಿಕೆಯಾದ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ವಿಶೇಷ ಸಚಿವ ಸಂಪುಟ ಸಭೆ ಶುಕ್ರವಾರ ಮಹತ್ವದ ನಿರ್ಣಯ ಕೈಗೊಂಡಿದೆ.
ಎಡಗೈ ಹಾಗೂ ಬಲಗೈ ಸಮುದಾಯಕ್ಕೆ ತಲಾ ಶೇ. 5.25 ರಷ್ಟು ಮೀಸಲಾತಿ ಕಲ್ಪಿಸಲಾಗುವುದು ಮತ್ತು ಇತರರಿಗೆ ಶೇ 4.5 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಎಸ್ ಸಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ತಾಂತ್ರಿಕ ಸಮಿತಿ ಮಾಡಬೇಕೆಂದು ಕಳೆದ ಸಂಪುಟ ಸಭೆಯಲ್ಲಿ ತೀರ್ಮಾನ ಆಗಿತ್ತು. ಆ ಸಮಿತಿ ಶುಕ್ರವಾರ ವರದಿ ನೀಡಿದೆ. ಇದೀಗ ಶೇ. 15 ಪ್ರಮಾಣದಂತೆ ದಲಿತ ಎಡಗೈ ಸಮುದಾಯಕ್ಕೆ 5.3, ಬಲಗೈ ಸಮುದಾಯಕ್ಕೆ 5.3 ಹಾಗೂ ಇತರರಿಗೆ 4.4 ಹಂಚಿಕೆ ಮಾಡುವಂತೆ ವರದಿ ನೀಡಿತ್ತು. ಆದರೆ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದ ಬಳಿಕ ಮೀಸಲಾತಿ ಪ್ರಮಾಣವನ್ನು 5.25, 5.25 ಹಾಗೂ 4.5 ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.


