ಪ್ರಧಾನಿ ನರೇಂದ್ರ ಮೋದಿ ಅವರ ನಾಮಬಲದಿಂದ ಮೈಸೂರು-ಕೊಡಗು ಕ್ಷೇತ್ರದಿಂದ ಎರಡು ಸಲ ಲೋಕಸಭೆಗೆ ಆಯ್ಕೆಯಾಗಿರುವ ಪ್ರತಾಪ್ ಸಿಂಹ ಅವರು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮಾತ್ರ ಶೂನ್ಯ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ ವೆಂಕಟೇಶ್ ಆರೋಪಿಸಿದರು.
ಚಾಮರಾಜನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಕರೆದು ಮಾತನಾಡಿ, “ಡಿಸೆಂಬರ್ ತಿಂಗಳು ಶುರುವಾದ ಬಳಿಕ ಸಂಸದನಿಗೆ ಶನಿಕಾಟ ಶುರುವಾದಂತಿದೆ” ಎಂದರು.
“ನಾನು ಪ್ರತಿನಿಧಿಸುವ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಒಂದೇ ಒಂದು ರಸ್ತೆ ಇದುವರೆಗೆ ಮಾಡಿಸಿಲ್ಲ. ಸುಳ್ಳು ಹೇಳಿಕೊಂಡು ತಿರುಗುವುದು ಬಿಟ್ಟರೆ ಸಂಸದನಿಗೆ ಬೇರೇನೂ ಗೊತ್ತಿಲ್ಲ” ಎಂದು ಕುಟುಕಿದರು.
“ಸಂಸತ್ ಭವನಕ್ಕೆ ಬಣ್ಣದ ಹೊಗೆಯುಗುಳುವ ಕ್ಯಾನಿಸ್ಟರ್‌ಗಳನ್ನು ನುಗ್ಗಿದ ಯುವಕರ ಬಳಿ ಪ್ರತಾಪ್ ಸಿಂಹ ಹೆಸರಲ್ಲಿ ನೀಡಿದ ಪಾಸುಗಳಿದ್ದವು. ಅದಾದ ಮೇಲೆ ಅವರ ಸಹೋದರ ವಿಕ್ರಮ ಸಿಂಹನನ್ನು ಕಾಡಿನ ಮರಗಳನ್ನು ಕಡಿದ ಆರೋಪದಲ್ಲಿ ಬಂಧಿಸಲಾಯಿತು. ಈ ಹಿನ್ನೆಲೆಯಲ್ಲೇ ಕಾಂಗ್ರೆಸ್ ನಾಯಕರ ಟೀಕೆಗೆ ಅವರು ಗುರಿಯಾಗುತ್ತಿದ್ದಾರೆ” ಎಂದು ಹೇಳಿದರು.