Homeಕರ್ನಾಟಕಮನುವಾದಿಗಳು ಸಂವಿಧಾನ ವಿರೋಧಿಗಳಾಗಿದ್ದು, ಸುಳ್ಳು ಹೇಳಿ ಸಮಾಜದ ದಾರಿ ತಪ್ಪಿಸುತ್ತಾರೆ: ಸಿದ್ದರಾಮಯ್ಯ

ಮನುವಾದಿಗಳು ಸಂವಿಧಾನ ವಿರೋಧಿಗಳಾಗಿದ್ದು, ಸುಳ್ಳು ಹೇಳಿ ಸಮಾಜದ ದಾರಿ ತಪ್ಪಿಸುತ್ತಾರೆ: ಸಿದ್ದರಾಮಯ್ಯ

ಮನುವಾದಿಗಳು ಸಂವಿಧಾನ ವಿರೋಧಿಗಳಾಗಿದ್ದು, ಸುಳ್ಳು ಹೇಳಿ ಸಮಾಜದ ದಾರಿ ತಪ್ಪಿಸುತ್ತಾರೆ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿದರು, ದೆಹಲಿಯಲ್ಲಿ ಅಂಬೇಡ್ಕರ್ ಅವರ ಶವ ಸಂಸ್ಕಾರ ಮಾಡಲು ಅವಕಾಶ ನೀಡಲಿಲ್ಲ ಎಂದೂ ಅಪಪ್ರಚಾರ ಮಾಡುತ್ತಾರೆ ಜನ ಇಂಥ ಸುಳ್ಳುಗಳನ್ನು ನಂಬಬಾರದು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಅವರು ಇಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಭಾರತ ರತ್ನ ಮಹಾ ಮಾನವತಾವಾದಿ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಹಾಗೂ ಡಾ.ಬಿ ಆರ್ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

“ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ. ಸಮಾಜಿಕ, ಆರ್ಥಿಕ ಶಕ್ತಿ ಎಲ್ಲರಿಗೂ ದೊರಕಿದಾಗ ಮಾತ್ರ ಸ್ವಾವಲಂಬನೆ ಸಾಧ್ಯ. ಎಲ್ಲ ಸಂಕೋಲೆಗಳಿಂದ ವಿಮುಕ್ತರಾಗಲು ಶಿಕ್ಷಣ ಒಂದೇ ಪ್ರಬಲ ಅಸ್ತ್ರ ಎಂದು ಅಂಬೇಡ್ಕರ್ ಸಾರಿದ್ದರು” ಎಂದರು.

“ಬಾಬಾ ಸಾಹೇಬ್ ಅಂಬೇಡ್ಕರ್ ಅವರು, “ಜಾತಿ ವ್ಯವಸ್ಥೆ ಇರುವವರೆಗೂ ಅಸ್ಪೃಶ್ಯತೆ ಇರುತ್ತದೆ , ಸಮಾಜಿಕ , ಆರ್ಥಿಕ ಅಸಮಾನತೆ ಇರುವವರೆಗೆ ಜಾತೀಯತೆ ಇರಲಿದೆ” ಎಂದು ಸ್ಪಷ್ಟವಾಗಿ ಹೇಳಿದ್ದರು. ಅಂಬೇಡ್ಕರ್ ಅವರು, ಎಲ್ಲ ದಮನಿತರ, ಪರಿಶಿಷ್ಟ ವರ್ಗಗಳ, ಶೋಷಿತರ, ಅವಕಾಶ ವಂಚಿತ ಜನರ ಪರವಾಗಿ ಹೋರಾಟವನ್ನು ತಮ್ಮ ಜೀವನದುದ್ದಕ್ಕೂ ಮಾಡಿದ್ದರು. ಕೇವಲ ದಲಿತರ ನಾಯಕರಾಗಿರದೆ ಅವಕಾಶ ವಂಚಿತರ, ದೌರ್ಜನ್ಯಕ್ಕೆ ಒಳಗಾದ ಎಲ್ಲರ ಪರವಾಗಿ ಹೋರಾಟ ಮಾಡಿದ್ದರು” ಎಂದು ಹೇಳಿದರು.

ಜಗತ್ತಿನ ಶ್ರೇಷ್ಠ ಸಂವಿಧಾನ

“ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನದ ಮೂಲಕ ಎಲ್ಲ ಭಾರತೀಯರಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದ್ದರಿಂದಲೇ ದೇಶದ ಸಂವಿಧಾನವನ್ನು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ” ಎಂದರು.

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನೋವಿನ ಸಂಗತಿ

“ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿದೆ ಇರುವುದು ನೋವಿನ ಸಂಗತಿ ಎಂದ ಮುಖ್ಯಮಂತ್ರಿಗಳು, ಸಮಾಜಿಕ , ಆರ್ಥಿಕ ಅಸಮಾನತೆಯಿರುವ ಈ ಸಮಾಜದಲ್ಲಿ ಇವುಗಳನ್ನು ಹೋಗಲಾಡಿಸದಿದ್ದರೆ ದೇಶಕ್ಕೆ ಸ್ವಾತಂತ್ರ ಬಂದಿರುವುದು ಯಶಸ್ವಿಯಾಗಲಾರದು ಎಂದು ಅಂಬೇಡ್ಕರ್ ಸ್ಪಷ್ಟವಾಗಿ ನಡೆದಿದ್ದರು” ಎಂದು ತಿಳಿಸಿದರು.

ಹಿಂದೂ ಧರ್ಮದ ಸುಧಾರಣೆಗಾಗಿ ಪ್ರಯತ್ನ

“ಅಂಬೇಡ್ಕರ್ ವಿದ್ವಾಂಸರಾಗಿದ್ದರೂ ದಮನಿತರ ಪರವಾಗಿ ಹೋರಾಡಿದರಲ್ಲದೆ, ಹಿಂದೂ ಧರ್ಮದ ಸುಧಾರಣೆಗಾಗಿ ಬಹಳ ಪ್ರಯತ್ನ ಮಾಡಿದರು. ಆದರೆ ಕಡೆಗೆ ಅದು ಕೈಗೂಡದೆ ಹಿಂದೂ ಧರ್ಮವನ್ನು ತ್ಯಜಿಸಿದರು. ಅಸಮಾನತೆಗೆ ಕಾರಣವಾದ ಮನುವಾದವನ್ನು ತಿರಸ್ಕರಿಸಿದ್ದರು” ಎಂದರು.

“ಸಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡಿದ್ದರಿಂದಲೇ ಇಂಥ ಸಂವಿಧಾನ ನೀಡಲು ಅಂಬೇಡ್ಕರ್ ಅವರಿಗೆ ಸಾಧ್ಯವಾಯಿತು. ವೈಜ್ಞಾನಿಕ ಶಿಕ್ಷಣ ದೊರೆಯದಿದ್ದರೆ ಸಮ ಸಮಾಜದ ನಿರ್ಮಾಣ ಅಸಾಧ್ಯ. ಸರ್ಕಾರದ ಗ್ಯಾರಂಟಿ ಯೋಜನೆಗಳು ಸಾಮಾಜಿಕ , ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದು, ಸಮ ಸಮಾಜ ನಿರ್ಮಾಣಕ್ಕೆ ಸರ್ಕಾರ ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನವಾಗಿದೆ” ಎಂದರು.

ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪ, ಕೆ. ಹೆಚ್.ಮುನಿಯಪ್ಪ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕ ರಿಜ್ವಾನ್ ಅರ್ಷದ್, ಮೇಲ್ಮನೆ ಸದಸ್ಯರಾದ ಭೋಜೇಗೌಡ, ಗೋವಿಂದರಾಜು, ಮಾಜಿ ಸಂಸದ ಚಂದ್ರಪ್ಪ, ಮಾಜಿ ಸಚಿವ ಆಂಜನೇಯ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments